ಕಲ್ಯಾಣ ಕರ್ನಾಟಕದ ಸಾಹಿತಿಗಳಿಗೆ ನ್ಯಾಯ ಒದಗಿಸಲು ಆದ್ಯತೆ ಬಿ.ಎಚ್ ನಿರಗುಡಿ
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯ ಅಭಿನಂದನಾ ಪತ್ರ
ಕಲ್ಯಾಣ ಕರ್ನಾಟಕದ ಸಾಹಿತಿಗಳಿಗೆ ನ್ಯಾಯ ಒದಗಿಸಲು ಆದ್ಯತೆ ಬಿ.ಎಚ್ ನಿರಗುಡಿ
ಚಿಂಚೋಳಿ:ಕನ್ನಡ ಪುಸ್ತಕ ಪ್ರಾಧಿಕಾರವು ಸಾಹಿತಿ, ಮುದ್ರಕ ಹಾಗೂ ಓದುಗನ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾಧಿಕಾರದ ಇತಿಹಾಸದಲ್ಲಿಯೇ ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳಿಗೆ ಆಗುತ್ತಿದ್ದ ಅನ್ಯಾಯ ಹೋಗಲಾಡಿಸಲು ಶ್ರಮಿಸಿದ್ದೇನೆ ಎಂದು ಹಿರಿಯ ಸಾಹಿತಿ ಹಾಗೂ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ತಿಳಿಸಿದರು.
ಅವರು ಇಲ್ಲಿನ ಚಂದಾಪುರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಿಲ್ಲಾ ಜಾಗೃತ ಸಮಿತಿ ಜಂಟಿಯಾಗಿ ಹಮ್ಮಿಕೊಂಡ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ಗ್ರಂಥಾಲಯ ಹೊಂದಿರುವ ದಂಪತಿಗೆ ಅಭಿನಂದನಾ ಫಲಕ ವಿತರಿಸಿ ಸನ್ಮಾನಿಸಿ ಬುಧವಾರ ಮಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯನಾಗಿ ಕೇವಲ ಕಲಬುರಗಿ ಜಿಲ್ಲೆಗೆ ಸೀಮೀತವಾಗದೇ ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳಿಗೆ ನ್ಯಾಯ ಒದಗಿಸಲು ಆದ್ಯತೆ ನೀಡಿದ್ದೇನೆ. ಅಂತೆಯೇ ಪ್ರಾಧಿಕಾರದ ಸಭೆಯಲ್ಲಿ ನಮ್ಮ ಭಾಗದವರಿಗೆ ಆಗುತ್ತಿದ್ದ ಅನ್ಯಾಯ ಪ್ರತಿಪಾದಿಸಿ, ಪ್ರಶಸ್ತಿಗೆ ಆಯ್ಕೆ, ಪುಸ್ತಕಗಳ ಆಯ್ಕೆ, ಯುವ ಲೇಖಕರ ಪುಸ್ತಕಗಳ ಆಯ್ಕೆ ಮಾಡಿ ಅನ್ಯಾಯ ಸರಿಪಡಿಸಲು ಶ್ರಮಿಸಿದ್ದೇನೆ ಎಂದರು.
ಶಾಲಾ ಕಾಲೇಜುಗಳಿಗೆ ಪುಸ್ತಕಗಳು ನೀಡಲಾಗಿದೆ. ಪ್ರಕಾಶಕರಿಗೆ ಪ್ರಶಸ್ತಿ ಕೊಡಿಸಿದ್ದೇನೆ, ಕಲ್ಯಾಣದ ಸಾಹಿತಿಗಳ ಸಂಪುಟ ರಚನೆಗೆ ಹಕ್ಕೊತ್ತಾಯ ಮಾಡಿದ್ದೇನೆ. ಈಗ ಪ್ರಾಧಿಕಾರದಲ್ಲಿ ಕಲ್ಯಾಣ ಭಾಗದ ಸಾಹಿತಿಗಳಿಗೆ ಮನ್ನಣೆ ಸಿಗುತ್ತಿದೆ ಎಂದು ಬಿ.ಎಚ್ ನಿರಗುಡಿ ವಿವರಿಸಿದರು.
ಪ್ರಾಧಿಕಾರದ ಅಧ್ಯಕ್ಷ ಮಾನಸ ಮೈಸೂರು ಅವರ ಕನಸಿನ ಯೋಜನೆಯಾದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನಗೊಳಿಸಿ ಪುಸ್ತಕ ಸಂಗ್ರಹ ಹವ್ಯಾಸದ ಜತೆಗೆ ಓದುವ ಹವ್ಯಾಸ ಬೆಳೆಸಿಕೊಂಡಿರುವ ಸಾಹಿತಿಗಳಿಗೆ ಸನ್ಮಾನಿಸಿ ಅಭಿನಂದನಾ ಪತ್ರ ನೀಡುವ ಮೂಲಕ ಮನೆಗೊಂದು ಗ್ರಂಥಾಲಯ ಅನುಷ್ಠಾನಗೊಳಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಪ್ರೇಮಿ ಅಶೋಕ ಪಾಟೀಲ ಮಾತನಾಡಿ ಪುಸ್ತಕಗಳು ಓದುಗನ ಆಪ್ತಮಿತ್ರ. ಜ್ಞಾನದ ಖಜಾನೆ ತೆರೆಯಬೇಕಾದರೆ ಕೀಲಿ ಕೈಯಂತೆ ಪುಸ್ತಕಗಳು ಕೆಲಸ ಮಾಡುತ್ತವೆ. ಪುಸ್ತಕಗಳು ಸಾಮಾಜಿಕ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ಹೊಂದಿವೆ. ಅಂತೆಯೇ ಕತ್ತಲು ಓಡಿಸಲು ಜ್ಯೋತಿ ಬಲ ನೀಡುವಂತೆ ಅಜ್ಞಾನ ಓಡಿಸಲು ಜ್ಞಾನದ ಬಲ ಬರಬೇಕಾದರೆ ನಿರಂತರ ಅಧ್ಯಯನ ಅಗತ್ಯ, ಕನ್ನಡ ಪುಸ್ತಕ ಪ್ರಾಧಿಕಾರ ಇಂತಹ ಕಾರ್ಯಕ್ರಮದ ಮೂಲಕ ಪುಸ್ತಕ ಪ್ರೇಮ ವೃದ್ಧಿಗೆ ಮುಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುನೀತಾ ಮಲ್ಲಿಕಾರ್ಜುನ ಪಾಲಾಮೂರ ದಂಪತಿ, ಶಿವಲೀಲಾ ಜಗನ್ನಾಥ ಶೇರಿಕಾರ ದಂಪತಿ, ಗೀತಾರಾಣಿ ಬಸವರಾಜ ಐನೋಳ್ಳಿ, ಚಂದ್ರಕಲಾ ಎಸ್.ಎನ್ ದಂಡಿನಕುಮಾರ ಮತ್ತು ಉತ್ತಮ ದೊಡ್ಮನಿ ಅವರಿಗೆ ಅಭಿನಂದನಾ ಪತ್ರ ವಿತರಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತಿ ರೇವಣಸಿದ್ದಪ್ಪ ದುಕಾನ, ಪ್ರೋ ವಿಜಯಕುಮಾರ ಪರೂತೆ, ಶೋಭಾದೇವಿ ಚೆಕ್ಕಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ಶಂಕರಜಿ ಹೂವಿನ ಹಿಪ್ಪರಗಿ, ರೇವಣಸಿದ್ದಯ್ಯ ನರನಾಳ, ಜ್ಯೋತಿ ಧನರಾಜ ಬೊಮ್ಮಾ, ಶಿವಪ್ರಸಾದ ಪಿಜೆ, ರಾಜಶೇಖರ ಮುಸ್ತಾರಿ, ರಾಜು ಹಿತ್ತಲ್, ಮಾರುತಿ ಗಂಜಗಿರಿ, ಸುರೇಶ ಕೊರವಿ, ಸೂರ್ಯಕಾಂತ ಹುಲಿ, ನಂದಿಕುಮಾರ ಪಾಟೀಲ, ಶ್ರೀಶೈಲ ನಾಗಾವಿ, ಅಂಬರೀಷ, ಮೊದಲಾದವರು ಇದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಹೋಳ್ಕರ್ ಅಧ್ಯಕ್ಷತೆವಹಿಸಿದ್ದರು.
ರೇವಣಸಿದ್ದಯ್ಯ ಹಿರೇಮಠ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಪಾಲಾಮೂರ ಸ್ವಾಗತಿಸಿದರು. ಶೋಭಾದೇವಿ ಚೆಕ್ಕಿ ನಿರೂಪಿಸಿದರು. ಮಂಜುನಾಥ ದುಬಲಗುಂಡಿ ವಂದಿಸಿದರು.

