ಭಾವೈಕ್ಯತೆಯ ಸೂಫಿ ಸಂತ ಹಜರತ್ ಲಾಡ್ಲೆ ಮಶಾಖ ಅನ್ಸಾರಿ — ಡಾ. ಅವಿನಾಶ ಎಸ್. ದೇವನೂರ
ಭಾವೈಕ್ಯತೆಯ ಸೂಫಿ ಸಂತ ಹಜರತ್ ಲಾಡ್ಲೆ ಮಶಾಖ ಅನ್ಸಾರಿ
— ಡಾ. ಅವಿನಾಶ ಎಸ್. ದೇವನೂರ
ದಕ್ಷಿಣ ಭಾರತದ ದಖ್ಖನ್ ಪ್ರದೇಶದ ಪ್ರಸಿದ್ಧ ಸೂಫಿ ಸಂತರಲ್ಲಿ ಹಜರತ್ ಲಾಡ್ಲೆ ಮಶಾಖ ಅನ್ಸಾರಿ ಅವರು ಪ್ರಮುಖರಾಗಿದ್ದಾರೆ. ಪ್ರೀತಿ, ಶಾಂತಿ, ಸಹಿಷ್ಣುತೆ, ಮಾನವೀಯತೆ ಹಾಗೂ ಭಾವೈಕ್ಯತೆಯ ಸಂದೇಶವನ್ನು ತಮ್ಮ ಜೀವನಾಚರಣೆಯ ಮೂಲಕ ಸಾರಿದ ಅವರು, ದಖ್ಖನ್‌ನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಹಜರತ್ ಲಾಡ್ಲೆ ಮಶಾಖ ಅನ್ಸಾರಿ ಅವರು ಹಳೆ ದೆಹಲಿಯ ಖಿಲೋಖಡಿಯಲ್ಲಿ ಜನಿಸಿದರು. ಅವರ ತಂದೆ ಹಜರತ್ ಪೀರ್ ಮುಬಾರಕ್ ಫಕ್ರುದ್ದೀನ್ ಉರ್ಫ್ ಕಾ-ಎ-ರವಾ ಅನ್ಸಾರಿ ಹಾಗೂ ತಾಯಿ ಹಜರತ್ ಬಿಬಿರಾನಿ ಖುರ್ದ. ಈ ದಂಪತಿಗಳ ಮೊದಲ ಸಂತಾನವೇ ಲಾಡ್ಲೆ ಮಶಾಖ. ಅವರ ಕುಟುಂಬವು ಪ್ರವಾದಿ ಹಜರತ್ ಮಹಮ್ಮದ್ (ಸ) ಅವರ ಪ್ರೇಮಮಯ ಸೂಫಿ ಪರಂಪರೆಯೊಂದಿಗೆ ಗುರುತಿಸಿಕೊಂಡಿತ್ತು ಎಂದು ತಿಳಿದುಬರುತ್ತದೆ.
ಕ್ರಿ.ಶ. 1327ರಲ್ಲಿ ಮಹಮ್ಮದ್ ಬಿನ್ ತುಘಲಕ್ ತನ್ನ ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ್ (ದೇವಗಿರಿ)ಗೆ ಸ್ಥಳಾಂತರಿಸಿದ ಸಂದರ್ಭದಲ್ಲಿ, ಬಾಲಕರಾಗಿದ್ದ ಲಾಡ್ಲೆ ಮಶಾಖ ಅವರು ತಮ್ಮ ಕುಟುಂಬದೊಂದಿಗೆ ದೌಲತಾಬಾದ್‌ಗೆ ತೆರಳಿದರು. ಕೆಲವೇ ವರ್ಷಗಳ ನಂತರ ಮತ್ತೆ ದೆಹಲಿಗೆ ಮರಳಿದರು. ಬಾಲ್ಯದಿಂದಲೇ ಅವರು ಧಾರ್ಮಿಕ ಹಾಗೂ ತಾತ್ವಿಕ ಅಧ್ಯಯನದಲ್ಲಿ ಆಸಕ್ತಿ ಬೆಳೆಸಿಕೊಂಡರು. ಅನೇಕ ವಿದ್ವಾಂಸರಿಂದ ಕುರಾನ್, ತತ್ವಶಾಸ್ತ್ರ, ಧರ್ಮಶಾಸ್ತ್ರ, ಅರಬಿ ಭಾಷಾಶಾಸ್ತ್ರ, ತರ್ಕಶಾಸ್ತ್ರ, ದೈವಶಾಸ್ತ್ರ ಮೊದಲಾದ ವಿಷಯಗಳ ಜೊತೆಗೆ ಪಾರ್ಸಿ ಮತ್ತು ದಖ್ಖನಿ (ಹಳೆಯ ಉರ್ದು) ಭಾಷೆಗಳ ಜ್ಞಾನವನ್ನು ಪಡೆದುಕೊಂಡರು.
ಬಾಲ್ಯದಲ್ಲಿದ್ದಾಗ ತಮ್ಮ ತಾಯಿಯ ತಂದೆಯಾದ ಹಜರತ್ ಸೈಯದ್ ಕಬಿರುಲ್ಲಾಹ್ ಹುಸೇನಿ ಅವರೊಂದಿಗೆ ಸಂತಶ್ರೇಷ್ಠ ಹಜರತ್ ಹಸ್ನುದ್ದೀನ್ ನಕ್ಷಬಂದಿ ಅವರ ದರ್ಶನಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಹಜರತ್ ಖಾಜಿ ಅಲಿಮುದ್ದೀನ್ ಅವರು ಬಾಲಕ ಲಾಡ್ಲೆ ಮಶಾಖರನ್ನು ಪ್ರೀತಿಯಿಂದ ತಮ್ಮ ಬಳಿಗೆ ಕರೆದುಕೊಂಡರು. ಈ ದೃಶ್ಯವನ್ನು ಗಮನಿಸಿದ ನಕ್ಷಬಂದಿ ಅವರು ಮುಗುಳ್ನಗೆ ಬೀರಿ, ಈ ಬಾಲಕ ಮುಂದೆ ಸಂತರ ಪ್ರೇಮಮಯ ಸಾಧಕರಾಗುವರು ಎಂಬ ಅರ್ಥದಲ್ಲಿ “ಲಾಡ್ಲೆ ಮಶಾಖ” ಎಂದು ಕರೆದರೆಂದು ಪರಂಪರೆಯಲ್ಲಿ ಉಲ್ಲೇಖಿಸಲಾಗಿದೆ. ಅಂದಿನಿಂದ ಅವರು ಲಾಡ್ಲೆ ಮಶಾಖ ಎಂಬ ಹೆಸರಿನಿಂದ ಪ್ರಸಿದ್ಧರಾದರು ಎನ್ನಲಾಗುತ್ತದೆ.
ಅದೇ ರೀತಿ, ಸೂಫಿ ಸಂತ ಹಜರತ್ ಬುರಹಾನುದ್ದೀನ್ ಗರೀಬ್ ಅವರು ಬಾಲಕ ಲಾಡ್ಲೆ ಮಶಾಖರಲ್ಲಿದ್ದ ಆಧ್ಯಾತ್ಮಿಕ ಸಾಮರ್ಥ್ಯವನ್ನು ಗುರುತಿಸಿ, ಅವರು ಭವಿಷ್ಯದಲ್ಲಿ ಶ್ರೇಷ್ಠ ಸಂತರಾಗಿ ರೂಪುಗೊಳ್ಳುವರೆಂದು ಭವಿಷ್ಯ ನುಡಿದಿದ್ದರು ಎಂಬ ಉಲ್ಲೇಖವೂ ದೊರೆಯುತ್ತದೆ.
ದೆಹಲಿಯ ಪ್ರಸಿದ್ಧ ಸೂಫಿ ಸಂತ ಹಜರತ್ ನಸಿರುದ್ದೀನ್ ಚಿರಾಗ್-ಎ-ದೆಹಲಿ ಅವರಿಂದ ಲಾಡ್ಲೆ ಮಶಾಖರು ಚಿಸ್ತಿಯಾ ಆಧ್ಯಾತ್ಮಿಕ ಪರಂಪರೆಯ ದೀಕ್ಷೆ (ಮುರೀದ್) ಪಡೆದರು. ನಂತರ ಅವರಿಗೆ ಖಿಲಾಫತ್, ಅಂದರೆ ಆಧ್ಯಾತ್ಮಿಕ ಉತ್ತರಾಧಿಕಾರದ ಗೌರವವೂ ದೊರೆಯಿತು.
ತಮ್ಮ ಆಧ್ಯಾತ್ಮಿಕ ಗುರುಗಳ ನಿಧನದ ನಂತರ ಅವರ ಆದೇಶದಂತೆ ಲಾಡ್ಲೆ ಮಶಾಖರು ದೆಹಲಿಯಿಂದ ದಖ್ಖನ್ ಪ್ರದೇಶದತ್ತ ಪ್ರಯಾಣ ಬೆಳೆಸಿದರು. ತಮ್ಮ 38ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದು, ಮಾರ್ಗಮಧ್ಯೆ ಅನೇಕ ಸ್ಥಳಗಳಲ್ಲಿ ವಾಸ್ತವ್ಯ ಹೂಡಿ ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಾ ಸಾಗಿದರು. ಕಲಬುರಗಿಗೆ ಆಗಮಿಸಿದ ಸಂದರ್ಭದಲ್ಲಿ ಬಹಮನಿ ದೊರೆ ಮಹಮ್ಮದ್ ಶಾಹ್ ಪ್ರಥಮರು ಅವರನ್ನು ಗೌರವಪೂರ್ವಕವಾಗಿ ಬರಮಾಡಿಕೊಂಡರೆಂದು ತಿಳಿದುಬರುತ್ತದೆ.
ನಂತರ ಅವರು ಪ್ರಸಿದ್ಧ ಸೂಫಿ ಸಂತ ಹಜರತ್ ಸಿರಾಜುದ್ದೀನ್ ಜುನೈದಿ ಅವರನ್ನು ಭೇಟಿಯಾಗಿ, ಅವರ ನಿರ್ದೇಶನದ ಮೇರೆಗೆ ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ ಆಳಂದದತ್ತ ಪ್ರಯಾಣಿಸಿದರು. ದೌಲತಾಬಾದ್, ಉಸ್ಮಾನಾಬಾದ್, ಕಲಬುರಗಿ ಸಮೀಪದ ಸುಲ್ತಾನಪುರ ಹಾಗೂ ಇತರ ಪ್ರದೇಶಗಳಲ್ಲಿ ಸಂಚರಿಸಿದ ಅವರು ಅಂತಿಮವಾಗಿ ಆಳಂದವನ್ನು ತಮ್ಮ ಆಧ್ಯಾತ್ಮಿಕ ನೆಲೆಯನ್ನಾಗಿ ಮಾಡಿಕೊಂಡರು.
ಆ ಕಾಲದಲ್ಲಿ ಆಳಂದ ಬಹಮನಿ ರಾಜ್ಯದ ಒಬ್ಬ ಕಿಲ್ಲೇದಾರನ ಆಡಳಿತಕ್ಕೆ ಒಳಪಟ್ಟಿತ್ತು. ಲಾಡ್ಲೆ ಮಶಾಖರು ಮತ್ತು ಅವರ ಶಿಷ್ಯರ ಆಧ್ಯಾತ್ಮಿಕ ಸಾಧನೆಗೆ ಕಿಲ್ಲೇದಾರನು ಅಗತ್ಯ ಸಹಕಾರ ನೀಡಿದನೆಂದು ಹೇಳಲಾಗುತ್ತದೆ. ನಿತ್ಯ ಪ್ರಾರ್ಥನೆ, ಧ್ಯಾನ, ಯೋಗ ಹಾಗೂ ಆಧ್ಯಾತ್ಮಿಕ ಚಿಂತನೆಗಳಿಗೆ ಅನುಕೂಲವಾಗುವಂತೆ ಊರ ಹೊರವಲಯದ ಗುಡ್ಡದ ಮೇಲೆ ಮಸೀದಿಯನ್ನು ನಿರ್ಮಿಸಿಕೊಟ್ಟನೆಂಬ ಐತಿಹ್ಯವಿದೆ.
ಹಜರತ್ ಲಾಡ್ಲೆ ಮಶಾಖರ ಆಧ್ಯಾತ್ಮಿಕ ಪರಂಪರೆ ಪ್ರವಾದಿ ಹಜರತ್ ಮಹಮ್ಮದ್ (ಸ) ಅವರವರೆಗೆ ಕ್ರಮಬದ್ಧವಾಗಿ ಸಾಗುತ್ತದೆ ಎಂದು ಅವರ ಪರಂಪರೆಯಲ್ಲಿ ನಂಬಲಾಗಿದೆ. ಅವರು ಬ್ರಹ್ಮಚಾರಿಯಾಗಿ ಬದುಕಿ, ತಮ್ಮ ಕಾಲದ ಮಹಾನ್ ಸೂಫಿ, ದರವೇಶ, ಸಾಹಿತಿ, ವಾಗ್ಮಿ, ತತ್ವಜ್ಞಾನಿ, ಮಾನವತಾವಾದಿ, ಸಮಾಜ ಸುಧಾರಕ ಹಾಗೂ ಶಾಂತಿ-ಸೌಹಾರ್ದತೆಯ ಹರಿಕಾರರಾಗಿ ಗುರುತಿಸಿಕೊಂಡರು.
ಅವರ ತಂದೆಯವರೂ ಮಹಾನ್ ಸೂಫಿ ಹಾಗೂ ದರವೇಶರಾಗಿದ್ದು, ಹಜರತ್ ಬುರಹಾನುದ್ದೀನ್ ಗರೀಬ್ ಅವರ ಮುರೀದರಾಗಿದ್ದರು. ಲಾಡ್ಲೆ ಮಶಾಖರ ಕಿರಿಯ ಸಹೋದರರಾದ ಹಜರತ್ ಮುನವರ್ ಅನ್ಸಾರಿ, ಹಜರತ್ ನಿಜಾಮುದ್ದೀನ್ ಅನ್ಸಾರಿ ಹಾಗೂ ಹಜರತ್ ಅನ್ವರ್ ಅನ್ಸಾರಿ ಮತ್ತು ಅವರ ತಾಯಿಯವರ ಸಮಾಧಿಗಳು ಕಲಬುರಗಿಯ ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾದ ದಕ್ಷಿಣ ಹೊರವಲಯದಲ್ಲಿವೆ ಎಂದು ತಿಳಿದುಬರುತ್ತದೆ. ಹಜರತ್ ನಿಜಾಮುದ್ದೀನ್ ಅನ್ಸಾರಿ ಅವರ ಸಮಾಧಿ ಕಲಬುರಗಿ ಸಮೀಪದ ಸುಲ್ತಾನಪುರದಲ್ಲಿದೆ. ಅವರ ತಂದೆಯವರ ಸಮಾಧಿ ಔರಂಗಾಬಾದ್ ಜಿಲ್ಲೆಯ ಖುಲ್ದಾಬಾದ್ ತಾಲೂಕಿನ ಕಾಜಿಪುರ ಗ್ರಾಮದ ಸಮೀಪದ ಗುಡ್ಡದ ಮೇಲಿರುವುದಾಗಿ ಉಲ್ಲೇಖಿಸಲಾಗಿದೆ.
ಹಜರತ್ ಲಾಡ್ಲೆ ಮಶಾಖರು ಪ್ರಸಿದ್ಧ ಸೂಫಿ ಸಂತ ಹಜರತ್ ಖ್ವಾಜಾ ಬಂದೇ ನವಾಜ್ ಅವರ ಸಮಕಾಲೀನರು ಹಾಗೂ ಆಧ್ಯಾತ್ಮಿಕ ಬಂಧುಗಳೆಂದು ಪರಿಗಣಿಸಲ್ಪಡುತ್ತಾರೆ. ಹಲವು ವರ್ಷಗಳ ಕಾಲ ಆಳಂದದಲ್ಲಿ ನೆಲೆಸಿದ್ದ ಅವರು ಮಾನವಕುಲಕ್ಕೆ ಶಾಂತಿ, ಸಹಿಷ್ಣುತೆ, ಮಾನವೀಯತೆ, ಭಾವೈಕ್ಯತೆ, ಆಧ್ಯಾತ್ಮಿಕತೆ ಹಾಗೂ ವಿಶ್ವಭಾತೃತ್ವದ ಮಹತ್ವವನ್ನು ತಮ್ಮ ಜೀವನಾಚರಣೆಯ ಮೂಲಕ ಸಾರಿದರು.
ಕ್ರಿ.ಶ. 1381ರಲ್ಲಿ, ಹಿಜರಿ 783ರ ರಜಬ್ 27ರಂದು ಅವರು ಅಲ್ಲಾಹನಲ್ಲಿ ವಿಸಾಲತ್ ಹೊಂದಿದರು ಎಂದು ಪರಂಪರೆಯಲ್ಲಿ ಉಲ್ಲೇಖಿಸಲಾಗಿದೆ. ಅವರ ಸಹೋದರರು ಸಂಸ್ಥಾನಸ್ಥರಾಗಿದ್ದು, ಅವರ ವಂಶಸ್ಥರು ದರ್ಗಾದ ಉಸ್ತುವಾರಿಯನ್ನು ನಿರ್ವಹಿಸುತ್ತಾ ಬಂದಿದ್ದಾರೆ.
ವಿದ್ವಾಂಸ ಸಂತ ಹಾಗೂ ಗ್ರಂಥಕರ್ತ
ಹಜರತ್ ಲಾಡ್ಲೆ ಮಶಾಖರು ಕೇವಲ ಆಧ್ಯಾತ್ಮಿಕ ಸಾಧಕರಷ್ಟೇ ಅಲ್ಲ; ಅವರು ಶ್ರೇಷ್ಠ ವಿದ್ವಾಂಸರು, ವಾಗ್ಮಿಗಳು, ಚಿಂತಕರು ಹಾಗೂ ಗ್ರಂಥಕರ್ತರೂ ಆಗಿದ್ದರು. ಸೂಫಿ ಸಾಧಕರ ಜೀವನಕ್ರಮ, ಅವರಲ್ಲಿ ಇರಬೇಕಾದ ಗುಣಧರ್ಮಗಳು, ಆಧ್ಯಾತ್ಮಿಕ ಆಚರಣೆಗಳು ಹಾಗೂ ಸಾಧನೆಯ ವಿವಿಧ ಆಯಾಮಗಳನ್ನು ವಿವರಿಸುವ ಹಲವು ಕೃತಿಗಳನ್ನು ಅವರು ರಚಿಸಿದ್ದರೆಂದು ತಿಳಿದುಬರುತ್ತದೆ.
ಅವರೊಂದಿಗೆ ಸಂಬಂಧಿಸಲ್ಪಟ್ಟ ಪ್ರಮುಖ ಕೃತಿಗಳೆಂದು ಕೆಳಗಿನ ಗ್ರಂಥಗಳನ್ನು ಉಲ್ಲೇಖಿಸಲಾಗಿದೆ:
ಅವಾರುಫ ಅಲ್ಲಾಹ ಮಾರುಫ
ಖುರಾನ್ ಪಾರ ಕೀ ತಫ್ಸೀರ್
ಶಾರಾ ಅದಬ್ ವೇ ಮುಕೀದಿನ್
ಫಲ್ಲಸಫಾ ಇಸ್ಕ್
ರಿಸಾಲೇ ಇಸ್ತೆಖಶ
ಸೀರತುನ್ನ ನಬೀ
ಶರಾಯೇ ಖಸೀದಾ
ರಿಸಾಲೇ ಬಿಕ್ರ್ ಇಲ್ಲಲ್ಲಾಹು
ರಿಸಾಲೇ ಅದಬ್-ವ-ಸೂಲುಖ್-ಶಿದ್ರು-ವ-ಮಾದರ
ಖಿಲಾವತ್ ನಾಮಾ — ಗುರುಪದೇಶಕ್ಕೆ ಸಂಬಂಧಿಸಿದ ಕೃತಿ
ಶರಾ ಅರಬ್ಬಿ-ವ-ಫಾರಸೀ
ರಿಸಾಲೇ ಸಮಾ
ಇವುಗಳಲ್ಲದೆ ಪ್ರವಾದಿ ಹಜರತ್ ಮಹಮ್ಮದ್ ಅವರ ಜೀವನಚರಿತ್ರೆ, ಅಲ್ಲಾಹನ ಮೇಲಿನ ಆಧ್ಯಾತ್ಮಿಕ ಪ್ರೀತಿ, ಪ್ರಾರ್ಥನೆ, ಭಕ್ತಿ ಹಾಗೂ ಸೂಫಿ ಸಾಧನೆಯ ವಿವಿಧ ಆಯಾಮಗಳನ್ನು ಒಳಗೊಂಡ ಧಾರ್ಮಿಕ ಕೃತಿಗಳನ್ನು ಅವರು ರಚಿಸಿದ್ದರೆಂದು ತಿಳಿದುಬರುತ್ತದೆ. ಪಾರ್ಸಿ ಮತ್ತು ದಖ್ಖನಿ ಕಾವ್ಯಗಳ ಕುರಿತು ವಿಶ್ಲೇಷಣಾತ್ಮಕ ಟೀಕಾಗ್ರಂಥಗಳನ್ನೂ ರಚಿಸಿದ್ದರೆಂಬ ಉಲ್ಲೇಖಗಳಿವೆ.
ಆಳಂದದ ದರ್ಗಾ — ಐತಿಹಾಸಿಕ ಪರಂಪರೆಯ ಪ್ರತೀಕ
ಹಜರತ್ ಲಾಡ್ಲೆ ಮಶಾಖರ ದರ್ಗಾವು ಆಧ್ಯಾತ್ಮಿಕ ಮಹತ್ವದ ಜೊತೆಗೆ ವಾಸ್ತುಶಿಲ್ಪದ ದೃಷ್ಟಿಯಿಂದಲೂ ಗಮನಾರ್ಹವಾಗಿದೆ. ವಿಸ್ತಾರವಾದ ದರ್ಗಾ ಆವರಣ ಹಾಗೂ ಇಂಡೋ-ಇಸ್ಲಾಮಿಕ್ ಶಿಲ್ಪಕಲೆಯ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಮಾರಕವು ಆಳಂದದ ಐತಿಹಾಸಿಕ ಪರಂಪರೆಯ ಪ್ರಮುಖ ಸಂಕೇತವಾಗಿದೆ.
ಕರ್ನಾಟಕ ಸರ್ಕಾರದ ರಾಜ್ಯ ವಸ್ತುಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯು ಈ ಐತಿಹಾಸಿಕ ದರ್ಗಾ ಹಾಗೂ ದರ್ಗಾ ಆವರಣದ ಹೊರಗಡೆ ಇರುವ ಆದಿಲ್‌ಶಾಹಿ ಕಾಲದ ಫರಹದ್ ಅಲಿ ಅವರು ನಿರ್ಮಿಸಿದ ಐತಿಹಾಸಿಕ ಕಾಲೀ (ಕರಿ) ಮಸೀದಿಯನ್ನು ಸಂರಕ್ಷಿತ ರಾಜ್ಯ ಸ್ಮಾರಕಗಳೆಂದು ಘೋಷಿಸಿರುವುದಾಗಿ ಉಲ್ಲೇಖಿಸಲಾಗಿದೆ.
ನಿಕಿಟಿನ್‌ನ ಪ್ರವಾಸಕಥನದಲ್ಲಿನ ಆಳಂದ ಬಹಮನಿ ರಾಜ್ಯಕ್ಕೆ ಭೇಟಿ ನೀಡಿದ್ದ ರಷ್ಯಾದ ಪ್ರವಾಸಿ ಅಫಾನಾಸಿ ನಿಕಿಟಿನ್ ಅವರ ಪ್ರವಾಸವಿವರಣೆಯಲ್ಲಿಯೂ ಆಳಂದದ ಉಲ್ಲೇಖ ದೊರೆಯುತ್ತದೆ. 15ನೇ ಶತಮಾನದ ಪ್ರವಾಸಿ ನಿಕಿಟಿನ್ ತಮ್ಮ ಪ್ರಸಿದ್ಧ ಪ್ರವಾಸಕಥನದಲ್ಲಿ ಆಳಂದದಲ್ಲಿದ್ದ ಶೇಖ್ ಅಲ್ಲಾವುದ್ದೀನ್ ಅವರ ಸಮಾಧಿ ಸ್ಥಳ ಹಾಗೂ ಅಲ್ಲಿ ನಡೆಯುತ್ತಿದ್ದ ವಾರ್ಷಿಕ ಜಾತ್ರೆಯ ಕುರಿತು ದಾಖಲಿಸಿದ್ದಾರೆ.
ಅವರ ವಿವರಣೆಯ ಪ್ರಕಾರ, ವ -ಬೆಂಗಳೂರ,ಹೈದ್ರಾಬಾದ, ಬಿಜಾಪುರ, ಆಂಧ್ರದ ಗುಂಟೂರು, ಉಸ್ಮಾನಾಬಾದ, ಸೋಲಾಪುರ, ಬೀಡ, ನಾಸಿಕ್, ಸುರಪುರ, ಶಹಾಪುರ,ಯಾದಗಿರಿ, ಸೇಡಂ, ಅಹ್ಮದ ನಗರ, ಮುಂತಾದ ರಾಜ್ಯ ಜಿಲ್ಲೆಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

