ಕೆ.ಆರ್.ಐ.ಡಿ.ಎಲ್ ಇಲಾಖೆಯಲ್ಲಿ ₹1.41 ಕೋಟಿ ಅವ್ಯವಹಾರ ಆರೋಪ
ಕೆ.ಆರ್.ಐ.ಡಿ.ಎಲ್ ಇಲಾಖೆಯಲ್ಲಿ ₹1.41 ಕೋಟಿ ಅವ್ಯವಹಾರ ಆರೋಪ
ನೀಲಕಂಠ ರಾಠೋಡ ವಿರುದ್ಧ ತನಿಖೆಗೆ ಒತ್ತಾಯಿಸಿ ಕೃಷ್ಣ ರೆಡ್ಡಿ
ಕಲಬುರಗಿ: ಸೇಡಂ ತಾಲೂಕಿನ ಕೆ.ಆರ್.ಐ.ಡಿ.ಎಲ್ ಇಲಾಖೆಯಲ್ಲಿ 2020-21ನೇ ಸಾಲಿನ ವಿವಿಧ ಒಳಚರಂಡಿ ಕಾಮಗಾರಿಗಳಲ್ಲಿ ಸುಮಾರು ₹1.41 ಕೋಟಿ ಮೊತ್ತದ ಅವ್ಯವಹಾರ ನಡೆದಿದೆ ಎಂದು ಜಾತ್ಯಾತೀತ ಜನತಾದಳ ಪಕ್ಷದ ಮುಖಂಡ ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ನಾಯಕ ಕೃಷ್ಣ ರೆಡ್ಡಿ ಸಿ. ರಮೇಶ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಆರ್.ಐ.ಡಿ.ಎಲ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಹೆಚ್ಚುವರಿ ಹೊಣೆ ಹೊತ್ತಿರುವ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ನೀಲಕಂಠ ರಾಠೋಡ ಅವರು ಮಲಖೇಡ ಗ್ರಾಮದಲ್ಲಿ ಕೈಗೆತ್ತಿಕೊಳ್ಳಲಾದ ಮೂರು ಖಾಯಂ ಒಳಚರಂಡಿ ಕಾಮಗಾರಿಗಳ ಹೆಸರಿನಲ್ಲಿ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಅವರು ನೀಡಿದ ಮಾಹಿತಿಯ ಪ್ರಕಾರ,
ಅಗಸಿ ಬಾಗಿಲಿನಿಂದ ಯಲ್ಲಮ್ಮ ಗುಡದವರೆಗೆ ಒಳಚರಂಡಿ ಕಾಮಗಾರಿ – ₹48 ಲಕ್ಷ
ಅಗಸಿ ಬಾಗಿಲಿನಿಂದ ಮೊಯಿನಪೂರ ದರ್ಗಾವರೆಗೆ ಕಾಮಗಾರಿ – ₹49 ಲಕ್ಷ
ಮೊಯಿನಪೂರ ದರ್ಗಾದಿಂದ ಜೈನ ಬಸದಿ ವರೆಗೆ ಕಾಮಗಾರಿ – ₹45 ಲಕ್ಷ
ಒಟ್ಟು ₹1.41 ಕೋಟಿ ವೆಚ್ಚದ ಕಾಮಗಾರಿಗಳು ದಾಖಲೆಗಳಲ್ಲಿ ಪೂರ್ಣಗೊಂಡಂತೆ ತೋರಿಸಲ್ಪಟ್ಟಿದ್ದರೂ, ಸ್ಥಳ ಪರಿಶೀಲನೆ ವೇಳೆ ಯಾವುದೇ ಕಾಮಗಾರಿಯ ಕುರುಹುಗಳು ಕಂಡುಬಂದಿಲ್ಲ ಎಂದು ಹೇಳಿದರು.
ದಿನಾಂಕ 15/04/2026 ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾಮಗಾರಿ ನಡೆದಿರುವ ಯಾವುದೇ ಸಾಕ್ಷ್ಯ ಲಭ್ಯವಾಗಲಿಲ್ಲ. ಈ ಕುರಿತು 23/04/2026 ರಂದು ಕೆ.ಆರ್.ಐ.ಡಿ.ಎಲ್ ಅಧೀಕ್ಷಕ ಅಭಿಯಂತರರಿಗೆ ಲಿಖಿತ ದೂರು ನೀಡಿದ್ದರೂ, ಇದುವರೆಗೆ ಯಾವುದೇ ಕ್ರಮ ಅಥವಾ ಮಾಹಿತಿ ಲಭ್ಯವಾಗಿಲ್ಲ ಎಂದು ಆಕ್ಷೇಪಿಸಿದರು.
ಸರ್ಕಾರದ ನಿಯಮಾನುಸಾರ ಮೂರನೇ ಪಕ್ಷದ ತಾಂತ್ರಿಕ ಪ್ರಮಾಣೀಕರಣದ ನಂತರವೇ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕು. ಆದರೆ ಈ ನಿಯಮಗಳನ್ನು ಉಲ್ಲಂಘಿಸಿ ಬೊಟ್ಟಿ ಬಿಲ್ಲುಗಳ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಪ್ರಕರಣದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಹಾಗೂ ಸೇಡಂ ಶಾಸಕ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಪ್ರಕಾಶ ಪಾಟೀಲ ಅವರು ತಕ್ಷಣ ಸೂಕ್ತ ತನಿಖೆ ನಡೆಸಿ, ಆರೋಪಿತ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕು. ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾದ ₹1.41 ಕೋಟಿ ಮೊತ್ತವನ್ನು ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ಕೃಷ್ಣ ರೆಡ್ಡಿ ಎಚ್ಚರಿಸಿದರು.
