ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಅತ್ಯಗತ್ಯ: ನ್ಯಾಯಾಧೀಶೆ ಸರಿತಾ ಡಿ.
ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಅತ್ಯಗತ್ಯ: ನ್ಯಾಯಾಧೀಶೆ ಸರಿತಾ ಡಿ.
ಕಲಬುರಗಿ: ಇಂದಿನ ಸಮಾಜದಲ್ಲಿ ಎಷ್ಟೇ ಶಿಕ್ಷಣ ಮತ್ತು ಪ್ರಗತಿ ಸಾಧಿಸಿದ್ದರೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಸರಿತಾ ಡಿ. ಅವರು ಕಳವಳ ವ್ಯಕ್ತಪಡಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರಗಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜು, ಕೋಟನೂರ (ಡಿ), ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸಲು ಜನರಲ್ಲಿ ಇರುವ ಕಾನೂನಿನ ಅರಿವಿನ ಕೊರತೆಯೂ ಪ್ರಮುಖ ಕಾರಣವಾಗಿದೆ. ಇಂತಹ ಘಟನೆಗಳನ್ನು ತಡೆಗಟ್ಟಲು ಪ್ರತಿಯೊಬ್ಬರಲ್ಲಿಯೂ ಕಾನೂನಿನ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಾದ ಪೋಕ್ಸೋ (POCSO – Protection of Children from Sexual Offences Act, 2012) ಕುರಿತು ವಿವರಿಸಿದ ಅವರು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಕಿರುಕುಳ ಹಾಗೂ ಶೋಷಣೆಯಿಂದ ರಕ್ಷಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪೋಕ್ಸೋ ಕಾಯ್ದೆಯ ಕುರಿತು ಸಮಗ್ರ ಅರಿವು ಹೊಂದಿರಬೇಕು. ಹೆಣ್ಣು ಮತ್ತು ಗಂಡು ಮಕ್ಕಳು ತಮ್ಮ ಸುರಕ್ಷತೆಯ ಬಗ್ಗೆ ಜಾಗೃತರಾಗಿರಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಮೊಬೈಲ್ ಫೋನ್ಗಳನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ಮೊಬೈಲ್ ಬಳಕೆಯಲ್ಲಿನ ಅಜಾಗರೂಕತೆಯಿಂದ ಕೆಲವೊಮ್ಮೆ ತಪ್ಪು ದಾರಿಗೆ ಹೋಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಇಂತಹ ವಿಚಾರಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಜಾಗ್ರತೆ ವಹಿಸಬೇಕು. ಬಾಲ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು ಮತ್ತು ಜವಾಬ್ದಾರಿಯಾಗಿದೆ ಎಂದು ಹೇಳಿದರು. ಪೋಕ್ಸೋ ಕಾಯ್ದೆಗೆ ಸಂಬಂಧಿಸಿದ ವಿವಿಧ ನೈಜ ಘಟನೆಗಳ ಉದಾಹರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಹಾಗೂ ಜಾಗೃತಿಯನ್ನು ಮೂಡಿಸಿದರು. ಕಾರ್ಯಕ್ರಮದ ಅತಿಥಿಗಳಾದ ವಿರೇಶ ಎಚ್. ಪ್ಯಾನೆಲ್ ವಕೀಲರು,ಕಲಬುರಗಿ. ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಕಲ್ಪ ಫೌಂಡೇಶನ್ ಹಾಗೂ ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಅಧ್ಯಕ್ಷರಾದ ಶ್ರೀ ಗುರುರಾಜ್ ಎಸ್. ಮುಕ್ಕ ಅವರು ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಮಲ್ಲಿಕಾರ್ಜುನ ಹಂಗರಗಿ, ಉಪಪ್ರಾಚಾರ್ಯರಾದ ನಾಗರಾಜ್ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಶರಣು ಕೆಂಭಾವಿಮಠ ಉಪಸ್ಥಿತರಿದ್ದರು.

