ಔರಾದನಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪಣ ತೊಡೋಣ: ಶಾಸಕ ಪ್ರಭು ಚವ್ಹಾಣ

ಔರಾದನಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪಣ ತೊಡೋಣ: ಶಾಸಕ ಪ್ರಭು ಚವ್ಹಾಣ

ಹೈದರಾಬಾದ್ ನಿಜಾಮರ ಆಳ್ವಿಕೆಗೆ ಅಂತ್ಯ ಹಾಡಿದ ದಿನವಾದ ಸೆಪ್ಟೆಂಬರ್ 17 ಕಲ್ಯಾಣ ಕರ್ನಾಟಕದ ಜನರಿಗೆ ನಿಜವಾದ ಸ್ವಾತಂತ್ರ‍್ಯ ದಿನವಾಗಿದೆ ಎಂದು ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ನಿಮಿತ್ತ ಸೆ.17 ರಂದು ಔರಾದ(ಬಿ) ತಾಲ್ಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಿಜಾಮರ ದುರಾಡಳಿತಕ್ಕೆ ಒಳಗಾಗಿ ಕಲ್ಯಾಣ ಕರ್ನಾಟಕ ಭಾಗದ ಜನತೆ ತೀವ್ರ ನೋವು ಅನುಭವಿಸಿದ್ದರು. ಜನರ ಮೇಲೆ ನಿರಂತರ ಅನ್ಯಾಯ, ದೌರ್ಜನ್ಯ ಹಾಗೂ ಶೋಷಣೆ ನಡೆಯುತ್ತಿತ್ತು. ನಿಜಾಮರ ಆಡಳಿತದಲ್ಲಿ ಕಾಟೋ, ಬಾಟೋ, ಲೂಟೋ ಎಂಬ ದಮನಕಾರಿ ವ್ಯವಸ್ಥೆ ಇತ್ತು. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆಪರೇಷನ್ ಪೋಲೋ ಕಾರ್ಯಾಚರಣೆ ನಡೆಸಿ ಇಂತಹ ದಾಸ್ಯದಿಂದ ಈ ಭಾಗದ ಜನರನ್ನು ವಿಮುಕ್ತಿಗೊಳಿಸಿದ್ದರು. ಸ್ವಾತಂತ್ರö್ಯ ದಿನಾಚರಣೆಯಷ್ಟೇ ಮಹತ್ವದ ಕಾರ್ಯಕ್ರಮದ ಬಗ್ಗೆ ಮತ್ತಷ್ಟು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಹೈದ್ರಾಬಾದ ಕರ್ನಾಟಕ ವಿಮೋಚನೆಗೆ ಸ್ವಾತಂತ್ರö್ಯ ಹೋರಾಟದ ಮಾದರಿಯಲ್ಲಿ ಅನೇಕ ಮಹನಿಯರು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ಸ್ವಾಮಿ ರಮಾನಂದ ತೀರ್ಥರು ಒಳಗೊಂಡು ಎಲ್ಲ ಮಹನಿಯರ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು. ಈ ಮಹತ್ವದ ದಿನದಂದು ಸದೃಢ ಕಲ್ಯಾಣ ಕರ್ನಾಟಕ ನಿರ್ಮಿಸಲು ಪಣ ತೊಡಬೇಕಿದೆ ಎಂದು ಹೇಳಿದರು.

ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ಅವಧಿಯಲ್ಲಿ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.

ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡ ಕಲಿಸಿ ಕನ್ನಡವನ್ನು ಉಳಿಸಿ ಬೆಳೆಸಿದ ಪೂಜ್ಯ ಡಾ.ಚನ್ನಬಸವ ಪಟ್ಟದೇವರ ಸ್ಮರಣೆಗಾಗಿ ಜಿಲ್ಲಾ ರಂಗಮAದಿರಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶವೆಂದು ಕರೆಸಿಕೊಳ್ಳುತ್ತಿದ್ದ ಈ ಭಾಗಕ್ಕೆ ಕಲ್ಯಾಣ ಕರ್ನಾಟಕವೆಂದು ಮರುನಾಮಕಣ ಮತ್ತು ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ಎಂದು ಮಾರ್ಪಾಡುಗಳು ನನ್ನ ಅವಧಿಯಲ್ಲಿ ಆಗಿರುವುದು ನನ್ನ ಸೌಭಾಗ್ಯ ಎಂದು ಸ್ಮರಿಸಿದರು.

ಮಹಾಜನತೆ ನನಗೆ ಜನಸೇವೆ ಮಾಡಲು ಅವಕಾಶ ನೀಡಿದ್ದಾರೆ. ಅವರ ಆಶಯದಂತೆ ಔರಾದ(ಬಿ) ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಹಿಂದೆ ಕ್ಷೇತ್ರದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ತೀವ್ರ ಕಳಪೆ ಮಟ್ಟದಲ್ಲಿತ್ತು. ನಾನು ಶಾಸಕನಾದ ನಂತರ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ವಿಶೇಷ ಆದ್ಯತೆ ನೀಡಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಶಿಕ್ಷಕರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗ¼ಸನ್ನು ಹಮ್ಮಿಕೊಂಡಿದ್ದೇನೆ. ಇದರ ಪರಿಣಾಮವಾಗಿ ಕ್ಷೇತ್ರದ ಶೈಕ್ಷಣಿಕ ಫಲಿತಾಂಶ ಒಳಗೊಂಡು ಶಿಕ್ಷಣ ರಂಗದಲ್ಲಿ ವ್ಯಾಪಕ ಬದಲಾವಣೆಗಳಾಗಿವೆ ಎಂದರು.

ಅಲ್ಲದೇ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, 2,360 ಕೋಟಿ ಮೊತ್ತದ ಪವರ್ ಗ್ರಿಡ್ ಕಾರ್ಪೋರೇಷನ್ ಉಪಕೇಂದ್ರ, ಬೃಹತ್ ಸೋಲಾರ್ ಪಾರ್ಕ್, ಜಾನುವಾರು ತಳಿ ಸಂವರ್ಧನ ಕೇಂದ್ರ, ಕೆರೆ ತುಂಬಿಸುವ ಯೋಜನೆ, ನಾಗೂರ(ಬಿ)ನಲ್ಲಿ 220 ಕೆ.ವಿ ವಿದ್ಯುತ್ ಉಪ ಕೇಂದ್ರ, ಸಿಪೆಟ್ ಕೇಂದ್ರ, ಕಾರಂಜಾ ಜಲಾಶಯದಿಂದ ನೀರು ಸರಬರಾಜು ಯೋಜನೆಯಂತಹ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇಲ್ಲಿನ ಯುವಜನತೆಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ದಿಶೆಯಲ್ಲಿ ಪ್ರಯತ್ನಗಳು ಮುಂದುವರೆದಿವೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಶಿಕ್ಷಕಿ ಗೀತಾ ವಿಜಯಕುಮಾರ ಮಾತನಾಡಿ, ನಿಜಾಮರ ಆಳ್ವಿಕೆಯ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊಲೆ, ಸುಲಿಗೆಯಂತಹ ಹೀನ ಕೃತ್ಯಗಳು ರಾಜಾರೋಶವಾಗಿ ನಡೆಯುತ್ತಿದೆ. ಈ ಘಟನೆಯನ್ನು ನೆನಪಿಸಿದಾಗ ಹಿರಿಯರು ಇಂದಿಗೂ ಬೆಚ್ಚಿ ಬೀಳುತ್ತಾರೆ ಎಂದು ವಿವರಿಸಿದರು.

ಔರಾದ(ಬಿ) ತಹಸೀಲ್ದಾರರಾದ ಮಹೇಶ ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿದರು. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ರಾಠೋಡ, ಪುರಸಭೆ ಮುಖ್ಯಾಧಿಕಾರಿ ರವಿ ಸುಕುಮಾರ, ಆರಕ್ಷಕ ವೃತ್ತ ನಿರೀಕ್ಷಕರಾದ ರಘುವೀರಸಿಂಗ್ ಠಾಕೂರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನೀಲ ಎಕಲೂರೆ, ಲೋಕೋಪಯೋಗಿ ಇಲಾಖೆಯ ಪ್ರೇಮಸಾಗರ, ಮುಖಂಡರಾದ ಧೊಂಡಿಬಾ ನರೋಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶಿವಕುಮಾರ ಘಾಟೆ ನಿರೂಪಿಸಿ ವಂದಿಸಿದರು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಾಸಕರು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.

*ಸಸಿ ನೆಡುವ ಕಾರ್ಯಕ್ರಮ:* ನಂತರ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ಶಾಸಕರಾದ ಪ್ರಭು ಬಿ.ಚವ್ಹಾಣ ಅವರ ನೇತೃತ್ವದಲ್ಲಿ ಕ್ರೀಡಾಂಗಣದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿಯವರಿಗೆ ಆಯುರಾರೋಗ್ಯ ವೃದ್ಧಿಸಲು, ದೇಶ ಸೇವೆಗೆ ಇನ್ನಷ್ಟು ಶಕ್ತಿ ಸಿಗಲಿ ಎಂದು ಶುಭ ಕೋರಿದರು.