ಎರಡನೇ ದಿನದ ಅಜ್ಜನ ಪ್ರವಚನ: ಸುಖ-ಸಂತೋಷ ಇರುವುದು ಹೊರಗಿನ ವಸ್ತುಗಳಲ್ಲಲ್ಲ, ನಮ್ಮ ಅಂತರಂಗದಲ್ಲೇ ಇದೆ – ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ
ಎರಡನೇ ದಿನದ ಅಜ್ಜನ ಪ್ರವಚನ: ಸುಖ-ಸಂತೋಷ ಇರುವುದು ಹೊರಗಿನ ವಸ್ತುಗಳಲ್ಲಲ್ಲ, ನಮ್ಮ ಅಂತರಂಗದಲ್ಲೇ ಇದೆ – ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ
ರೋಣ (ಗದಗ ಜಿಲ್ಲೆ), ನ. 29:
ಮನುಷ್ಯನ ನಿಜವಾದ ಹುಡುಕಾಟ ಇರುವುದು ಸಂಪತ್ತಿನ ಪ್ರಾಪ್ತಿಗಾಗಿ ಅಲ್ಲ, ಬದಲಾಗಿ ಸುಖ ಶಾಂತಿ ಮತ್ತು ಸಂತೋಷದ ಪ್ರಾಪ್ತಿಗಾಗಿ. ಆದರೆ ಆ ಸಂತೋಷವನ್ನು ತನ್ನೊಳಗೆ ಹುಡುಕುವ ಬದಲು ಹೊರಗಿನ ಭೌತಿಕ ವಸ್ತುಗಳಲ್ಲಿ ಹುಡುಕುತ್ತಿರುವುದರಿಂದಲೇ ಇಂದು ಮನುಷ್ಯನಿಗೆ ನೆಮ್ಮದಿ ಸಿಗುತ್ತಿಲ್ಲ. ಸುಖ ಅನ್ನೋದು ಹೊರಗಿಲ್ಲ, ಅದು ನಮ್ಮ ಅಂತರಂಗದಲ್ಲೇ ಅಡಗಿದೆ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು" ಎಂದು ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ನುಡಿದರು.
ರೋಣ ನಗರದ ತಹಶೀಲ್ದಾರ್ ಕಚೇರಿ ಹಿಂಭಾಗದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ 9 ದಿನಗಳ ಅಧ್ಯಾತ್ಮ ಪ್ರವಚನ ಹಾಗೂ ಸದ್ಭಾವನಾ ಪಾದಯಾತ್ರೆಯ ಎರಡನೇ ದಿನವಾದ ಭಾನುವಾರ (ನ. 29) ಸಂಜೆ ಕಿಕ್ಕಿರಿದು ಸೇರಿದ್ದ ಸಹಸ್ರಾರು ಭಕ್ತಸಾಗರವನ್ನುದ್ದೇಶಿಸಿ ಪೂಜ್ಯ ಅಜ್ಜನವರು ಅಮೃತವಾಣಿಯ ಪ್ರವಚನ ನೀಡಿದರು.
ಪ್ರವಚನದ ಆರಂಭದಲ್ಲಿ ಕಾತ್ಯಾಯನಿ ಮತ್ತು ಮೈತ್ರೇಯಿಯವರ ಪ್ರಸಂಗವನ್ನು ಉಲ್ಲೇಖಿಸಿದ ಶ್ರೀಗಳು, ಮಹರ್ಷಿ ಯಾಜ್ಞವಲ್ಕ್ಯರು ಸನ್ಯಾಸ ಸ್ವೀಕರಿಸಲು ಹೊರಟಾಗ, ಮೈತ್ರೇಯಿಯು ಇಷ್ಟೆಲ್ಲಾ ಸಂಪತ್ತಿದ್ದರೂ ಅದನ್ನು ಬಿಟ್ಟು ಏನನ್ನು ಹುಡುಕಲು ಹೊರಟಿದ್ದೀರೋ, ನನಗೂ ಅದೇ ಬೇಕು ಎಂದು ಕೇಳುತ್ತಾಳೆ. ಮನುಷ್ಯ ಮಾಡುವ ಪ್ರತಿಯೊಂದು ಕೆಲಸವೂ ಸುಖದ ಅಪೇಕ್ಷೆಗಾಗಿಯೇ ಇರುತ್ತದೆ. ಸುಖ ಸಿಗುತ್ತದೆ ಎಂದರೆ ಮಾತ್ರ ಆ ಕೆಲಸ ಮಾಡುತ್ತಾನೆ, ಸುಖವಿಲ್ಲ ಎಂದಾಕ್ಷಣ ಅದರಿಂದ ದೂರ ಸರಿಯುತ್ತಾನೆ. ಹೊಸದಾಗಿ ಎರಡು ಅಂತಸ್ತಿನ ಮನೆ ಕಟ್ಟಿಸಿದರೂ, ಅದರಲ್ಲಿ ವಾಸಿಸಿದರೆ ಪ್ರಾಣಕ್ಕೆ ಕಂಟಕವಿದೆ ಎಂದರೆ ತಕ್ಷಣವೇ ಆ ಮನೆಯನ್ನು ಬಿಟ್ಟುಬಿಡುತ್ತಾನೆ ಎಂದು ಮಾರ್ಮಿಕವಾಗಿ ವಿವರಿಸಿದರು.
ವಸ್ತುಗಳಲ್ಲೇ ಸುಖವಿದೆ ಎಂಬುದು ನಮ್ಮ ಭ್ರಮೆ. ನಾವು ಗಾಢ ನಿದ್ರೆಗೆ ಜಾರಿದಾಗ ನಮ್ಮ ಅಧಿಕಾರ, ಹೆಂಡತಿ, ಮಕ್ಕಳು, ಬಂಗಾರ, ಬ್ಯಾಂಕ್ನಲ್ಲಿಟ್ಟ ಎಫ್ಡಿ ಹಣ ಯಾವುದೂ ನೆನಪಿರುವುದಿಲ್ಲ. ಆದರೂ ಎಚ್ಚರವಾದ ಮೇಲೆ ಸುಖವಾಗಿ ನಿದ್ರೆ ಆಯ್ತು ಎನ್ನುತ್ತೇವೆ. ವಸ್ತುಗಳಿಲ್ಲದೆಯೂ ಮನುಷ್ಯ ಸುಖವಾಗಿ ಬದುಕಬಲ್ಲ ಎಂಬುದಕ್ಕೆ ನಮ್ಮ ಗಾಢ ನಿದ್ರೆಯೇ ತಾಜಾ ಉದಾಹರಣೆ ಎಂದರು.
ಸುಖ ನಮ್ಮೊಳಗೇ ಇದೆ ಎಂಬುದನ್ನು ದೃಷ್ಟಾಂತವೊಂದರ ಮೂಲಕ ವಿವರಿಸಿದ ಶ್ರೀಗಳು, ಹಿಂದಿನ ಕಾಲದಲ್ಲಿ ಮುತ್ತು-ರತ್ನ, ವಜ್ರ-ವೈಢೂರ್ಯಗಳನ್ನು ಮಾರಿ ಹಣದ ಗಂಟಿನೊಂದಿಗೆ ಕಾಡಿನ ದಾರಿಯಲ್ಲಿ ಸಾಗುತ್ತಿದ್ದ ವ್ಯಾಪಾರಿಯೊಬ್ಬನನ್ನು ಕಳ್ಳನೊಬ್ಬ ಹಿಂಬಾಲಿಸುತ್ತಾನೆ. ರಾತ್ರಿ ಊರಿನ ಗುಡಿಯೊಂದರಲ್ಲಿ ವ್ಯಾಪಾರಿ ಮಲಗಿದಾಗ, ಅವನ ಗಂಟನ್ನು ಕದಿಯಲು ಕಳ್ಳ ರಾತ್ರಿಯಿಡೀ ಗುಡಿಯ ಸುತ್ತಮುತ್ತ, ಮಾಡು, ಗಿಡದಲ್ಲೆಲ್ಲಾ ಹುಡುಕಿದರೂ ಗಂಟು ಸಿಗುವುದಿಲ್ಲ. ಬೆಳಿಗ್ಗೆ ಕಳ್ಳನೇ ಸತ್ಯ ಒಪ್ಪಿಕೊಂಡು ರಾತ್ರಿಯೆಲ್ಲಾ ಹುಡುಕಿದರೂ ನಿನ್ನ ಗಂಟು ಎಲ್ಲಿತ್ತು? ಎಂದು ಕೇಳಿದಾಗ, ವ್ಯಾಪಾರಿಯು ನನ್ನ ಗಂಟನ್ನು ನಿನ್ನ ತಲೆದಿಂಬಿನ ಕೆಳಗೇ ಇಟ್ಟಿದ್ದೆ ಎನ್ನುತ್ತಾನೆ. ಹಾಗೆಯೇ ಸಂತೋಷದ ಗಂಟು ನಮ್ಮೊಳಗೇ ಇದ್ದರೂ, ನಾವು ಅದನ್ನು ಹೊರಗಡೆ ಹುಡುಕುತ್ತಾ ನಿರಾಸೆಗೊಳಗಾಗುತ್ತಿದ್ದೇವೆ ಎಂದು ತಿಳಿಸಿದರು. ಸಂಸಾರ ಮದುವೆ ಮಾವನ ಮನೆ ಹಾಗೂ ಊಟಿ-ಡಾರ್ಜೀಲಿಂಗ್ ಪ್ರವಾಸದ ಹಾಸ್ಯಭರಿತ ಪ್ರಸಂಗಗಳ ಮೂಲಕ ಜೀವನದ ವಾಸ್ತವ ಸತ್ಯವನ್ನು ಬಿಡಿಸಿಟ್ಟರು.
ಸಾಮಾನ್ಯ ಜನರಿಗೆ ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಲು ಸಾಧ್ಯವಿಲ್ಲ. ಹಾಗಾದರೆ ಸಂಸಾರದಲ್ಲಿದ್ದುಕೊಂಡೇ ಸುಖ ಪಡೆಯುವುದು ಹೇಗೆ? ಏಪ್ರಿಲ್ ತಿಂಗಳ ಬಿರುಬಿಸಿಲಿನಲ್ಲಿ ದಾಹಗೊಂಡ ಪ್ರಯಾಣಿಕನಿಗೆ ದಾರಿಯಲ್ಲಿ ಸಿಹಿಯಾದ ತಿಳಿನೀರಿನ ಬಾವಿ ಕಾಣಿಸಿದರೂ, ಆ ಆಳದ ನೀರನ್ನು ಕುಡಿಯಲು ಮೆಟ್ಟಿಲುಗಳ ಅವಶ್ಯಕತೆ ಇರುತ್ತದೆ. ಮೆಟ್ಟಿಲು ಇಳಿದು ನೀರು ಕುಡಿದಾಗ ಮಾತ್ರ ದಾಹ ಇಂಗಿ ತಂಪು ಸಮಾಧಾನ ಸಿಗುತ್ತದೆ. ಅದೇ ರೀತಿ ಸಂಸಾರದ ತಾಪದಿಂದ ಬಳಲುತ್ತಿರುವ ಮನುಷ್ಯನ ಅಂತಃಕರಣವೇ (ಮನಸ್ಸೇ) ಒಂದು ಬಾವಿ. ಅದರ ಆಳದಲ್ಲಿ ಸಂತೋಷದ ಜಲವಿದೆ. ಆ ಅಂತಃಕರಣದೊಳಗೆ ಇಳಿಯಲು ಶರಣರ ಮತ್ತು ಸಂತರ ವಚನಗಳೇ ಮೆಟ್ಟಿಲುಗಳು. ಆ ವಚನಗಳ ಮೆಟ್ಟಿಲುಗಳನ್ನು ಹಿಡಿದು ಒಳಗಿಳಿದಾಗ ಮಾತ್ರ ನಿಜವಾದ ನೆಮ್ಮದಿ ಸಿಗುತ್ತದೆ ಎಂದು ಮಾರ್ಗದರ್ಶನ ನೀಡಿದರು.
ಗೌತಮ ಬುದ್ಧ ಮತ್ತು ಶಿಷ್ಯ ಆನಂದನ ಸಂವಾದವನ್ನು ಸ್ಮರಿಸಿದ ಶ್ರೀಗಳು, ಬುದ್ಧನ ಧರ್ಮವನ್ನು ಸ್ವೀಕರಿಸಲು ಬರುವವರಿಗೆ ಬುದ್ಧ ನೀನು ಯಾರು? ಎಂದು ಕೇಳುತ್ತಾನೆ. ನಾನು ಉತ್ತಮ ಕುಲದವನು ಎಂದು ಬಂದವನಿಗೂ, ಸಮಾಜ ಹೇಳುವ ಕನಿಷ್ಠ ಕುಲದವನು ಎಂದು ಬಂದವನಿಗೂ ಬುದ್ಧ ತನ್ನ ಧರ್ಮದಲ್ಲಿ ಸ್ಥಳ ನೀಡುವುದಿಲ್ಲ. ಕೊನೆಗೆ ಓಡೋಡಿ ಬಂದ ಹಳ್ಳಿಯ ವ್ಯಕ್ತಿಯೊಬ್ಬ ಗುರುವೇ ನಿನ್ನ ಹುಡುಕಾಟದಲ್ಲಿ ನಾನು ಯಾರು ಎಂಬುದನ್ನೇ ಮರೆತುಬಿಟ್ಟಿದ್ದೇನೆ, ನನ್ನ ತಲೆಯಲ್ಲಿ ಅದಾವುದೂ ಇಲ್ಲ ಎಂದಾಗ ಬುದ್ಧ ಅವನನ್ನು ಸ್ವೀಕರಿಸುತ್ತಾನೆ. ನಿರ್ವಾಣ ಅಥವಾ ಮುಕ್ತಿ ಎಂದರೆ ತಲೆಯಲ್ಲಿ ಏನನ್ನೋ ತುಂಬಿಕೊಂಡು ಬರುವುದಲ್ಲ ನಾನು ಎಂಬ ಅಹಂಕಾರ, ಜಾತಿ-ಕುಲದ ಹಂಗನ್ನು ತಲೆಯಿಂದ ತೆಗೆದುಹಾಕಿ ಒಂದು ಕ್ಷಣ ಎಲ್ಲವನ್ನೂ ಮರೆತು ನಿರಾಳವಾಗಿ ಕೂರುವುದೇ ನಿಜವಾದ ಮುಕ್ತಿ ಮತ್ತು ನಿರ್ವಾಣದ ಕ್ಷಣ ಎಂದು ಶ್ರೀಗಳು ಆಶೀರ್ವಚನ ನೀಡಿದರು.
ರೋಣ ನಗರದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಎರಡನೇ ದಿನದ ಅಜ್ಜನ ಅಧ್ಯಾತ್ಮ ಪ್ರವಚನ ಕಾರ್ಯಕ್ರಮದಲ್ಲಿ ಕೊಪ್ಪಳ ಶ್ರೀ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಸಹಸ್ರಾರು ಭಕ್ತರು ಪ್ರವಚನ ಆಲಿಸಿದರು.
*ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ*

