ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ರಚನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಒತ್ತಾಯ- ಜೇ ಎಸ್ ವಿನೋದ

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ರಚನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಒತ್ತಾಯ- ಜೇ ಎಸ್ ವಿನೋದ

 ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ರಚನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಒತ್ತಾಯ- ಜೇ ಎಸ್ ವಿನೋದ

ರಾಜ್ಯದ ವಿಶೇಷ ಅಧಿವೇಶನದಲ್ಲೇ ನಿರ್ಣಯ ಕೈಗೊಳ್ಳುವಂತೆ ಹೋರಾಟ ಸಮಿತಿಯ ಆಗ್ರಹ

ಬೆಂಗಳೂರು: ಫೆಬ್ರವರಿ 2ರಿಂದ 4ರವರೆಗೆ ನಡೆಯುತ್ತಿರುವ ರಾಜ್ಯ ಸರ್ಕಾರದ ವಿಶೇಷ ಅಧಿವೇಶನದಲ್ಲೇ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ರಚನೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗಾಗಿ ಹೋರಾಟ ಸಮಿತಿ ಆಗ್ರಹಿಸಿದೆ.

ಹೋರಾಟ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿಗಳು ಹಾಗೂ ಹಿರಿಯ ನ್ಯಾಯವಾದಿಗಳಾದ ಜೆ. ಎಸ್. ವಿನೋದಕುಮಾರರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಕಲ್ಯಾಣ ಕರ್ನಾಟಕ ಭಾಗವನ್ನು ಪ್ರತಿನಿಧಿಸುವ 49 ಶಾಸಕರು ಪಕ್ಷಬೇಧ ಮರೆತು ಒಗ್ಗೂಡಿ ರಾಜ್ಯ ಸರ್ಕಾರದ ಮೇಲೆ ಒತ್ತಾಯಿಸಬೇಕು ಎಂದು ಮನವಿ ಮಾಡಿದರು.

ದಿ. 01-02-2026ರಂದು ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ವಿಮಾನ ನಿಲ್ದಾಣಕ್ಕೆ ತೆರಳಿದರೂ ಅವಕಾಶ ದೊರೆಯದ ಕಾರಣ ನಿರಾಸೆಯಾಗಿ, ನಂತರ ಪತ್ರಿಕಾ ವರದಿಗಾರರಿಗೆ ತಮ್ಮ ಬೇಡಿಕೆಯನ್ನು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗವು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಯುವಜನರಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಐಟಿ ಕ್ಷೇತ್ರದ ಕೊರತೆ, ಮೂಲಸೌಕರ್ಯಗಳ ಅಭಾವ ಹಾಗೂ ನಿರಂತರ ತಾರತಮ್ಯದ ನೀತಿಯ ಪರಿಣಾಮವಾಗಿ ಈ ಪ್ರದೇಶ ಅನ್ಯಾಯಕ್ಕೆ ಒಳಗಾಗುತ್ತಿದೆ ಎಂದು ಅವರು ಹೇಳಿದರು. ಈ ಕುರಿತು ಈಗಾಗಲೇ ಪ್ರೊ. ಗೋವಿಂದರಾವ್ ವರದಿ ಕೂಡ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

ಸಂವಿಧಾನ ಕರಡು ರಚನೆಯ ಮಾದರಿಯಲ್ಲಿ ಏಳು ಸದಸ್ಯರನ್ನೊಳಗೊಂಡ ತಜ್ಞರು ಮತ್ತು ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿ, ತ್ವರಿತ ವರದಿ ಪಡೆದು ರಾಜ್ಯ ಪುನರ್‌ರಚನೆಗೆ ಶಿಫಾರಸ್ಸು ಮಾಡಬೇಕು ಎಂಬುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ ಎಂದು ಜೆ. ಎಸ್. ವಿನೋದಕುಮಾರ ಅಭಿಪ್ರಾಯಪಟ್ಟರು.

ಕಲ್ಯಾಣ ಕರ್ನಾಟಕ ಭಾಗದ ಕನ್ನಡ ವಚನ ಸಾಹಿತ್ಯ, ನೈಜ ಇತಿಹಾಸ ಮತ್ತು ಜನರ ಅಸ್ಮಿತೆ ಆಧಾರವಾಗಿಟ್ಟುಕೊಂಡು ಸಂವಿಧಾನದ ಒಳಗಿನ ಅಂಶಗಳನ್ನು ಬಳಸಿ ಹೊಸ ರಾಜ್ಯ ರಚನೆಗೆ ಮುಂದಾಗಬೇಕು ಎಂದರು. ಅಗತ್ಯವಿದ್ದರೆ ಅಕ್ಕಪಕ್ಕದ ರಾಜ್ಯಗಳ ಕೆಲ ಭೂ ಪ್ರದೇಶಗಳನ್ನು ಒಳಪಡಿಸುವ ಕುರಿತು ತಜ್ಞರ ಸಮಿತಿಯ ಸ್ಪಷ್ಟ ಸಲಹೆ ಪಡೆದು ಸೂಕ್ತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕೆಂದು ಒತ್ತಾಯಿಸಿದರು.

ಈ ವಿಷಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಮತ್ತು ಸಂಸದರು ಪಕ್ಷಬೇಧ ಮರೆತು ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಅವರು ಆಗ್ರಹಿಸಿದರು. ಜೊತೆಗೆ, ಪ್ರಸ್ತುತ ಆರಂಭಗೊಂಡಿರುವ ಕೇಂದ್ರ ಅಧಿವೇಶನದಲ್ಲಿ ಈ ಭಾಗದ ನೈಜ ಪ್ರತಿನಿಧಿಗಳು ನಿಯೋಗವಾಗಿ ತೆರಳಿ ಜನರ ಅಸ್ಮಿತೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಕೋರಿದರು.