ಅನುದಾನಿತ ನೌಕರರ ಕಾಲ್ಪನಿಕ ವೇತನ, ಪಿಂಚಣಿ ಸೌಲಭ್ಯ: ನ್ಯಾಯಾಲಯದ ಆದೇಶ ಕೂಡಲೇ ಪಾಲಿಸಿ– ಶಶೀಲ್ ಜಿ. ನಮೋಶಿ
ಅನುದಾನಿತ ನೌಕರರ ಕಾಲ್ಪನಿಕ ವೇತನ, ಪಿಂಚಣಿ ಸೌಲಭ್ಯ: ನ್ಯಾಯಾಲಯದ ಆದೇಶ ಕೂಡಲೇ ಪಾಲಿಸಿ– ಶಶೀಲ್ ಜಿ. ನಮೋಶಿ
ಕಲಬುರ್ಗಿ: ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಕಾಲ್ಪನಿಕ ವೇತನ ಹಾಗೂ ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ನೀಡಿರುವ ತೀರ್ಪನ್ನು ರಾಜ್ಯ ಸರ್ಕಾರ ಕೂಡಲೇ ಪಾಲಿಸಿ, ಅನುದಾನಿತ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಆಗ್ರಹಿಸಿದರು.
ಕಲಬುರ್ಗಿಯ ಚಾಂದಬೀಬಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಕಾನೂನು ಸಲಹಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ಪಿಂಚಣಿ ಹಾಗೂ ಕಾಲ್ಪನಿಕ ವೇತನಕ್ಕೆ ಸಂಬಂಧಿಸಿದಂತೆ ಸರ್ಕಾರ ಸಲ್ಲಿಸಿದ್ದ ರಿಟ್ ಅಪೀಲು ಸಂಖ್ಯೆ 2476/2015 ಮತ್ತು 2467/2015 ಪ್ರಕರಣಗಳು 2026ರ ಜುಲೈ 24ರಂದು ಇತ್ಯರ್ಥಗೊಂಡಿದ್ದು, ಅನುದಾನಿತ ಸಿಬ್ಬಂದಿಗಳ ಪರವಾಗಿ ಮಹತ್ವದ ತೀರ್ಪು ಬಂದಿದೆ ಎಂದು ನಮೋಶಿ ತಿಳಿಸಿದರು.
“ನ್ಯಾಯಾಲಯದ ತೀರ್ಪು ಬಂದಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ಆದರೆ ತೀರ್ಪಿನ ಮಾಹಿತಿ ಇನ್ನೂ ಸರ್ಕಾರಕ್ಕೆ ತಲುಪಿಲ್ಲ; ಮಾಹಿತಿ ಬಂದ ನಂತರ ಪರಿಶೀಲಿಸಲಾಗುವುದು ಎಂದು ಸರ್ಕಾರ ಸದನದಲ್ಲಿ ಉತ್ತರಿಸಿದೆ. ಹೀಗಾಗಿ ಯಾವುದೇ ವಿಳಂಬ ಮಾಡದೆ ತೀರ್ಪನ್ನು ಪರಿಶೀಲಿಸಿ, ಅನುದಾನಿತ ಸಿಬ್ಬಂದಿಗೆ ನ್ಯಾಯ ಒದಗಿಸಬೇಕು” ಎಂದು ಅವರು ಒತ್ತಾಯಿಸಿದರು.
ಅನುದಾನಿತ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆಯೂ ಇಲ್ಲ, ಹಳೆಯ ಪಿಂಚಣಿ ಸೌಲಭ್ಯವೂ ಇಲ್ಲ. ಇದರಿಂದ ನಿವೃತ್ತಿಯ ನಂತರದ ಜೀವನ ಅತ್ಯಂತ ಕಷ್ಟಕರವಾಗಿದೆ. ಕಾಲ್ಪನಿಕ ವೇತನ ಹಾಗೂ ಇತರ ಸೌಲಭ್ಯಗಳಿಗಾಗಿ ತಾವು ಸದನದ ಒಳಗೂ ಹೊರಗೂ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿರುವುದಾಗಿ ನಮೋಶಿ ಹೇಳಿದರು.
“ಅನುದಾನಿತ ನೌಕರರ ಸಮಸ್ಯೆ ನನಗೆ ತಿಳಿದಿದೆ. ಸರ್ಕಾರ ನ್ಯಾಯಾಲಯದ ನೆಪ ಹೇಳಿಕೊಂಡು ವಿಚಾರವನ್ನು ಮುಂದೂಡುತ್ತಾ ಬಂದಿದೆ. ಇದೀಗ ನ್ಯಾಯಾಲಯದ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಮತ್ತಷ್ಟು ವಿಳಂಬಕ್ಕೆ ಅವಕಾಶ ನೀಡಬಾರದು” ಎಂದು ಅವರು ಹೇಳಿದರು.
ತಮ್ಮ ಸರ್ಕಾರದ ಅವಧಿಯಲ್ಲಿ ಶಾಶ್ವತ ಅನುದಾನ ರಹಿತ ಸಂಸ್ಥೆಗಳಿಗೆ 1987ರಿಂದ 1992ರವರೆಗೆ ಹಾಗೂ 1992ರಿಂದ 1995ರವರೆಗೆ ಅನುದಾನ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊಸ ಸಂಸ್ಥೆಗಳಿಗೆ ಅನುದಾನ ನೀಡುವ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಅವರು ಟೀಕಿಸಿದರು.
“ಒಂದು ವೇಳೆ ಸರ್ಕಾರ ಮತ್ತೆ ವಿಳಂಬ ಮಾಡುವ ಉದ್ದೇಶದಿಂದ ಮೇಲ್ಮನವಿ ಸಲ್ಲಿಸಲು ಮುಂದಾದರೆ, ಅನುದಾನಿತ ನೌಕರರೊಂದಿಗೆ ನಾನೂ ನಿಲ್ಲುತ್ತೇನೆ. ಯಾವುದೇ ರೀತಿಯ ಹೋರಾಟಕ್ಕೂ ನನ್ನ ಸಂಪೂರ್ಣ ಬೆಂಬಲವಿದೆ. ಅನುದಾನಿತ ನೌಕರರಿಗೆ ಪಿಂಚಣಿ ಮತ್ತು ಕಾಲ್ಪನಿಕ ವೇತನ ಸೌಲಭ್ಯ ದೊರೆಯುವವರೆಗೆ ಹೋರಾಟ ನಿಲ್ಲುವುದಿಲ್ಲ” ಎಂದು ಶಶೀಲ್ ಜಿ. ನಮೋಶಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ. ಹನುಮಂತಪ್ಪ, ರಾಜ್ಯ ಸಂಘದ ಕಾನೂನು ಘಟಕದ ಅಧ್ಯಕ್ಷ ಹೆಚ್. ನಾಗರಾಜ, ಕಾರ್ಯಾಧ್ಯಕ್ಷ ಕೃಷ್ಣ ಮಾಗಣಗೇರಿ, ಇಸಾಮುದ್ದಿನ್ ಖಾಜಿ, ಲಕ್ಷ್ಮೀಕಾಂತ, ಐ.ಕೆ. ಪಾಟೀಲ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.

