ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಅಂತಿಮ ಹಂತದ ಸಿದ್ಧತೆ: ಬಸವರಾಜ್ ಪಾಟೀಲ್ ಸೇಡಂ
ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಅಂತಿಮ ಹಂತದ ಸಿದ್ಧತೆ: ಬಸವರಾಜ್ ಪಾಟೀಲ್ ಸೇಡಂ
ಪ್ರಕೃತಿ ನಗರದಲ್ಲಿ ಶೇಕಡಾ 80 ರಷ್ಟು ಕೆಲಸ ಪೂರ್ಣ
ಕಲಬುರಗಿ: ಸೇಡಂ ತಾಲೂಕಿನ ಕಾಗಿಣಾ ನದಿ ತಟದ ಬೀರನ ಹಳ್ಳಿಯ ಕ್ರಾಸ್ ಪರಿಸರದಲ್ಲಿ ನಿರ್ಮಾಣಗೊಂಡ ಪ್ರಕೃತಿ ನಗರದಲ್ಲಿ ಜ. 29 ರಿಂದ ಫೆಬ್ರವರಿ 6ರ ತನಕ ನಡೆಯುವ 7ನೆಯ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಎಲ್ಲ ಸಿದ್ಧತೆಗಳು ಅಂತಿಮಹಂತದಲ್ಲಿದೆ ಎಂದು ಉತ್ಸವದ ಪ್ರಧಾನ ಸಂಯೋಜಕರಾದ ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.
ಭಾರತೀಯ ಸಂಸ್ಕೃತಿ ಉತ್ಸವ ನಡೆಯುವ ಸ್ಥಳದ ಮಾಧ್ಯಮ ಕೇಂದ್ರದಲ್ಲಿ ಜ.25 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಉತ್ಸವದಲ್ಲಿ ಪ್ರಧಾನ ವೇದಿಕೆ ಅನುಭವ ಮಂಟಪ, ಮಾತೆ ಮಾಣಿಕೇಶ್ವರಿ ಮಂಟಪ ಮತ್ತು ಸಿದ್ದರಾಮ ಜಂಬಲದಿನ್ನಿ ವೇದಿಕೆ ಹಾಗೂ ವಸ್ತು ಪ್ರದರ್ಶನ ಮಳಿಗೆ ಸೇರಿದಂತೆ ಎಲ್ಲ ಸಿದ್ಧತೆಗಳು ಶೇ.80ರಷ್ಟು ಕೆಲಸ ಮುಗಿದಿದೆ.ಜ. 27 ಮತ್ತು 28 ಕ್ಕೆ ಇನ್ನುಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ಉತ್ಸವದ ಪೂರ್ವಭಾವಿಯಾಗಿ ಕಲಬುರಗಿಯಲ್ಲಿ ನಡೆಯುವ ಶೋಭಾ ಯಾತ್ರೆಯು ನೂತನ ವಿದ್ಯಾಲಯ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಸೇಡಂ ನ ಶೋಭಾ ಯಾತ್ರೆ ಮಾತೃ ಛಾಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಂಪನ್ನಗೊಳ್ಳಲಿದೆ. 28ರಂದು ಉತ್ಸವದ ನಿಮಿತ್ತ ಪ್ರಾರಂಭಗೊಳ್ಳುವ 9 ಲೋಕಗಳ ಉದ್ಘಾಟನೆಯು ಸಾಯಂಕಾಲ ಮೂರು ಗಂಟೆಗೆ ನಡೆಯಲಿದೆ. ಸಂಜೆ 4 ಗಂಟೆಗೆ ಪ್ರಧಾನ ವೇದಿಕೆ ಅನುಭವ ಮಂಟಪದಲ್ಲಿ ಕಾರ್ಯಕ್ರಮ ಶುಭಾರಂಭಗೊಳ್ಳಲಿದೆ. ಪ್ರಧಾನ ವೇದಿಕೆಯ ವಿದ್ಯುಕ್ತ ಪೂಜಾ ಕಾರ್ಯಕ್ರಮವು ನೊಣವಿನಕೆರೆ ಪೂಜ್ಯಶ್ರೀಗಳ ನೇತೃತ್ವದಲ್ಲಿ ಪೂಜ್ಯ ಸದಾಶಿವ ಸ್ವಾಮೀಜಿಗಳ ಸಾನಿಧ್ಯದಲ್ಲಿ ಜ. 25ರಂದು ಇಷ್ಟಲಿಂಗ ಪೂಜೆ ನಡೆಸುವುದರೊಂದಿಗೆ ಪ್ರಾರಂಭಗೊಂಡಿತು ಎಂದರು.
ಉತ್ಸವವನ್ನು ಭಾರತದ ಮಾಜಿ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಉದ್ಘಾಟನೆ ಮಾಡಲಿದ್ದು ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಾನಿಧ್ಯ ವಹಿಸಲಿದ್ದಾರೆ. ಜೊತೆಗೆ ಮಠಾಧೀಶರು ಹಾಗೂ ಗಣ್ಯರು ಉಪಸ್ಥಿತರಿರಲಿದ್ದಾರೆ ಸಿದ್ದರಾಮಯ್ಯ ಬೆಂಬಲದಿನ್ನಿ ವೇದಿಕೆಯಲ್ಲಿ ಪ್ರತಿನಿತ್ಯ ಖ್ಯಾತ ಕಲಾವಿದರಿಂದ ಹಾಗೂ ನಾಡಿನ ಸಾಂಸ್ಕೃತಿಕ ತಂಡಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.
ವ್ಯಕ್ತಿ ಸಂತೋಷವಲ್ಲ ಸಮಾಜ ಪರಿವರ್ತನೆ
ಏಳನೇ ಭಾರತೀಯ ಸಂಸ್ಕೃತಿ ಉತ್ಸವವು ವ್ಯಕ್ತಿ ಸಂತೋಷಕ್ಕಾಗಿ ಅಲ್ಲ. ಬದಲಾಗಿ ಇದು ಸಮಾಜದ ಪರಿವರ್ತನೆಗೆ ಮಾಡುವ ಉತ್ಸವ ಸತ್ಯದ ಕಡೆಗೆ ಸಾಗುವ ಪ್ರಯತ್ನದ ಭಾಗವಾಗಿ ಹುಟ್ಟಿನಿಂದ ಸಾವಿನವರೆಗೆ ಹಲವು ಲೌಕಿಕ ಪ್ರಯಾಣದಲ್ಲಿ ಭಾರತೀಯ ಸಂಸ್ಕೃತಿಯ ಪ್ರೇರಣೆಯನ್ನು ಪಡೆದು ಸಮಾಜಕ್ಕೆ ವ್ಯಕ್ತಿ ಕೊಡುಗೆಯಾಗುವಂತೆ ಮಾಡುವ ವಿಶೇಷ ಪ್ರಯತ್ನವಾಗಿದೆ. ಕುಂಭಮೇಳದಂತೆ ಒಂದು ದಿಶೆಯನ್ನು ಸಮಾಜಕ್ಕೆ ಕೊಡಬಲ್ಲ ಉತ್ಸವವಾಗಿ ಪರಿಣಮಿಸಲಿದೆ. ಭಾರತ ವಿಕಾಸ ಸಂಗಮ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ವಿಕಾಸ ಅಕಾಡೆಮಿ ಇವುಗಳ ಸಹಯೋಗದೊಂದಿಗೆ ನಡೆಯುವ ಈ ಉತ್ಸವ ಒಂದು ಪರಿವಾರದ ಕನಸು ಕಟ್ಟಿಕೊಡುವ ಒಂದು ಕುಟುಂಬ ಎಂದು ಪರಿಗಣಿಸಿ ಅಭಿವೃದ್ಧಿಯನ್ನು ಸಾಧಿಸಲು ಮಾಡುವ ಪ್ರಯತ್ನವಾಗಿದೆ ಎಂದರು.
ಉತ್ಸವದಲ್ಲಿ 10ನಿರ್ಣಯ ಅಂಗೀಕಾರ
ಏಳನೆಯ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾರತ ವಿಕಾಸ ಸಂಗಮ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ವಿಕಾಸ ಅಕಾಡೆಮಿ ಈ ಮೂರು ಸಂಸ್ಥೆಗಳ ಅಡಿಯಲ್ಲಿ ನಡೆಯುವ ಉತ್ಸವವು ಭವಿಷ್ಯದ 10 ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ. ಈ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಆ 10 ನಿರ್ಣಯಗಳ ತಳಹದಿಯಲ್ಲಿ ಕೆಲಸ ನಿರ್ವಹಿಸಿ ಅಭಿವೃದ್ಧಿಯ ಭಾರತ ಕಟ್ಟುವ ದೂರದೃಷ್ಟಿಯ ಕನಸು ಇಟ್ಟುಕೊಳ್ಳಲಾಗಿದೆ. ಆ ನಿರ್ಣಯಗಳೇ ಮುಂದಿನ ಹೆಜ್ಜೆಯ ಗುರಿ ಎಂದರು.
ಬಹುಭಾಷಾ ಕೃತಿ ಪ್ರಕಟ
ಏಳನೆಯ ಭಾರತೀಯ ಸಂಸ್ಕೃತಿ ಉತ್ಸವದ 9 ದಿನಗಳ ಕಾರ್ಯಕ್ರಮದ ಸಮಗ್ರ ಚಿತ್ರಣವನ್ನು ಒಳಗೊಂಡ ತಜ್ಞರ, ವಿದ್ವಾಂಸರ ಆಶಯಗಳನ್ನು ಹೊಂದಿದ ಕೃತಿಯನ್ನು ಇಂಗ್ಲಿಷ್ ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಮುಂದಿನ ನಾಲ್ಕು ತಿಂಗಳಲ್ಲಿ ಹೊರತರಲಾಗುವುದು. ಮೂರು ಸಂಸ್ಥೆಗಳಿಟ್ಟುಕೊಂಡ ಕಲ್ಪನೆ ಸಾಕಾರಗೊಳ್ಳಲು ನೀಲ ನಕಾಶೆ ಆಗಲಿದೆ. ಅದಕ್ಕಾಗಿ ದೇಶ ವಿದೇಶದ ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೊಂದು ಅಲೌಕಿಕ ಗಂಗೆಯಾಗಿದ್ದು 9 ದಿನಗಳಲ್ಲಿ ಕನಿಷ್ಠ ಒಂದು ದಿನವಾದರೂ ಈ ಗಂಗೆಯ ಸ್ನಾನ ಮಾಡಿ ಅನುಭವ ಗಳಿಸಿಕೊಳ್ಳಬೇಕು. ತಾಯಂದಿರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪ್ರತಿ ದಿನ 3 ಗಂಟೆಗೆ ದಿಶಾ ದರ್ಶನ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದ್ದು ಭವಿಷ್ಯತ್ತಿನ ದೃಷ್ಟಿಕೋನದ ಬಗ್ಗೆ ಗಣ್ಯರು ಮಾರ್ಗದರ್ಶನ ನೀಡಲಿದ್ದಾರೆ . ಉತ್ಸವದಲ್ಲಿ ಪಾಲ್ಗೊಂಡವರಿಗೆ ನೂರಕ್ಕೂ ಹೆಚ್ಚು ಪಿಎಚ್ ಡಿ ಮಾಡಿದ ವಿಶೇಷ ಅನುಭವ ಬಹುಮುಖಿ ಕಾರ್ಯಕ್ರಮವಾಗಲಿದೆ. ಗಂಗಾ ಸ್ನಾನದಿಂದ ಹೇಗೆ ಮಾತು ಕೃತಿ, ಬದುಕುಬದಲಾಗುತ್ತದೆಯೋ ಹಾಗೆಯೇ ಉತ್ಸವದಲ್ಲಿ ಪಾಲ್ಗೊಂಡವರಿಗೆ ಸಾಮಾಜಿಕವಾಗಿ ಪರಿವರ್ತನೆ ಹೊಂದುವ, ಬ್ರಹ್ಮಾಂಡಕ್ಕೆ ತಾಯಿ ಭಾರತಿ ಶ್ರೇಷ್ಠಳಾಗಿ ಎದ್ದು ನಿಲ್ಲುವ ಅವಕಾಶವಾಗಲಿದೆ.
2 ಲಕ್ಷ ಜನರಿಗೆ ನಿತ್ಯ ಪ್ರಸಾದ
ಉತ್ಸವದಲ್ಲಿ ಪ್ರತಿನಿತ್ಯ ಒಂದುವರೆ ಲಕ್ಷ ಜನ ಊಟ ಮಾಡಲಿದ್ದಾರೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನರಿಗೆ ಬೆಳಗ್ಗಿನ ಉಪಹಾರ ವ್ಯವಸ್ಥೆಯಿದ್ದು ದಿನಕ್ಕೆ ಕನಿಷ್ಠ 2 ಲಕ್ಷ ಜನ ಪ್ರಸಾದ ಸ್ವೀಕರಿಸಲಿದ್ದಾರೆ. ಪ್ರಸಾದ ವ್ಯವಸ್ಥೆಗೆ ತೇಜಸ್ವಿನಿ ಅನಂತಕುಮಾರ್ ಅವರ ಅದನ್ನೇ ಚೇತನ ಸಂಸ್ಥೆಯು 25000 ತಟ್ಟೆಗಳನ್ನು ನೀಡಿದ್ದು ತೆಲಂಗಾಣದ ನವೀನ ತ್ಯಾಜ್ಯ ನಿರ್ವಹಣಾ ಸಂಸ್ಥೆ ಪರಿಸರ ಸ್ನೇಹಿ ವ್ಯವಸ್ಥೆಗಾಗಿ 300 ಜನ ಕಾರ್ಯಕರ್ತರನ್ನು ನೇಮಿಸಿದೆ.
ಉತ್ಸವದ ನೆನಪಿಗೆ 11 ವೃಕ್ಷಾರೋಪಣ
ಉತ್ಸವ ನಡೆಯುವ ಪ್ರಕೃತಿ ನಗರದಲ್ಲಿ ಈ ಉತ್ಸವವನ್ನು ಸ್ಮರಣೀಯವಾಗಿಸಲು 11 ವೃಕ್ಷಗಳನ್ನು ನೆಡುವ ಕಾರ್ಯಕ್ರಮವಿದ್ದು ರಾಷ್ಟ್ರಧ್ವಜ ಮತ್ತು ಕಾರ್ಯಕ್ರಮದ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ.
ಉತ್ಸವಕ್ಕೆ ಸರಕಾರದಿಂದ ಪೂರ್ಣ ನೆರವು
ಉತ್ಸವಕ್ಕೆ ರಾಜ್ಯ ಸರ್ಕಾರದ ಸಹಕಾರವಿಲ್ಲದೆ ಯಾವುದೇ ಕಾರ್ಯಕ್ರಮ ಮಾಡಲು ಅಸಾಧ್ಯ. ಸರಕಾರವೇ ದೇವರು. ನಾವೆಲ್ಲ ಅವರ ಜೊತೆಗೆ ಅಮ್ಮ- ಮಕ್ಕಳ ಸಂಬಂಧ ಇಟ್ಟುಕೊಂಡವರು. ಅಮ್ಮ ತನ್ನ ಮಕ್ಕಳನ್ನು ಯಾವತ್ತೂ ಕೂಡಾ ಉಪವಾಸ ಹಾಕಲು ಬಿಡಲ್ಲ ಎಂದು ಉತ್ಸವಕ್ಕೆ ರಾಜ್ಯ ಸರ್ಕಾರ ನೀಡುತ್ತಿರುವ ನೆರವನ್ನು ಸ್ಮರಿಸಿಕೊಂಡು ಬಸವರಾಜ ಪಾಟೀಲ್ ಸೇಡಂ ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಮತ್ತು ಪ್ರಭಾಕರ್ ಸೇಡಂ ಉಪಸ್ಥಿತರಿದ್ದರು