ವಕೀಲ ವೃತ್ತಿಯಲ್ಲಿ ೨೫ ವರ್ಷ ಪೂರೈಸಿದ ಬಂಜಾರ ಸಮುದಾಯದ ನ್ಯಾಯವಾದಿಗಳಿಗೆ ಸನ್ಮಾನ
ವಕೀಲ ವೃತ್ತಿಯಲ್ಲಿ ೨೫ ವರ್ಷ ಪೂರೈಸಿದ ಬಂಜಾರ ಸಮುದಾಯದ ನ್ಯಾಯವಾದಿಗಳಿಗೆ ಸನ್ಮಾನ
ಕಲಬುರಗಿ: ಕಲಬುರಗಿ ಜಿಲ್ಲಾ ಬಂಜಾರ (ಲಂಬಾಣಿ) ಸೇವಾ ಸಂಘ ಹಾಗೂ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ, ಬೆಂಗಳೂರು ಇವರ ಸ್ವಾಮ್ಯದಲ್ಲಿ ಜಿಲ್ಲಾ ನ್ಯಾಯವಾದಿಗಳ ಘಟಕದ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಂಜಾರ ಸಮುದಾಯದ ನ್ಯಾಯವಾದಿಗಳ ಸನ್ಮಾನ ಹಾಗೂ ಕಿರಿಯ ನ್ಯಾಯವಾದಿಗಳ ಸ್ವಾಗತ ಸಮಾರಂಭ ಭಾನುವಾರ ನಗರದ ಐವಾನ್-ಇ-ಶಾಹಿ ರಸ್ತೆಯಲ್ಲಿರುವ ಜಿಲ್ಲಾ ಬಂಜಾರ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಬೀದರ್ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ವೆಂಕಟೇಶ ನಾಯ್ಕ ಟಿ. ಉದ್ಘಾಟಿಸಿ ಮಾತನಾಡಿ, ವಕೀಲ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸಮಾಜಕ್ಕೆ ನ್ಯಾಯ ಒದಗಿಸುವ ಮಹತ್ವದ ಜವಾಬ್ದಾರಿಯಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಮೂಲಕ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನ್ಯಾಯವಾದಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ವಕೀಲ ವೃತ್ತಿಯಲ್ಲಿ ೨೫ ವರ್ಷಗಳ ಸೇವೆ ಸಲ್ಲಿಸಿರುವ ಹಿರಿಯ ನ್ಯಾಯವಾದಿಗಳ ಅನುಭವ, ಕಿರಿಯ ವಕೀಲರಿಗೆ ಮಾರ್ಗದರ್ಶನವಾಗಬೇಕು ಎಂದು ಹೇಳಿದರು.
ಕಿರಿಯ ನ್ಯಾಯವಾದಿಗಳು ಹಿರಿಯರ ಅನುಭವ ಮತ್ತು ಕಾನೂನು ಜ್ಞಾನವನ್ನು ಅಳವಡಿಸಿಕೊಂಡು ವೃತ್ತಿಯಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ನ್ಯಾಯಕ್ಕಾಗಿ ಬರುವ ಪ್ರತಿಯೊಬ್ಬರ ಸಮಸ್ಯೆಗಳನ್ನು ಮಾನವೀಯ ದೃಷ್ಟಿಕೋನದಿಂದ ಪರಿಗಣಿಸಿ, ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ದೊರಕಿಸಿಕೊಡಲು ಶ್ರಮಿಸಬೇಕು. ವಕೀಲರು ನಿರಂತರ ಅಧ್ಯಯನ ಮತ್ತು ಕಾನೂನಿನಲ್ಲಿನ ಬದಲಾವಣೆಗಳ ಅರಿವು ಹೊಂದುವ ಮೂಲಕ ವೃತ್ತಿಪರ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು. ಹಿರಿಯ ನ್ಯಾಯವಾದಿಗಳ ಸಾಧನೆಯನ್ನು ಗುರುತಿಸಿ ಗೌರವಿಸುವುದು ಹಾಗೂ ಕಿರಿಯರಿಗೆ ಪ್ರೋತ್ಸಾಹ ನೀಡುವುದು ಉತ್ತಮ ಪರಂಪರೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಂಜಾರ ನ್ಯಾಯವಾದಿಗಳ ಘಟಕದ ಅಧ್ಯಕ್ಷ ಹಾಗೂ ಆಳಂದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕಮಲಾಕರ ವಿ. ರಾಠೋಡ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಲ್. ಲಕ್ಷ್ಮೀನಾರಾಯಣ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಲ್. ಚವ್ಹಾಣ, ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ರಾಜ್ಯಾಧ್ಯಕ್ಷ ಡಾ. ಎಚ್.ಬಿ. ಸಿಧ್ಯಾನಾಯಕ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ. ಪಸಾರ, ಮಾಜಿ ಸಂಸAದ ಡಾ.ಉಮೇಶ ಜಾಧವ, ಎನ್.ಆರ್.ನಾಯಕ ಹೈರ್ಕೋ ನ್ಯಾಯವಾದಿ ಬೇಂಗಳೂರು, ಕಲಬುರಗಿ ಜಿಲ್ಲಾ ಬಂಜಾರ (ಲಂಬಾಣಿ) ಸೇವಾ ಸಂಘದ ಅಧ್ಯಕ್ಷ ಡಾ. ಬಿ.ಬಿ. ನಾಯಕ, ಜಿಲ್ಲಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷೆ ಆರತಿ ಎಂ. ರಾಠೋಡ, ಜಿಲ್ಲಾ ಬಂಜಾರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಚಂದು ಜಿ. ರಾಠೋಡ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವಕೀಲ ವೃತ್ತಿಯಲ್ಲಿ ೨೫ ವರ್ಷ ಪೂರ್ಣಗೊಳಿಸಿದ ಹಿರಿಯ ನ್ಯಾಯವಾದಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕಿರಿಯ ನ್ಯಾಯವಾದಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಬಾಬುರಾವ ಎ. ಜಾಧವ, ಹೀರಾಲಾಲ ಎಸ್. ಚವ್ಹಾಣ, ಇಂದುಧರ ಪಿ. ಜಾಧವ, ರವಿ ಬಿ. ಚವ್ಹಾಣ ಸೇರಿದಂತೆ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

