ಚಲನಚಿತ್ರ ಚಿತ್ರೀಕರಣಕ್ಕಾಗಿ ಹೆಚ್‌ಎಂಟಿ ಜಾಗದಲ್ಲಿ ಅರಣ್ಯ ನಾಶ : ಕ್ರಮಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ
ಚಲನಚಿತ್ರ ಚಿತ್ರೀಕರಣಕ್ಕಾಗಿ ಹೆಚ್‌ಎಂಟಿ ಜಾಗದಲ್ಲಿ ಅರಣ್ಯ ನಾಶ : ಕ್ರಮಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ
ಬೆಂಗಳೂರು : ಹೆಚ್‌ಎಂಟಿಯ ವಶದಲ್ಲಿರುವ ಅರಣ್ಯ ಪ್ರದೇಶದಲ್ಲಿ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಗರಂ ಆಗಿದ್ದಾರೆ.
ಈ ಕುರಿತು ಮಂಗಳವಾರ (ಅ.29) ಎಕ್ಸ್ ಪೋಸ್ಟನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು “ಹೆಚ್ಎಂಟಿ ವಶದಲ್ಲಿರುವ ಅರಣ್ಯ ಪ್ರದೇಶದಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಪರಿಸರ ನಾಶ ಮಾಡಿರುವ ವಿಚಾರ ಗಂಭೀರವಾಗಿ ಪರಿಗಣಿಸಲಾಗಿದೆ.
ಸ್ಯಾಟಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಗೋಚರಿಸುತ್ತಿದೆ. ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಪರಿಶೀಲನೆ ನಡೆಸಿದ್ದಾರೆ.
ಈ ಅಕ್ರಮ ಕೃತ್ಯಕ್ಕೆ ಕಾರಣರಾದ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
“ನಮ್ಮ ಅರಣ್ಯ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕೃತ್ಯಗಳು ಕಂಡುಬಂದಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ” ಎಂದು ಸಚಿವ ಖಂಡ್ರೆ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಹೆಚ್ಎಂಟಿ ತನ್ನ ವಶದಲ್ಲಿದ್ದ ಜಮೀನಿನ ಮರ, ಗಿಡಗಳನ್ನು ಕಡಿದು ಸಿನಿಮಾ ಚಿತ್ರೀಕರಣಕ್ಕೆ ಬಾಡಿಗೆಗೆ ಕೊಟ್ಟಿದೆ. ಈ ಮೂಲಕ ದುಡ್ಡು ಮಾಡುತ್ತಿದ್ದಾರೆ. ಎಲ್ಲಾ ರೀತಿಯ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಈ ರೀತಿ ಮಾಡಲು ಅವರಿಗೆ ಯಾವುದೇ ಅಧಿಕಾರ ಇಲ್ಲ” ಎಂದಿದ್ದಾರೆ.
“ಟಾಕ್ಸಿಕ್’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ನಾನು ಖುದ್ದಾಗಿ ಹೋಗಿ ನೋಡಿದ್ದೇನೆ. ಅಲ್ಲಿನ ಸಂಪೂರ್ಣ ಚಿತ್ರಣ ಬದಲಾಗಿದೆ, ವಿಲೇಜ್ ರೀತಿಯ ಸೆಟ್ ಹಾಕಿದ್ದಾರೆ. ಇದು ಬಿಬಿಎಂಪಿ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ಕಾನೂನು ಕ್ರಮಕ್ಕೆ ಪಾಲಿಕೆಗೂ ಪತ್ರ ಬರೆದಿದ್ದೇನೆ. ಅವರು (ಬಿಬಿಎಂಪಿ) ಕಮಿಟಿ ಮಾಡಿದ್ದಾರೆ, ನೋಟಿಸ್ ಕೊಟ್ಟಿದ್ದಾರೆ. ಚಿತ್ರ ತಂಡದ್ದೇ ತಪ್ಪು ಅಂತ ನಾನು ಹೇಳುತ್ತಿಲ್ಲ. ಯಾರದ್ದು ತಪ್ಪು ಇದೆಯೋ ನೋಡಬೇಕು. ಸಿನಿಮಾ ತಂಡ ಅನುಮತಿ ಪಡೆದಿದೆಯಾ? ಅಂತ ತನಿಖೆ ಮಾಡಿ ನೋಡುತ್ತೇವೆ” ಎಂದು ಸಚಿವರು ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಅರಣ್ಯ ಹಾಗೂ ಪರಿಸರವನ್ನು ಕೇವಲ ಚಲನಚಿತ್ರಗಳಿಗಾಗಿ ಸೋಗಸಾಗಿ ಬೆಳೆದಿರುವ ಮರಗಳನ್ನು ಕಡಿಯುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳಿಗೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಈ ರೀತಿಯ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದೆ.