ಸೃಜನಶೀಲ ಬೌದ್ಧ ಸಾಹಿತಿ ಪ್ರೊ.ಟಿ.ಎಂ.ಭಾಸ್ಕರ್
ಸೃಜನಶೀಲ ಬೌದ್ಧ ಸಾಹಿತಿ ಪ್ರೊ.ಟಿ.ಎಂ.ಭಾಸ್ಕರ್
ಒಲವೆಂಬ ಹೊತ್ತಿಗೆಯನೋದ ಬಯಸುವ ನೀನು ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ! ಹಗಲಿರುಳು ದುಡಿದರೂ,ಹಲುಜನುಮ ಕಳೆದರೂ ನೀ ತೆತ್ತಲಾರೆ ಬರಿ ಅಂಚೆವೆಚ್ಚ...... ಬೇಂದ್ರೆ
ಕಲ್ಯಾಣ ಕರ್ನಾಟಕದ ಸೃಜನಶೀಲ, ಸಂವೇದನಾಶೀಲ ಬರಹಗಾರ, ಲೇಖಕ, ಸಾಹಿತಿ, ಜಾನಪದ ವಿದ್ವಾಂಸರಲ್ಲಿ, ಬೌದ್ಧ ಸಾಹಿತ್ಯ ರಚನೆಯಲ್ಲಿ ಎದ್ದು ಕಾಣುವ ಹೆಸರು ಪ್ರೊ.ಟಿ.ಎಂ.ಭಾಸ್ಕರ್ ಅವರದ್ದು. ಇವರು ಕಲಬುರಗಿ ಜಿಲ್ಲೆಯ ಆಳಂದ(ಇಂದಿನ ಕಮಲಾಪುರ) ತಾಲೂಕಿನ ವಿ.ಕೆ.ಸಲಗರ ಗ್ರಾಮದವರು. ಅಲ್ಲಿಯ ಮಾದಾರ ಚೆನ್ನಯ್ಯನ ಕೇರಿಯಿಂದ ಎದ್ದು ಬಂದವರು. ಬಡತನ, ಹಸಿವು, ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆಯ ಕೆಸರಿನಲ್ಲಿ ಹುಟ್ಟಿ ಕಮಲವಾಗಿ ಅರಳಿದ ಬಹುಮುಖ ಪ್ರತಿಭೆ. ಪ್ರೊ.ಟಿ.ಎಂ ಭಾಸ್ಕರ ಅವರು ಅನಕ್ಷರಸ್ಥ ಕುಟುಂಬ. ಆದರೂ ಜನಪದ ಸಾಹಿತ್ಯದ ಕಣಜ
ತಾಯಿ, ತಂದೆ, ಕೇರಿಯ ಜನಸಮುದಾಯದ ಹಾಡು, ಕುಣಿತ, ಕಲೆಗಳನ್ನು ಹುಟ್ಟಿನಿಂದಲೇ ಕೇಳಿಸಿಕೊಂಡು, ನೋಡುತ್ತಾ ಬೆಳೆದವರು. ಅವರಿಗೆ ರಕ್ತಗತವಾಗಿ ಹಾಸುಹೊಕ್ಕಾಗಿ ಬಂದ ಬಳುವಳಿಗಳು. ಇಂತಹ ಸಲಗರದ ಮರಿಗೆಪ್ಪ ಮತ್ತು ಮರೆಮ್ಮರ ಮಗನಾಗಿ ೦೪-೦೧-೧೯೬೩ರಂದು ಜನಿಸಿದವರು. ಇವರ ಪೂರ್ಣ ತಿಪ್ಪಣ್ಣ ಮರಿಗೆಪ್ಪ ಭಾಸ್ಕರ. ತಮ್ಮ ಊರಾದ ಸಲಗರ ಬಹು ಪ್ರಸಿದ್ದಿ. ಹಲವು ಪ್ರತಿಭಾವಂತರನ್ನು ಕೊಟ್ಟ ನೆಲ. ಅದರಲ್ಲಿ ಭಾಸ್ಕರ ಅವರೊಬ್ಬರು. ಪ್ರಾಥಮಿಕ ಶಾಲೆಯನ್ನು ಅಲ್ಲಿಯೇ ಕಲಿತು, ಕಾಲೇಜು ಕಟ್ಟೆಯನು ಏರಲು ಕಲಬುರಗಿ ಪ್ರವೇಶಿಸಿದರು. ಪಿಯುಸಿ, ಬಿ.ಎ. ಪದವಿ ಪೊರೈಸಿದರು ಎಂ.ಎ ಕನ್ನಡ ಪದವಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯದಿಂದ ೧೯೮೭ರಲ್ಲಿ ಪಡೆದವರು. ಹಾಗೆ ಪ್ರೊ.ಪಿ.ಕೆ.ಖಂಡೋಬಾ ಅವರ ಮಾರ್ಗದರ್ಶನದಲ್ಲಿ ಬೀದರ ಜಿಲ್ಲೆಯ ಸಂಪ್ರದಾಯದ ಹಾಡುಗಳು ಕುರಿತು ಎಂ.ಫಿಲ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, 'ಸುಡುಗಾಡು ಸಿದ್ದರು: ಒಂದು ಸಾಂಸ್ಕೃತಿಕ ಅಧ್ಯಯನ' ಎಂಬ ವಿಷಯದ ಮೇಲೆ ಮಹಾಪ್ರಬಂಧ ರಚಿಸಿ ಡಾಕ್ಟರೇಟ್ ಪದವಿ ಗಳಿಸಿದರು.
ವೃತ್ತಿಗಾಗಿ ಅಲೆಯಲಿಲ್ಲ ತಾವಾಗಿ ಬಂದವು : ೧೯೮೯ ರಲ್ಲಿ ಎಂ.ಫಿಲ್ ಪದವಿಗಳಿದ ತಕ್ಷಣವೇ ಡಾ.ಅಂಬೇಡ್ಕರ ಪದವಿ ಮಹಾವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾದರು. ೧೯೯೧-೯೨ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ಅತಿಥಿ ಉಪನ್ಯಾಸಕರಾಗಿ, ಕಲಬುರಗಿ ಪ್ರತಿಷ್ಠಿತ ನೂತನ ಪದವಿ ಪೂರ್ವ ಕಾಲೇಜಿನಲ್ಲಿ ಖಾಯಂ ಅಧ್ಯಾಪಕರಾಗಿ ೧೯೯೩-೯೫ ರವರೆಗೆ ಸೇವೆಸಲ್ಲಿಸಿ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಖಾಯಂ ಅಧ್ಯಾಪಕರಾಗಿ ೧೯೯೫ ರಲ್ಲಿ ಸೇವೆಗೆ ಹಾಜರಾದರು. ಅಲ್ಲಿಂದ ಪ್ರವಾಚಕರಾಗಿ, ಪಿ.ಜಿ.ಸೆಂಟರ್ ರಾಯಚೂರಿನಲ್ಲಿ ಸೇವೆ, ಪ್ರಸಾರಾಂಗದ ಉಪನಿರ್ದೇಶಕರಾಗಿ, ಸೇವೆ. ೨೦೦೮ ರಲ್ಲಿ ಪ್ರತಿಷ್ಠಿತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅಲ್ಲಿಂದ ಪೀಠದ ಅಧ್ಯಕ್ಷರಾಗಿ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಳ್ಳಾರಿಯ ಕುಲಸಚಿವರಾಗಿ, ಹಾವೇರಿ ಪಿ.ಜಿ.ಸೆಂಟರ್‌ದ ನಿರ್ದೇಶಕರಾಗಿ, ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾಗಿ, ವಿದ್ಯಾ ವಿಷಯಕ ಪರಿಷತ್ ಸದಸ್ಯರಾಗಿ, ಕಲಾ ನಿಕಾಯ ಡೀನರಾಗಿ, ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಪೀಠದ ನಿರ್ದೇಶಕರಾಗಿ,
ಚಿತ್ರಕಲಾ ವಿಭಾಗ ಮತ್ತು ಜೈನಾಲೋಜಿ ವಿಭಾಗದ ಸಂಯೋಜಕರಾಗಿ, ಮರಾಠಿ ಅಧ್ಯಯನ, ಉರ್ದು ಅಧ್ಯಯನ, ವಿದೇಶಿ ಭಾಷಾ ಅಧ್ಯಯನ ವಿಭಾಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರಿ ನಾಲ್ಕನೆಯ ಕುಲಪತಿಯಾಗಿ ೧೯-೦೭-೨೦೨೨ರಂದು ಗೋಟಗೋಡಿಗೆ ಕುಲಪತಿಯಾಗಿ, ದೇಶದ ಏಕೈಕ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ನೇಮಕ ಹೊಂದಿ ತಮ್ಮ ಕರ್ತವ್ಯದಲ್ಲಿದ್ದಾರೆ. ಕುಲಪತಿಯಾಗಿ ಸೇರಿದ ವರ್ಷದಲ್ಲಿ ಹಿಂದೆ ನಿಂತು ಹೋದ ನೇಮಕವನ್ನು ಮಾಡಿದ ಗಟ್ಟಿಗರು. ಇವು ಯಾವು ಅವರು ಬೆನ್ನು ಹತ್ತಿ ಹಪಾಹಪಿತನ ಮಾಡಿ ಬಂದ ಫಲಗಳಲ್ಲ. ಅವರ ವಿದ್ವತ್ತು, ಓದು, ಪ್ರತಿಭೆಗೆ ಸಂದ ಗೌರವವಾಗಿವೆ. ಸಹಜತೆ ಒಲಿದವುಗಳಾಗಿವೆ.
ಸೃಜನಶೀಲ ಸಾಹಿತ್ಯ: ಸೃಜನಶೀಲ ಬರಹ ಬಹುಕಾಲ ನಮ್ಮ ನೆಲೆಗೆ ಬಂದು ನಿಲ್ಲುತ್ತದೆ. ಅವರು ವಿದ್ಯಾರ್ಥಿ ದೆಸೆಯಿಂದ ಕಾವ್ಯ ರಚನೆಗೆ ತೊಡಗಿದವರು. ಹೊಸದಾರಿ ೧೯೮೯ರಲ್ಲಿ ಪ್ರಕಟವಾಗಿದೆ. ಮೂವತ್ತೈದು ವರ್ಷ ಕಾವ್ಯಯಾನದಲ್ಲಿ ಹೊಸದಾರಿ, ಮಾತಾಡುವ ಎಲುಬುಗಳು, ನೀರ ಮೇಲಿನ ಮಳೆ ಎಂಬ ಮೂರು ಸಂಕಲನ ಹೊರತಂದವರು. ಅವರ ಕಾವ್ಯದಲ್ಲಿ ಸಾಮಾಜಿಕ ಚಿಂತನೆ, ದಲಿತ ಪ್ರಜ್ಞೆ, ರಾಜಕೀಯ ತೊಳಲಾಟ, ಭ್ರಷ್ಟಾಚಾರ, ಮೌಡ್ಯ, ಸಂಪ್ರದಾಯ, ಮೂಡನಂಬಿಕೆ, ಶೋಷಣೆ, ಹಿಂಸೆ, ದೌರ್ಜನ್ಯಗಳು, ದೇವರು, ಧರ್ಮದ ಆಷಾಡಭೂತಿತನ, ಪ್ರಚಲಿತ ಘಟನೆಗಳು ಅನಾವರಣಗೊಂಡಿವೆ. ಇವರ ಕಾವ್ಯ ಸಹಜತೆ, ಪ್ರಾಸ, ಪ್ರತಿಮೆ, ಸಂಕೇತ ಬಳಸಿದರೂ ಸಹ ತತ್ವ ಪದ ಮಾದರಿ ಹಾಗೂ ಬೆಡಗಿನ ಅಂಶಗಳು ಎದ್ದು ಕಾಣುತ್ತವೆ.
ಗಜಲ್ ಕಾವ್ಯ ಉರ್ದುವಿನ ಮೂಲಕ ಕನ್ನಡ ಪ್ರವೇಶಿಸಿದೆ. ಶಾಂತರಸ, ಮುಕ್ತಾಯಕ್ಕರಿಂದ ಪ್ರಾರಂಭವಾಗಿ ನೂರಾರು ಗಜಲ್ ಕಾರರು ಗಜಲ್ ಬರೆಯ ಹತ್ತಿದ್ದಾರೆ. ಆ ಸಾಲಿಗೆ ಭಾಸ್ಕರ ಅವರು ಸೇರಿ "ನನ್ನ ಮನದ ಗಜಲ್" ಎಂಬ ಸಂಕಲನ ಹೊರ ತಂದು, ಪ್ರೀತಿ, ಪ್ರೇಮ, ಪ್ರಣಯ, ಮುಕ್ತವಾಗಿ ಹೇಳುತ್ತಾ ದಾಂಪತ್ಯದ ಸವಿ ನೀಡಿ ಸಾಮಾಜಿಕ ಕಾಳಜಿಯ ಗಜಲ ಹೊರಬಂದಿರುವುದು ವಿಶೇಷವಾಗಿ ಕಾಣಿಸುತ್ತವೆ.
ನಾಟಕವೆಂಬ ಲೋಕದೊಳಗೆ:
ನಾಟಕ ಬರೆಯಲು ಅವರಿಗೆ ಹಳ್ಳಿಯಲ್ಲಿ ಜರುಗುವ ಬಯಲಾಟ, ಸಣ್ಣಾಟ, ಸಾಮಾಜಿಕ, ಹವ್ಯಾಸಿ ನಾಟಕಗಳು ಪ್ರೇರಣೆ ನೀಡಿವೆ. ಅಂಬೇಡ್ಕರ್ ಅವರ ಹೋರಾಟವೇ ನಮ್ಮ ಪ್ರಕೃತಿದತ್ತ ಕೊಡುಗೆಯಾದ ನೀರನ್ನು ಮುಟ್ಟುವುದರ ಮೂಲಕ ಕ್ರಾಂತಿ ಮಾಡಿದರು. ಮಹಾಡ್ ಕೆರೆಯ ಪ್ರವೇಶದ ಹಿನ್ನೆಲೆಯಲ್ಲಿ ಮೂಲ ಬಂದ ನಾಟಕ ನೀರು ಬೇಕು ನೀರು ನಾಟಕವಾಗಿದೆ. ಚಿಕ್ಕ ನಾಟಕವಾದರೂ ಅದನ್ನು ರಚನೆ, ಪ್ರಯೋಗ ಹಾಗೂ ತಂತ್ರ, ಶೈಲಿಯಿಂದ ಗಮನ ಸೆಳೆದಿದೆ. ಗಾಂಧಿ ಟೋಪಿ ಕೌಜಲಗಿ ಹನುಂತರಾಯರ ಹಿನ್ನೆಯಲ್ಲಿ ಸ್ವಾತಂತ್ರ್ಯ ಹೋರಾಟದ ಮಹತ್ವದ ದಾಖಲೆ, ಗೌಡ ದೊಡ್ಡ ಸಾಮಾಜಿಕ ನಾಟಕ. ಹಿಂದಿನ, ಇಂದಿನ ಸಾಮಾಜಿಕ ವ್ಯವಸ್ಥೆ ಅನಾವರಣಗೊಂಡಿದೆ. ದಲಿತ, ದಮನಿತರ ಮೇಲೆ ನಡೆಯುವ ಆಕ್ರಮಣ, ಜಾತಿ, ಕೆಳವರ್ಗದ ಮಹಿಳಾ ಸ್ಥಿತಿ ತಲ್ಲಣ ತವಕಗಳನ್ನು ಗೌಡನ ಮೂಲಕ ಚಿತ್ರಿದ್ದಾರೆ. ಭೂಮಿ ಮಹಿಳಾ ಹಾಗೂ ದೇಶದ ವ್ಯವಸ್ಥೆಗೆ ಕನ್ನಡಿ ಹಿಡಿದಿವೆ. ಮಲ್ಲಿಗೆ ಎಂಬ ಆರು ನಾಟಕಗಳು ಗೀತನಾಟಕಗಳಾಗಿವೆ. ಇಲ್ಲಿಯ ವಸ್ತು ವೈವಿಧ್ಯತೆಯಿಂದ ಕೂಡಿದೆ. ಇವು ಒಂದಕ್ಕೊಂದು ಮುಂದುವರಿಕೆಯಾಗಿ ಮೂಡಿ ಬಂದಿವೆ. ಮೂಕನಾಯಕ ಎಂಬ ನಾಟಕ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ತೆರೆದ ಪತ್ರಿಕೆ. ಆ ಮೂಲಕ ಅಂಬೇಡ್ಕರ್ ಅವರ ಚಿತ್ರಣ ನಾಟಕದ ಮೂಲಕ ಬಿತ್ತರಿಸಿದ್ದಾರೆ. ಹತ್ತೊಂಬತ್ತು ನಾಟಕವನ್ನು ಪ್ರಕಟಿಸಿ ನಾಟಕಕಾರರಾಗಿದ್ದಾರೆ.
ವೈಚಾರಿಕತೆಗೆ ಒರೆಗಲ್ಲಿಗೆ ಹಚ್ಚಿದವರು:
ವೈಜ್ಞಾನಿಕ, ವೈಚಾರಿಕ, ವಿಚಾರ ಸಾಹಿತ್ಯ ನಮ್ಮಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ಡಾ.ಭಾಸ್ಕರ ಅವರು ಮೂಲ ಚಿಂತನೆ ವೈಚಾರಿಕವಾಗಿವೆ. ಭಾರತೀಯರೇ ಎಚ್ಚರ ಎಂಬ ಪುಸ್ತದಲ್ಲಿ ಹಲವು ಲೇಖನಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಲಯದಲ್ಲಿ ಚಿಂತನೆಗೆ ಹಚ್ಚುವ ಲೇಖನಗಳಿವೆ. ಅಂಬೇಡ್ಕವಾದ ಮತ್ತು ದಲಿತರು ವೈಚಾರಿಕ ಲೇಖನಗಳ ಸಂಕಲನ ಇಲ್ಲಿ ಭಜನೆ ಹಾಡುಗಳು, ಕಾವ್ಯ, ನಾಟಕ, ಹಾಗೂ ಗದ್ಯ ಬರಹದಲ್ಲಿ ಒಡಮೂಡಿದ ಚಿಂತನಾರ್ಹ ಲೇಖನಗಳಿವೆ. ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ, ಹಿಂದೂ ಕೊಡ್‌ಬಿಲ್, ಮಹಿಳೆಯರ ಸಲುವಾಗಿ ಮಾಡಿದ ಕಾನೂನು, ಹಕ್ಕು, ಕರ್ತವ್ಯ, ಮಹಿಳೆಗೆ ವಿಮೋಚನೆ ನೀಡಿದವರು. ಮನುಸ್ಮತಿ ಸುಟ್ಟು ಹಾಕಿದ ಅವರು ಸಂವಿಧಾನದಲ್ಲಿ ಪ್ರತಿಯೊಬ್ಬ ಮಹಿಳೆಗೆ ಅಭಿವ್ಯಕ್ತಿ, ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಸಮಾನತೆ ಕೊಟ್ಟ ಅರಿವಿನ ಗುರು ಎಂದು ಮಹಿಳೆ ಮತ್ತು ಅಂಬೇಡ್ಕರ್ ಎಂಬ ಹೆಸರಲ್ಲಿ ಪ್ರಕಟಿಸಿ ಓದುಗರಿಗೆ ತಿಳಿಸಲು ಅನುಕೂಲವಾಗಿದೆ. ಇಂತಹ ಬರಹಗಳ ಮೂಲಕ ಕಾಡುತ್ತಾರೆ.
ವಚನಕ್ಕೆ ಶರಣಾದವರು:
ವಚನ ಸಾಹಿತ್ಯದ ಹಲವು ಮಗ್ಗುಲುಗಳನ್ನು ಪರಿಚಯಿಸುವ ಕೃತಿ ವಚನ ಸಂಸ್ಕೃತಿ. ಹಾರಕೂಡದ ಶ್ರೀಮಠದಿಂದ ಪ್ರಕಟವಾಗಿದೆ. ಉರಿಲಿಂಗದೇವ, ಉರಿಲಿಂಗಪೆದ್ದಿಯ ಲೇಖನಗಳು ಗಮನ ಸೆಳೆಯುತ್ತವೆ. ಶರಣರ ವಿಚಾರಧಾರೆಗಳನ್ನು ಮೆಲುಕು ಹಾಕುವ ಮೂಲಕ ಸಾಮಾಜಿಕ ಸ್ಥಾನಮಾನ ನೀಡಿರುವರು. ದಾಸ ಸಾಹಿತ್ಯದ ಹಲವು ಆಯಾಮ ಪರಿಚಯ ಇರುವ ಡಾ.ಭಾಸ್ಕರ ಅವರು ಸಂತ, ಕವಿ, ದಾಸ ಕನಕ ದಾಸರ ಜೀವನ ಸಾಧನೆ, ಕಾವ್ಯ, ಕೀರ್ತನೆಗಳ ಮೂಲಕ ಬುದ್ಧನನ್ನು ಹೋಲಿಸಿ ತೌಲನಿಕ ಅಧ್ಯಯನ ಮಾಡಿದ ಅಪರೂಪದ ಎರಡು ಮಹಾನದಿಗಳ ಚಿಂತನೆ, ಆಧ್ಯಾತ್ಮ ವಿಚಾರಧಾರೆಗಳು ಬಹುಮುಖಿನೆಲೆಗಳಲ್ಲಿ ಹೆಕ್ಕಿ ತಗೆದಿದ್ದಾರೆ. ಸಿಂಚನ ಪ್ರಕಾಶನದ ಮೂಲಕ ದಾರ್ಶನಿಕ ಮಹಾಕವಿ ಕನಕದಾಸರ ಪುಸ್ತಕ ರಚಿಸಿದ್ದಾರೆ.
ಹೊನ್ನಬಿತ್ತೇವ ಹೊಲಕ್ಕೆಲ್ಲ:
ಪ್ರೊ.ಟಿ.ಎಂ.ಭಾಸ್ಕರ ಅವರು ತಮ್ಮ ಮನೆಯ ಪರಿಸರದಿಂದ ಜಾನಪದ ಹಾಡು ಕೇಳುತ್ತಾ ಬಂದವರು.
ಸ್ವತಃ ಅವರ ತಾಯಿ ಮನೆಯಲ್ಲಿ ಹಾಡುವ ಜನಪದ ಗೀತೆ ಕೇಳಿಕೊಂಡು,ಆಲಿಸಿಕೊಂಡು ಬಂದವರು.ಮುಂದೆ ತಮ್ಮ ಸಂಶೋಧನೆಯನ್ನು ಜಾನಪದ ಬುಡಕಟ್ಟು ವಿಷಯ ಆಯ್ದುಕೊಂಡವರು. ಬೀದರ ಜಿಲ್ಲೆಯ ಸಂಪ್ರದಾಯ ಹಾಡುಗಳು (ಎಂ.ಫಿಲ್)ಸುಡುಗಾಡುಸಿದ್ದರು : ಒಂದು ಸಾಂಸ್ಕೃತಿಕ ಅಧ್ಯಯನ (ಪಿಎಚ್.ಡಿ ) ಮಹಾಪ್ರಬಂಧ ೨೦೦೦ರಲ್ಲಿ ಪ್ರಕಟಗೊಂಡಿದೆ. ಸುಡುಗಾಡು ಸಿದ್ಧರ ಪರಂಪರೆ, ಜೀವನ ವಿಧಾನ, ಕಲೆ, ಸಂಸ್ಕೃತಿ, ಸಾಹಿತ್ಯ, ಪ್ರಸಾರ, ಜಾತಿ, ಉಪಜಾತಿ, ಪಂಗಡ, ಬೆಡಗು, ಆಹಾರಪದ್ದತಿ ಅವರ ಸಮಗ್ರ ಜೀವನ ಜಿಲ್ಲಾವಾರು ಜನಸಂಖ್ಯೆ, ಎಲ್ಲಾ ವಿವರ ಸಮಗ್ರವಾಗಿ ಸಂಶೋಧನೆ ಮಾಡಿ ಸುಡುಗಾಡು ಸಿದ್ಧರ ಮೇಲೆ ಅಥೆಂಟಿಕ್ ಆಕರ ಗ್ರಂಥವಾಗಿದೆ. ಕಸುಬಿನ ಹಾಡುಗಳು ಇವು ಜನಪದರ ವೃತ್ತಿ ಸಂದರ್ಭದಲ್ಲಿ ಅವರು ಕೆಲಸದಲ್ಲಿ ತೊಡಗಿದಾಗ ಆಯಾ ಕಸಬಿನಲ್ಲಿ ಹಾಡುವ ಹಾಡು ಸಂಗ್ರಹಿಸಿದ್ದಾರೆ. ಜಾನಪದ ಅಕಾಡೆಮಿ ಪ್ರಕಟಿಸಿದೆ. ಅಲೆಮಾರಿಗಳು ಹಾಗೂ ಜಾಗತೀಕರಣ ಎಂಬ ಕೃತಿಯಲ್ಲಿ ಸುಡುಗಾಡು ಸಿದ್ದರು ಅಲೆಮಾರಿ ಜನಾಂಗ ಬುಡಕಟ್ಟು ಜನಾಂಗದ ಸ್ಥಿತಿಗತಿಯನ್ನು ಹೇಳುತ್ತ ಇವತ್ತಿನ ಜಾಗತೀಕರಣ ಹೂತಿನಲ್ಲಿ ಅವರ ಚಿಂತನೆ ಮಾಡಿದ್ದು ಗಮನಾರ್ಹ ಸಂಗತಿ. ಜನಪದ ಕಥನಗೀತೆಗಳು ಪಠ್ಯಕ್ಕೆ ಸಂಪಾದಿಸಿದ ಸಂಗ್ರಹವಾಗಿದೆ. ನಮ್ಮ ಸುತ್ತಿನ ಒಗಟುಗಳು ಎಂಬ ಅಪರೂಪದ ಒಗಟು ಸಂಗ್ರಹಿಸಿದ್ದಾರೆ. ಇದೇ ಭಾಗದ ಒಗಟುಗಳಲ್ಲಿ
ತಾಜಾತನ ಹೇಳಿ ಒಗಟು ಪರಂಪರೆಯನ್ನು ದಾಖಲಿಸಿದ್ದಾರೆ. ಇವು ಜಾನಪದದ ಹೊನ್ನ ಬಿತ್ತಿದ್ದಾರೆ.
ತತ್ವ ಪದದ ಜಾಡು ಹಿಡಿದು:
ಪ್ರೊ.ಭಾಸ್ಕರ ಅವರು ಶರಣರ ಪ್ರಭಾವವಾದಂತೆ ತತ್ವಪದ ಕಡೆ ಜಾಡು ಹಿಡಿದು ನಿಂತರು. ತತ್ವಪದ ಸಾಹಿತ್ಯ ಕಲ್ಯಾಣ ಕರ್ನಾಟಕ ಪ್ರದೇಶದ ವಿಶಿಷ್ಟ ಪ್ರಕಾರ. ಯಾವ ಕಾಲದ ಸಾಹಿತ್ಯದ ಕತ್ತಲುಯುಗ ಎಂದು ಕರೆಯಿತೋ ಅದೇ ಹೊತ್ತಿಗೆ ಈ ನೆಲದಿಂದ ಎದ್ದು ಬಂದ ತತ್ವಪದಗಳು ಲಕ್ಷಗಟ್ಟಲೇ ಹೊರಬಂದವು. ಸಾವಿರಾರು ತತ್ತ್ವಪದಕಾರರು ತಮ್ಮ ಶಿಷ್ಯ-ಗುರುವಿನ ಮೂಲಕ ಎಲ್ಲಾ ಜಾತಿಯ ಬೇರು ಕಾಂಡಕಾಡಾಗಿ ನಿಂತವು. ಮಹಾಗಾಂವದ ಮೀರಾಸಾಬ, ಕ್ವಾನಳ್ಳಿ ಹೊನ್ನಪ್ಪ ಮಹಾರಾಜರು, ಹಿರಾಪೂರದ ಕಾಶೀನಾಥ ಗವಾಯಿಗಳು ರಚಿಸಿದ ತತ್ತ್ವಪದಗಳು ಪಂಚಶೀಲನ ಮೂಕನಾಯಕ ಎಂಬ ಹೆಸರಲ್ಲಿ ಪ್ರಕಟಿಸಿರುವರು. ಅವರ ಜೀವನ ಚರಿತ್ರೆ ಸಂಕ್ಷಿಪ್ತ. ಹಾಡುಗಳು ಅಧ್ಯಯನಕ್ಕೆ ಯೋಗ್ಯವಾಗಿವೆ. ಪಂಚಶೀಲ ಕವಿ ಮೇಲೆ ಬೆಳಕು ಚೆಲ್ಲುತ್ತದೆ. ತತ್ತ್ವಪದದ ಜಾಡು ಹಿಡಿದು ಅನುಭಾವದ ಪಥಕ್ಕೆ ಕರೆದೊಯ್ಯುವ ಕೆಲಸ ಭಾಸ್ಕರ ಅವರು ಮಾಡಿದ್ದಾರೆ.
ಬೌದ್ಧ ಸಾಹಿತ್ಯದ ಪರಿಶೋಧನೆಗೆ ಜಂಗಮವಾದವರು:
ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡಿದ ಇವರು ಬೌದ್ಧ ಸಾಹಿತ್ಯದ ಕಡೆ ಮುಖಮಾಡಿ ಎರಡುವರೆ ದಶಕಗಳ ನಿರಂತರ ಅಧ್ಯಯನ, ಅನ್ವೇಷಣೆ, ವಿಮರ್ಶೆ ಕಡೆ ಮುಖ ಮಾಡಿದವರು. ಬೋಧಿವೃಕ್ಷದ ಕೆಳಗೆ ೨೦೦೦, ಧರ್ಮಪುರಿ-೨೦೧೬, ಸಾರಿಪುತ್ರ-೨೦೧೯ ಮಹಾಬೋಧಿ-೨೦೧೯, ಭೂತದೊಳಗಣ ಭೂತ, ಇವರ ನಾಟಕಗಳು. ತಥಾಗತ ದರ್ಶನ ಎಂಬ ಖಂಡಕಾವ್ಯವನ್ನು ಪ್ರಕಟಿಸಿ ಖಂಡಕಾವ್ಯ ಪ್ರಕಾರದಲ್ಲಿ ಕೃಷಿ ಮಾಡಿದ್ದಾರೆ. ಅಂಗುಲಿಮಾಲ, ಯಶೋಧರೆ, ಇವು ಕಾವ್ಯಗಳು. ಬುದ್ಧ ಚಿಂತನೆ, ಧಮ್ಮ ಸಂಮ್ಮಾನ, ಬೌದ್ಧಾನ್ವೇಷಣೆ, ಬೌದ್ಧಶಾಸ್ತ್ರ ಸಾಹಿತ್ಯ, ಬುದ್ಧನ ಸಂಘ ಪರಿಕಲ್ಪನೆ, ಸ್ವಯಂ ಪ್ರಕಾಶಿತರಾಗಿ, ಸಾವಿರದ ಗ್ಲೋಗನ್ನ ಮೊದಲಾದ ಬೌದ್ಧ ಸಾಹಿತ್ಯಕ್ಕೆ ವಿಶೇಷ ಒತ್ತು ನೀಡಿದ್ದಾರೆ. ಕಾವ್ಯ, ವೈಚಾರಿಕ, ಖಂಡಕಾವ್ಯ, ಸಂಪಾದನೆ, ವಿಮರ್ಶೆ ಮಾಡಿದಂತೆ
ಬುದ್ಧ ಭಾರತದ ಬದ್ಧತೆಯ ಮಹಾಕವಿ:
ಬುದ್ಧ ಭಾರತ ಎಂಬ ಮಹಾಕಾವ್ಯ ರಚಿಸಿದ್ದಾರೆ. ಇದರಲ್ಲಿ ಹತ್ತು ಸಾವಿರ ಪದ್ಯಗಳಿವೆ. ಮಹಾಕಾವ್ಯ ಸುತ್ತು, ಕಪಿಲವಸ್ತು ಮಹಾತಾಯಿ ಸುತ್ತು, ಶುದ್ಧೋದನ
ಪ್ರಜಾಪತಿ ಗೌತಮಿ, ಆದಿಬುದ್ಧ, ಬುದ್ಧನ ಪಯಣ, ಬುದ್ಧ ಮತ್ತು ಮಾರ, ಶ್ರಮಣ ಜೀವನ, ಅನಾಪನಸತಿ, ಸುಜಾತಾ, ಜ್ಞಾನೋದಯ, ಬುದ್ಧ ದೇವನ, ಆರ್ಯಸತ್ಯ ಅರಿಯುವ, ಬುದ್ಧ ದೇವನಿಗೆ ಸ್ವಾಗತ, ಬೋಧಿ ಸುತ್ತ, ಧಮ್ಮಚಕ್ರ ಪವರ್ತನ, ಪರಿಶುದ್ಧತಾ ಧಮ್ಮ, ಯಶೋಧರೆ, ರಾಹುಲ, ಆನಂದ, ಚಾಂಡಾಲಿ, ಉಪಾಲಿ, ದೇವದತ್ತ, ಬಿಂಬಸಾರ, ಚನ್ನ, ಅಂಗುಲಿಮಾಲ, ಸಾರಿಪುತ್ರ, ಹೀಗೆ... ೨೯ ಸುತ್ತುಗಳ ಸಂಗುಲಿಮಾಲನ ತನಕ ಒಂದು ಸಂಪುಟದಲ್ಲಿ ನಸಲ್ಕು ನೂರು ಪುಟ ವಿಸ್ತರಿಸಿಕೊಂಡಿದೆ. ಮಹಾಕಾವ್ಯದ ಸುತ್ತು ಸುತ್ತುತ್ತಲೇ ಕಾವ್ಯಾತ್ಮಕವಾಗಿ, ಹಾಡು ಗದ್ಯಾತ್ಮಕದ ರೀತಿಯಲ್ಲಿ ಓತಪ್ರೋತವಾಗಿ, ಪ್ರಾಸ, ಆದಿ, ಅಂತ್ಯ, ಮಧ್ಯ ಪ್ರಾಸಗಳು, ಉಪಮೆ, ಅಲಂಕಾರ, ಶಬ್ದದ ಚಮತ್ಕಾರ, ಭಾಷೆಯ ಹಿಡಿತ, ಉದ್ದಂಡ ಷಟ್ಪದಿಯ ಸರಳ ಛಂದಸ್ಸು, ಹೊಸಗನ್ನಡದ ಆಡು ನುಡಿಗಟ್ಟು, ಬುದ್ಧನೇ ತನ್ನ ಹಿಂದಿನ ಪಯಣದ ಯಾನವನ್ನು ಬಿತ್ತರಿಸುತ್ತ ಓದಲು,ಲಯ, ರಾಗಬದ್ಧವಾಗಿ ಹಾಡಲು ಹಾಡುಗಬ್ಬ ರಚಿಸಿದ್ದಾರೆ. ಅದರಂತೆ ಬುದ್ದನ ಜೀವನ ಚರಿತ್ರೆ ಮಾತ್ರ ಹೇಳುವ ಕಥನವಲ್ಲ ಇದೊಂದು ಬುದ್ಧ ತತ್ವ ಸಿದ್ದಾಂತ, ತತ್ವ ಚಿಂತನೆಯನ್ನು ಕೊಡುತ್ತ ಸತ್ಯಗಳ ನಿತ್ಯ ಜನರಿಗೆ ಅದರಲ್ಲು
ಇಂದಿನ ದೇಶ, ಜನಾಂಗಕ್ಕೆ ಬೇಕಾಗುವ ಶಾಂತಿ,ಪ್ರಜ್ಞೆ,ಶೀಲ,ಕರುಣೆಯನ್ನು ಪ್ರತಿಪಾದಿಸುತ್ತಾರೆ. ಭಾಷೆಯಂತೂ ಹೂ ಭಾಷೆಯಾಗಿದೆ. ಬುದ್ಧನು ಹಾಗೇ ಅಲ್ಲವೇ ? ಇಲ್ಲಿಯ ಭಾಷೆ ಉಜ್ಜಿ ಉಜ್ಜಿ ನುಣುಪಾಗಿಸಿದ ಸರಳ ತಾಜಾತನದ ಭಾಷೆ ಕಂಡಾಗ ನಮಗೆ ಆಶ್ಚರ್ಯ ವಾಗಿತ್ತದೆ.ಆ ಕಾವ್ಯದ ತನ್ಮಯತೆ,ಸೊಗಸುಗಾರಿಕೆ ಇಡೀ ಕಾವ್ಯ ಆವರಿಸಿದೆ.ಓದಲು ಕುಳಿತರೆ ಕೆಳಗೆ ಇಡಲಾರದ ಹಾಗೇ ಓದಿಸಿಕಿಂಡು ಹೋಗುವ ಕಾವ್ಯ ! ದಲಿತ ಲೋಕದ ಕವಿಗಳಾದ ಸಿದ್ಧಲಿಂಗಯ್ಯ,ಎಲ್. ಹನುಮಂತಯ್ಯ, ಮೂಡ್ನಕೂಡು ಚಿನ್ನಸ್ವಾಮಿ, ಕೆ.ಬಿ.ಸಿದ್ಧಯ್ಯ ಮೊದಲಾದವರು ಮಹಾಕಾವ್ಯ ರಚಿಸದೇ ಇರುವ ಗ್ಯಾಪ್ ಅನ್ನು ತುಂಬುವ ಕೆಲಸ ಡಾ.ಭಾಸ್ಕರ್ ಅವರು ಮಾಡಿದ್ದಾರೆ. ತಮ್ಮ ಶಕ್ತಿ ಮೀರಿ ಬುದ್ಧ ಭಾರತ ಮಹಾಕಾವ್ಯ ರಚಿಸಿ ಮಹಾಕವಿ ಎನಿಸಿದ್ದಾರೆ.ಸಂಪಾದನೆ ಶಾಸ್ತ್ರಕ್ಕೊಂದು ಬಟ್ಟೆ ನೇಯ್ದವರು:
ಡಾ.ಭಾಸ್ಕರ ಅವರು ದಲಿತದನಿ ಎಂಬ ಪ್ರಾತಿನಿಧಿಕ ದಲಿತ ಕಾವ್ಯ ಸಂಗ್ರಹವನ್ನು ಡಾ.ಸ್ವಾಮಿರಾವ್ ಕುಲಕರ್ಣಿ, ಡಾ.ಸೂರ್ಯಕಾಂತ ಸುಜ್ಯಾತ್ ರೊಂದಿಗೆ ಹೊರತಂದರು. ಪ್ರೊ.ಬರಗೂರು ರಸಮಚಂದ್ರಪ್ಪನವರು ಜನಾರ್ಪಣೆ ಕಲಬುರಗಿಯಲ್ಲಿ ಮಾಡಿದರು.ಕಲಬುರಗಿ ಜಿಲ್ಲಾದರ್ಶನ ವನ್ನು ಡಾ. ರಾಜಶೇಖರ ಹತಗುಂದಿ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಅವರೊಂದಿಗೆ ಸಂಪಾದಿಸಿ ಹೊರತಂದವರು. ನೂರಾರು ಸಂಶೋಧನಾತ್ಮಕ ಲೇಖನ ಪ್ರಕಟಿಸಿರುವರು.
ಮನೆ ಗೆದ್ದು ಮಾರು ಗೆದ್ದವರು:
ಬಾಲ್ಯ ಹಾಗೂ ಯೌವನದ ಅವಧಿಯಲ್ಲಿ ತಿನ್ನಲು ಒಂದು ರೊಟ್ಟಿ ಸಿಗದೇ ಪರದಾಡಿದವರು.ಜೀತ ಪದ್ಧತಿ ಅನುಭವಿಸಿದವರು.ತಮ್ಮ ತಂದೆಯ ಪರಸ್ಥಿತಿ ಕಂಡವರು.ಸೆಗಣಿಯನ್ನು ತಗೆದುಕೊಂಡು ಬಂದು ಅದರೊಳಗಿನ ಜ್ವಾಳವನ್ನು ತಗೆದು ಮನೆಯ ತಗಡಿನಲ್ಲಿ ಒಣಗಿಸಿ ಅದನ್ನು ಬೀಸಲು ಗಿರಣಿಗೆ ತಗೆದುಕೊಂಡು ಹೋದರೆ ಏ..ತಮ್ಮ.. ನಿನ್ನ ಜ್ವಾಳ ಬೀಸಿದರೆ ವಾಸನೆ ಬರುತ್ತದೆ...ಬೇರೆಯವರು ತಕರಾರು ಮಾಡುವರು ಬೀಸವುದಿಲ್ಲ ಹೋಗು ಎಂದಾಗಲೇ ..ಹೊತ್ತು ತಂದ ಜ್ವಾಳವನ್ನು ಮನೆಯ ಬೀಸಕಲ್ಲಿಗೆ ಹಾಕಿ ತಾಯಿ ಬೀಸುವಾಗ ತಂದೆ- ಮಗ ಕೈ ಜೋಡಿಸಿ ಹಾಡುತ್ತಾ ಸಂಭ್ರಮದಿಂದ ರೊಟ್ಟಿ ಮಾಡಿ ತಿಂದ ಜೀವವಿದು. ತಮ್ಮ ಶ್ರಮ, ಪರಿಶ್ರಮ, ಸತತ ಅಧ್ಯಯನ, ದೂರದೃಷ್ಟಿ, ಆಲೋಚನೆ, ಚಿಂತನೆ, ಮಂಥನೆ ಜೊತೆಗೆ ಹಿಡಿದ ಹಠ ಬಿಡದೇ ಸಾಧಿಸಿದವರು. ಬಡವರ ಸಿಟ್ಟು ದವಡೆಗೆ ಮೂಲ ಎಂಬಂತೆ ಇದನ್ನರಿತವರು.ಅದಕ್ಕೆ ಸಿಟ್ಟು, ರೊಚ್ಚು, ಯಾವ ದ್ವೇಷ ಹೊಂದದೇ ಸರಳವಾಗಿ ಬಂದುದನ್ನು ಸವಾಲಾಗಿ ಸ್ವೀಕರಿಸಿದವರು. ಇದರ ಮಧ್ಯ ಸಂಸಾರಕ್ಕೆ ಅಣಿಯಾಗಿ ಬಸವಕಲ್ಯಾಣ ತಾಲೂಕಿನ ರಾಜೇಶ್ವರದ ಲಲಿತಾ ಅವರೊಂದಿಗೆ ವಿವಾಹವಾದರು. ಸುಹಾಸಿನಿ, ಸುಮಲತಾ, ಸುನೀತಾ ಮೂವರು ಹೆಣ್ಣು ಮಕ್ಕಳು. ಅವರ ಕಾಲ ಮೇಲೆ ನಿಂತವರು. ಮೂವರು ಅಳಿಯಂದಿರು. ಮೊಮ್ಮಕ್ಕಳೊಂದಿ ಗೆ ಸಂತೃಪ್ತ ಜೀವನ ಅರಿತುಕೊಂಡು ಬಾಳಿ ಬೆಳಗುತ್ತಿರುವ ರು. ಅಪ್ಪ ಕೆಲಸಕ್ಕೆ ಹೋಗು ಎಂದರೆ; ಅವ್ವ ಸಾಲಿಗೆ ಹೋಗು ಎಂದು ಒತ್ತಾಯದ ಮೇರೆಗೆ ಇಬ್ಬರಿಗೂ ನ್ಯಾಯ ಒದಗಿಸಿ ಅವ್ವ ಬಯಸಿದ್ದು ಓದು ಕಲಿತರು; ಅಪ್ಪ ಹೇಳಿದ ಕೆಲಸ ಹಿಡಿದುಕೊಂಡು ಬಂದ ಮಹಾನ್ ಆದರ್ಶವಾದಿ.
ಭವ ಸಾಗರವ ತೊರೆದು ಅನುಭಾವಿಯಾದವರು, ಪಂಚಮಲೋಕ ಎಂಬ ಪತ್ರಿಕೆಯ ಸಂಪಾದಕರಾಗಿ ಕೆಲವು ಸಂಚಿಕೆ ಹೊರ ತಂದರು. ಮರುಗ ಪ್ರಕಾಶನದಿಂದ ಹಲವು ಪುಸ್ತಕ ಹೊರತಂದ ಪ್ರಕಾಶಕರು ಹೌದು.
ದಲಿತ ಚಳವಳಿಯೊಂದಿಗೆ ಮುಖಾಮುಖಿ:
ಉದ್ಯೋಗ ಪೂರ್ವದಲ್ಲಿ ಡಾ.ಡಿ.ಜಿ.ಸಾಗರ ಜೊತೆ, ಎಸ್.ಪಿ.ಸುಳ್ಳದ್, ಡಾ.ಹನುಂಮತರಾವ್ ದೊಡ್ಡಮನಿಯವರೊಂದಿಗೆ, ದಸಂಸದ ಜೊತೆ ಸೇರಿದವರು. ಜಿಲ್ಲಾ ವಿದ್ಯಾರ್ಥಿ ದಸಂಸದ ಜಿಲ್ಲಾ ಸಂಚಾಲಕ ಡಾ.ಅರುಣಕುಮಾರ ನರೋಣಕರ ಜೊತೆ ಕೋಲಾರ ಸಮಾವೇಶದಲ್ಲಿ ಪಾಲ್ಗೊಂಡು ವಿದ್ಯಾರ್ಥಿ ದಸಸಂ ಒಕ್ಕೂಟದಲ್ಲಿದ್ದರು. ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ, ಅಂಬೇಡ್ಕರ ಜ್ಯೋತಿ ಜಾಥಾ, ಪುಸ್ತಕ ಜಾಥಾ ಮಾಡಿ ಹೈದ್ರಾಬಾದ ಕರ್ನಾಟಕದಲ್ಲಿ ಅರಿವು ಮೂಡಿಸಿದವರು. ಅನೇಕ ಕನ್ನಡಪರ ಸಂಘಟನೆ, ಹೋರಾಟದಲ್ಲೂ ಮುಂಚೂಣಿಯಲ್ಲಿದ್ದವರು.
ಸಾಹಿತ್ಯ ರಚನೆಗೆ ಪ್ರಶಸ್ತಿ ಗರಿಗಳು:
ಬೌದ್ಧ ಸಾಹಿತ್ಯ ಸಿರಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಸುವರ್ಣ ಕರ್ನಾಟಕ ರತ್ನ, ಕನ್ನಡ ಭೂಷಣ, ಕರ್ನಾಟಕ ರಾಜ್ಯೋತ್ಸವ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಶಸ್ತಿ ಲಭಿಸಿವೆ.ಗಾಂಧಿ ಪ್ರಶಸ್ತಿಗಳು ಲಭಿಸಿವೆ.
ಸಮ್ಮೇಳನಾಧ್ಯಕ್ಷತೆ ಗೌರವ:
ಆಳಂದ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ
ಸಮ್ಮೇಳನದ ಸರ್ವಾಧ್ಯಕ್ಷತೆ, ಕಲಬುರಗಿ ಜಿಲ್ಲಾ ೨೦ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಅಖಿಲ ಕರ್ನಾಟಕ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಹಾಗೂ ಮಾರ್ಚ್ ೨ ಮತ್ತು ೩ ,೨೦೨೪ ರಂದು ಜರುಗಿದ ಬೇಲೂರು ಉರಿಲಿಂಗಪೆದ್ದಿಮಠದಲ್ಲಿ ಜರುಗಿದ ಪ್ರಥಮ ಬೌದ್ಧ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಗೌರವಕ್ಕೆ ಪಾತ್ರರಾದವರು.
ಡಾ.ಟಿ.ಎಂ.ಭಾಸ್ಕರ್ ಅವರು ಜಾನಪದ ವಿದ್ವಾಂಸರು, ಕವಿಗಳು, ಮಹಾಕವಿಗಳು, ವಿಮರ್ಶಕರು, ವೈಚಾರಿಕ ಚಿಂತಕರು, ನಾಟಕಕಾರರು, ಸಾಹಿತಿಗಳು, ಸಂಪಾದಕರು, ಇವೆಲ್ಲಕ್ಕಿಂತ ಹೆಚ್ಚಾಗಿ ಅತಿಥಿ ಉಪನ್ಯಾಸಕರಾಗಿ ಹಂತ ಹಂತವಾಗಿ ಲಿಫ್ಟ್ ನಿಂದ ಏರದೇ ಸ್ಪೆಫ್ ಏರಿ ಕೋಲುರಿ ಗಿರಿಶಿಖರವೇರಿ ಕುಲಪತಿಗಳಾದವರು. ಅವರಲ್ಲಿ ಸರಳತೆ, ಸೌಜನ್ಯತೆ, ಇವನಾರವ ಎನ್ನದೇ ನಮ್ಮವನೆನ್ನುವ ವಿಚಾರಕ್ಕೆ ಹತ್ತಿರವಾದ, ಬುದ್ಧನ ಪ್ರಜ್ಞೆ, ಶೀಲ, ಕರುಣೆಯ ಮೂಲಕ ಶಾಂತಿ, ಅಹಿಂಸೆ ಪ್ರತಿಪಾದಕ ಬೌದ್ಧ ಸಾಹಿತಿಯಾಗಿದ್ದಾರೆ.

