ಪಟ್ಟಣ ಜಿ.ಪಂ. ಕ್ಷೇತ್ರವನ್ನು ಎಸ್‌ಸಿ ಮೀಸಲಾತಿಗೆ ಒಳಪಡಿಸಲು ಆಗ್ರಹ

ಪಟ್ಟಣ ಜಿ.ಪಂ. ಕ್ಷೇತ್ರವನ್ನು ಎಸ್‌ಸಿ ಮೀಸಲಾತಿಗೆ ಒಳಪಡಿಸಲು ಆಗ್ರಹ

ಪಟ್ಟಣ ಜಿ.ಪಂ. ಕ್ಷೇತ್ರವನ್ನು ಎಸ್‌ಸಿ ಮೀಸಲಾತಿಗೆ ಒಳಪಡಿಸಲು ಆಗ್ರಹ

ಕಲಬುರಗಿ ದಕ್ಷಿಣ ಕ್ಷೇತ್ರದ ಪಟ್ಟಣ ಕ್ರಾಸ್ ಬಳಿ ಪ್ರತಿಭಟನೆ 

ಕಲಬುರಗಿ: ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಟ್ಟಣ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗೆ (ಎಸ್‌ಸಿ) ಮೀಸಲಿಡಬೇಕು ಎಂದು ಆಗ್ರಹಿಸಿ, ಕಲಬುರಗಿ ದಕ್ಷಿಣ ವಿಧಾನಸಭಾ ಎಸ್‌ಸಿ ಮೀಸಲಾತಿ ವಂಚಿತ ಪಟ್ಟಣ ವಲಯ ವೇದಿಕೆಯ ಪದಾಧಿಕಾರಿಗಳು ಪಟ್ಟಣ ಕ್ರಾಸ್ ಬಳಿ ಪ್ರತಿಭಟನೆ ನಡೆಸಿ, ರಸ್ತೆ ತಡೆಗೆ ಮುಂದಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಹಶೀಲ್ದಾರ್ ಮೂಲಕ ಸಲ್ಲಿಸಿದ ಮನವಿಯಲ್ಲಿ, ಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಳೆದ ೩೬ ವರ್ಷಗಳ ಮೀಸಲಾತಿ ಇತಿಹಾಸವನ್ನು ಉಲ್ಲೇಖಿಸಿ, ಇದುವರೆಗೆ ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

೧೯೯೩ರಿಂದ ೧೯೯೮ರವರೆಗೆ ಹಿಂದುಳಿದ ವರ್ಗಗಳ (ಬಿಸಿಎ) ಮಹಿಳೆಯರಿಗೆ, ೧೯೯೮ರಿಂದ ೨೦೦೪ರವರೆಗೆ ಸಾಮಾನ್ಯ ವರ್ಗಕ್ಕೆ, ೨೦೦೪ರಿಂದ ೨೦೧೦ರವರೆಗೆ ಹಿಂದುಳಿದ ವರ್ಗಕ್ಕೆ, ೨೦೧೦ರಿಂದ ೨೦೧೫ರವರೆಗೆ ಸಾಮಾನ್ಯ ಮಹಿಳೆಯರಿಗೆ ಹಾಗೂ ೨೦೧೬ರಿಂದ ೨೦೨೧ರವರೆಗೆ ಹಿಂದುಳಿದ ವರ್ಗ ಬ ಮೀಸಲಾತಿ ಕಲ್ಪಿಸಲಾಗಿತ್ತು. ೨೦೨೬ರ ಮೀಸಲಾತಿಯೂ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಸುಮಾರು ೧೩ರಿಂದ ೧೪ ಸಾವಿರ ಜನರು ಸೇರಿದಂತೆ ಅಹಿಂದ ಹಾಗೂ ಬಹುಜನ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಆದರೂ, ಈ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿಯ ಮೀಸಲಾತಿ ಕಲ್ಪಿಸದಿರುವುದರಿಂದ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಸಮುದಾಯಕ್ಕೂ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆಯುವುದು ಅಗತ್ಯ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆ, ಹಿತಾಸಕ್ತಿ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಪರಿಗಣಿಸಿ ಮೀಸಲಾತಿ ನಿಗದಿಪಡಿಸಬೇಕು. ದೀರ್ಘಕಾಲದಿಂದ ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸದಿರುವ ಹಿನ್ನೆಲೆಯಲ್ಲಿ, ಹಿಂದಿನ ಮೀಸಲಾತಿ ಇತಿಹಾಸವನ್ನು ಸಮಗ್ರವಾಗಿ ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು, ಗೃಹ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ.

ಪಟ್ಟಣ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಯನ್ನು ಮರುಪರಿಶೀಲಿಸಿ, ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ವೇದಿಕೆಯ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಶರಣಬಸಪ್ಪ ಎಸ್. ದೊಡ್ಡಮನಿ, ನಾಗರಾಜ ಖಂಡೋಜಿ, ಗುಂಡಪ್ಪ ಲಂಡನಕರ್, ಅನಿಲಕುಮಾರ ಡಾಂಗೆ, ಈರಣ್ಣ ಡಬ್ಬಕಿ ಸಂಜುಕುಮಾರ ಜವರಕರ, ಚಂದ್ರಕಾoತ ವಾಲಿ, ಪರಮೇಶ್ವರ ಶೀಲ್ಡ್ , ಪಂಡಿತ ಸಾವಳಗಿ, ಧರ್ಮಣ್ಣ ಪಟ್ಟಣಕರ, ಬಸಯ್ಯ ಗುತ್ತೇದಾರ, ಶರಣಪ್ಪ ಶಿಂಗೆ, ಓಂಕಾರ ವಠಾರ, ಸೈದಪ್ಪ ಡಾಂಗೆ, ಶರಣಬಸಪ್ಪ ಕುಕಮಕರ, ಯುನುಸ್ ಭೀಮಳಿ, ಶರಣಪ್ಪ ಸಿಂಗೆ, ರಾಹುಲ್ ಡಂಗೆ, ಅರುಣ ಹತಗುಂದಿ, ವಿಠಲ್ ಬಚ್ಚನಾಳ, ಸೋಮಲಿಂಗ ಸಾವಳಗಿ, ಬಾಬುರಾವ ಪಟ್ಟಣ ಸೇರಿದಂತೆ ಇತರರು ಇದ್ದರು.