ಗ್ರಾಮೀಣ ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಎನ್‌ಎಸ್‌ಎಸ್‌ ಸ್ವಯಂಸೇವಕರು ಮುಂದಾಗಲಿ

ಗ್ರಾಮೀಣ ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಎನ್‌ಎಸ್‌ಎಸ್‌ ಸ್ವಯಂಸೇವಕರು ಮುಂದಾಗಲಿ

ಗ್ರಾಮೀಣ ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಎನ್‌ಎಸ್‌ಎಸ್‌ ಸ್ವಯಂಸೇವಕರು ಮುಂದಾಗಲಿ

ಕಲಬುರಗಿ: ಎನ್‌ಎಸ್‌ಎಸ್‌ ಸ್ವಯಂಸೇವಕರು ಗ್ರಾಮೀಣ ಪ್ರದೇಶದ ಜನರಲ್ಲಿ ಶಿಕ್ಷಣ, ಕೃಷಿ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸುವುದರ ಜತೆಗೆ ಸಾಮಾಜಿಕ ಮೌಢ್ಯಗಳ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಜಿಲ್ಲಾ ಉಪನಿರ್ದೇಶಕ ದೇವನಗೌಡ ಪಾಟೀಲ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸೇವಾ ಮನೋಭಾವವನ್ನೂ ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎನ್‌ಎಸ್‌ಎಸ್‌ನ ನಿಕಟಪೂರ್ವ ವಿಭಾಗೀಯ ಅಧಿಕಾರಿ ಡಾ. ಚಂದ್ರಶೇಖರ ದೊಡ್ಡಮನಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಸರ್ವೋದಯ ಸಮಾಜ ನಿರ್ಮಾಣದ ಧ್ಯೇಯದೊಂದಿಗೆ ಭಾರತ ಸರ್ಕಾರವು 1969ರ ಸೆಪ್ಟೆಂಬರ್ 24ರಂದು ರಾಷ್ಟ್ರೀಯ ಸೇವಾ ಯೋಜನೆಯನ್ನು ಸ್ಥಾಪಿಸಿತು. ಇಂದು ದೇಶದಲ್ಲಿ 45 ಲಕ್ಷ ಸ್ವಯಂಸೇವಕರನ್ನು ಹೊಂದಿರುವ ಎನ್‌ಎಸ್‌ಎಸ್‌, ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದರು.

ಏಳು ದಿನಗಳ ವಿಶೇಷ ಶಿಬಿರವು ವಿದ್ಯಾರ್ಥಿಗಳನ್ನು ಸಮಾಜಮುಖಿ ವ್ಯಕ್ತಿಗಳನ್ನಾಗಿ ರೂಪಿಸುವುದರ ಜತೆಗೆ ಸಾಂಸ್ಕೃತಿಕ ರಾಯಭಾರಿಗಳನ್ನಾಗಿ ಬೆಳೆಸುವ ಜವಾಬ್ದಾರಿ ಹೊಂದಿದೆ. ಬುದ್ಧನ ಚಿಂತನೆಯಂತೆ ಉತ್ತಮ ಆಲೋಚನೆ, ಉತ್ತಮ ಆರೋಗ್ಯ, ಉತ್ತಮ ಆಹಾರ, ಉತ್ತಮ ಆರ್ಥಿಕತೆ ಹಾಗೂ ಉತ್ತಮ ಆನಂದದೊಂದಿಗೆ ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಉಪನ್ಯಾಸಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಗೌಡ ಪಾಟೀಲ ಹಾಗೂ ಎನ್‌ಎಸ್‌ಎಸ್‌ ಜಿಲ್ಲಾ ನೋಡಲ್ ಅಧಿಕಾರಿ ಸಂತೋಷ್ ಹೊಸಮನಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಯದ್ ಇರ್ಫಾನ್ ವಹಿಸಿದ್ದರು.

ಉಪನ್ಯಾಸಕರ ಸಂಘದ ಜಿಲ್ಲಾ ಖಜಾಂಚಿ ನಾಗರಾಜ ಮೈಲ್ವಾರ, ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿಗಳಾದ ಶಾಂತಾ ಮಾಲಿ ಪಾಟೀಲ, ಸುಧಾ ಪಾಟೀಲ, ನಾಗರತ್ನ ಇಂಡೆ, ಭೀಮಯ್ಯ, ಶರೀಫ್ ಎಂ.ಎಫ್., ಸಂಜೀವಕುಮಾರ ಫಿರಂಗಿ, ಇಕ್ಬಾಲ್ ಅಹಮದ್, ಜಟ್ಟಿಂಗರಾಯ ಶಾಖಾಪುರ, ಶೀಲಾದೇವಿ, ವರ್ಷಾ ಸೇರಿದಂತೆ ಎನ್‌ಎಸ್‌ಎಸ್‌ ಸ್ವಯಂಸೇವಕರು ಉಪಸ್ಥಿತರಿದ್ದರು.