ಕೇಶವಿನ್ಯಾಸಕರಿಗೆ ಸರ್ಕಾರಿ ಕೌಶಲ್ಯ ತರಬೇತಿ ನೀಡಲು ಆಗ್ರಹ

ಕೇಶವಿನ್ಯಾಸಕರಿಗೆ ಸರ್ಕಾರಿ ಕೌಶಲ್ಯ ತರಬೇತಿ ನೀಡಲು ಆಗ್ರಹ

ಕೇಶವಿನ್ಯಾಸಕರಿಗೆ ಸರ್ಕಾರಿ ಕೌಶಲ್ಯ ತರಬೇತಿ ನೀಡಲು ಆಗ್ರಹ

ಕಲಬುರಗಿಯಲ್ಲಿ ಉಚಿತ ಆಧುನಿಕ ಕೇಶವಿನ್ಯಾಸ ತರಬೇತಿ ಕಾರ್ಯಾಗಾರ

ಕಲಬುರಗಿ: ಇಂದಿನ ಪೀಳಿಗೆಯ ಕೇಶವಿನ್ಯಾಸಕರು ಆಧುನಿಕ ಕೇಶಕಲೆಯನ್ನು ಕಲಿತು ವೃತ್ತಿಯಲ್ಲಿ ಪ್ರಗತಿ ಸಾಧಿಸಲು ಇಂತಹ ತರಬೇತಿ ಕಾರ್ಯಾಗಾರಗಳ ಅಗತ್ಯವಿದೆ. ರಾಜ್ಯದಾದ್ಯಂತ ಸವಿತಾ ಸಮಾಜ ಅಭಿವೃದ್ಧಿ ನಿಗಮದ ವತಿಯಿಂದ ಕೇಶವಿನ್ಯಾಸಕರಿಗೆ ಕೌಶಲ್ಯ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ವಾರಿಕ ಫೌಂಡೇಶನ್ ಸಂಸ್ಥಾಪಕ ಆನಂದ ವಾರಿಕ ಆಗ್ರಹಿಸಿದರು.

ನಗರದ ಸೇಡಂ ರಸ್ತೆಯ ಸ್ಪಿನ್ ಸಲೂನ್‌ನಲ್ಲಿ ವಾರಿಕ ಫೌಂಡೇಶನ್, ಸ್ಪಿನ್ ಸಂಸ್ಥೆ ಬೆಂಗಳೂರು, ಕರ್ನಾಟಕ ಸವಿತಾ ಜನಜಾಗೃತಿ ವೇದಿಕೆ ಹಾಗೂ ಮಿತ್ರ ಜ್ಯೋತಿ ಫೌಂಡೇಶನ್ ಬೆಂಗಳೂರು ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ಉಚಿತ ಆಧುನಿಕ ಕೇಶವಿನ್ಯಾಸ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿಜಯಪುರ, ಬಾಗಲಕೋಟೆ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕಲಬುರಗಿ ಸುತ್ತಮುತ್ತಲಿನ ಪ್ರದೇಶಗಳ 50ಕ್ಕೂ ಹೆಚ್ಚು ಕೇಶವಿನ್ಯಾಸಕರು ಕಾರ್ಯಾಗಾರದಲ್ಲಿ ಪಾಲ್ಗೊಂಡು ಆಧುನಿಕ ಕೇಶಕಲೆಯ ವಿವಿಧ ಪ್ರಕಾರಗಳ ಕುರಿತು ತರಬೇತಿ ಪಡೆದರು.

ಬೆಂಗಳೂರು ಮೂಲದ ಸೆಲೆಬ್ರಿಟಿ ಹೇರ್‌ಸ್ಟೈಲಿಸ್ಟ್‌ಗಳಾದ ಮಹೇಂದ್ರ ಪ್ರಸಾದ್, ಕಿರಣ್, ಧನಂಜಯ್ ಹಾಗೂ ಸುಬ್ಬು ಅವರು ತರಬೇತಿ ನೀಡಿ, ವಿವಿಧ ಬಗೆಯ ಆಧುನಿಕ ಕೇಶವಿನ್ಯಾಸ ತಂತ್ರಗಳನ್ನು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಿದರು. ಅಮೆರಿಕ ಮತ್ತು ಲಂಡನ್‌ನಲ್ಲಿಯೂ ಸಲೂನ್‌ಗಳನ್ನು ಹೊಂದಿರುವ ಅನುಭವಿಗಳಿಂದ ತರಬೇತಿ ಪಡೆಯುವ ಅವಕಾಶವನ್ನು ಕೇಶವಿನ್ಯಾಸಕರು ಸದುಪಯೋಗಪಡಿಸಿಕೊಂಡರು.

ಸಂದರ್ಭದಲ್ಲಿ ಸೀನ ಜಗ್ಗ ರಾಜು, ಗುರು ವಾರಿಕ, ರಾಮಲಿಂಗ ಮೊಗಲಾ, ಖಂಡಪ್ಪ ಮಲ್ಲಾ, ಅಂಬರೀಷ್ ಇಟಗಾ, ಚಿತ್ತಣ್ಣ ಚಿತ್ತಾಪುರ, ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು.