ಆಧ್ಯಾತ್ಮಿಕ ಚಿಂತನೆಗೆ ಶ್ರಾವಣಮಾಸ ಸೂಕ್ತ : ಸೋಮೇಶ್ವರ ಶಿವಾಚಾರ್ಯರು.
ಆಧ್ಯಾತ್ಮಿಕ ಚಿಂತನೆಗೆ ಶ್ರಾವಣಮಾಸ ಸೂಕ್ತ : ಸೋಮೇಶ್ವರ ಶಿವಾಚಾರ್ಯರು.
ಶಹಪುರ : ಮಾನಸಿಕವಾಗಿ ಶಾಂತಿ ಮತ್ತು ಆತ್ಮ ಶುದ್ಧಿಯ ಜೊತೆಗೆ ದೈವಿಕ ಅನುಗ್ರಹವನ್ನು ಪಡೆಯಲು ಶ್ರಾವಣ ಮಾಸ ಅತ್ಯಂತ ಸೂಕ್ತವಾಗಿದೆ ಎಂದು ನಾಗಠಾಣ ಹಿರೇಮಠದ ಪರಮಪೂಜ್ಯ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸಗರದ ದೇಸಾಯಿ ಮಠ ಆವರಣದಲ್ಲಿ ಆಯೋಜಿಸಿದ ಸಿದ್ರಾಮೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬದುಕಿನ ಜಂಜಾಟದಿಂದ ದೂರ ಸರಿದು ದೇವರ ಸ್ಮರಣೆ ಮಾಡುವುದರಿಂದ ದಿನನಿತ್ಯದ ಒತ್ತಡಗಳು ದೂರಾಗಿ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ನುಡಿದರು.
ದೇಸಾಯಿ ಮಠದ ಪೂಜ್ಯರಾದ ಈಶ್ವರಾಜ ದೇಸಾಯಿಮಠ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ,ಅಧುನಿಕ ಕಾಲಘಟ್ಟದಲ್ಲಿ ನಮ್ಮ ಬದುಕು ಹಾಳು ಮಾಡಿಕೊಳ್ಳುತ್ತಿದ್ದೇವೆ ನಮ್ಮ ಚಂಚಲ ಮನಸ್ಸು ಹತೋಟಿಗೆ ತಂದು ಏಕಾಗ್ರತೆ ಹೆಚ್ಚಿಸಲು ಇದು ಸದಾವಕಾಶ ಎಂದು ನುಡಿದರು.
ನಂತರ ಸಿದ್ರಾಮೇಶ್ವರರ ಕರ್ತೃ ಗದ್ದುಗೆಗೆ ಪವಿತ್ರ ಗಂಗಾಜಲ, ಹಾಲು,ಮೊಸರು,ಜೇನುತುಪ್ಪ, ಸಕ್ಕರೆ ಮತ್ತು ಬಿಲ್ವಪತ್ರೆಗಳು ಸೇರಿದಂತೆ ವಿವಿಧ ಪವಿತ್ರ ಪದಾರ್ಥಗಳಿಂದ ಅತ್ಯಂತ ವಿಜ್ರಂಬಣೆಯಿಂದ ಅಭಿಷೇಕ ನೆರವೇರಿತು.ಈ ಪೂಜಾ ಸಮಾರಂಭದಲ್ಲಿ ಸಗರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

