ಬ್ಯಾಂಕ್ ಸಾಲ ತೀರಿಸಲು ರೂ.9000 ಕ್ಕೆ ಮಗು ಮಾರಾಟ : ಬಿಹಾರದಲ್ಲಿ ಹೃದಯವಿದ್ರಾವಕ ಘಟನೆ
ಬಿಹಾರ (ಅರಾರಿಯಾ) : ಕಡುಬಡತನದ ಬೇಗೆಯಿಂದ ಬಳಲುತ್ತಿರುವ ಕುಟುಂಬವೊಂದು ತನ್ನ ಸ್ವಂತ ಮಗುವನ್ನೇ ಬ್ಯಾಂಕ್ ಸಾಲವನ್ನು ತೀರಿಸಲು ಕೇವಲ 9 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಹೃದಯ ವಿದ್ರಾವಕ ಘಟನೆ ಬಿಹಾರ ರಾಜ್ಯದ ಅರಾರಿಯಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ.
ಈ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಮಗುವನ್ನು ಮಾರಾಟ ಮಾಡಿರುವ ಮಹಿಳೆಯ ಸಂಬಂಧಿಕರ ಮನೆಯಿಂದ ವಶಪಡಿಸಿಕೊಂಡಿದ್ದಾರೆ.
ಮಗುವನ್ನು ಬೆಂಗಳೂರು ಮೂಲದ ಮಕ್ಕಳಿಲ್ಲದ ಮಹಿಳೆಯೊಬ್ಬರಿಗೆ ಹಸ್ತಾಂತರಿಸುವ ಮುನ್ನ ಅಲ್ಲಿ ಇರಿಸಲಾಗಿತ್ತು. ಮಗುವಿನ ಹುಡುಕಾಟದಲ್ಲಿದ್ದ ಅವರು ಮಗುವಿಗೆ ಬದಲಾಗಿ 2 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು ಎಂದು ವರದಿ ಹೇಳಿದೆ.
ಮಗುವಿನ ಪೋಷಕರಾದ ಮೊಹಮ್ಮದ್ ಹಾರೂನ್ ಮತ್ತು ರೆಹಾನಾ ಖಾತೂನ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಅವರ ಮಗುವನ್ನು ಶನಿವಾರ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ತಾಯಿ ರೆಹಾನಾ ಖಾತೂನ್ ಅವರ ಸಹೋದರ ತನ್ವೀರ್ ಎಂಬಾತ ಮಗುವನ್ನು ಅದೇ ಗ್ರಾಮದ ಮೊಹಮ್ಮದ್ ಆರಿಫ್ಗೆ ಮಾರಾಟ ಮಾಡಿದ್ದು, ಭಾನುವಾರ 9,000 ರೂ. ನೀಡಿದ್ದನು. ತನ್ವೀರ್ ತನ್ನ ಮಗನನ್ನು ಮಾರಾಟ ಮಾಡಿ ಆರೀಫ್ನಿಂದ ಎಷ್ಟು ಹಣ ಪಡೆದಿದ್ದಾನೆ ಎಂಬ ಬಗ್ಗೆ ತನಗೆ ಏನು ತಿಳಿದಿಲ್ಲ ಎಂದು ಮಗುವಿನ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಅದಾಗ್ಯೂ, ಮಗುವನ್ನು ಪಡೆದ ಆರೀಫ್ ಅವರ ಸಂಬಂಧಿಕರು ಮಗುವಿಗಾಗಿ ಆತ 45 ಸಾವಿರ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಅಪರಾಧಕ್ಕೆ ತನ್ನ ಬಡತನವನ್ನು ದೂಷಿಸಿರುವ ಮಗುವಿನ ತಾಯಿ ರೆಹನಾ, ಹಣಕಾಸಿನ ಅಡಚಣೆಗಿಗಿ 50,000 ರೂ. ಬ್ಯಾಂಕ್ ಸಾಲವನ್ನು ಪಾವತಿಸಲು ಸಾಧ್ಯವಾಗದ ಕಾರಣ ತನ್ನ ಮಗುವನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಹೇಳಿದ್ದಾರೆ.
ಬ್ಯಾಂಕ್ ಉದ್ಯೋಗಿಗಳು ತನಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದರು ಎಂದು ಮಗುವಿನ ತಾಯಿ ಹೇಳಿದ್ದಾಳೆ.
ಖಾಸಗಿ ಫೈನಾನ್ಸ್ ಕಂಪನಿಯಿಂದ ನಾನು ಪಡೆದ ಸಾಲದ ಕಂತು ಕಳೆದ ಮೂರು ತಿಂಗಳಿಂದ ಬಾಕಿಯಿರುವುದರಿಂದ ನಾನು ತೀವ್ರ ಒತ್ತಡಕ್ಕೆ ಒಳಗಾಗಿದ್ದೆ.
ಸಾಲ ನೀಡುವ ಕಂಪನಿಯ ಏಜೆಂಟರು ನಮಗೆ ಕಿರುಕುಳ ನೀಡುತ್ತಿದ್ದರು. ಸಾಲವನ್ನು ಮರುಪಾವತಿಸಲು ವಿಫಲವಾದ ಕಾರಣ ನನ್ನ ವಿರುದ್ಧ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಸಹ ಹಾಕಿದ್ದರು. ಸಾಲವನ್ನು ಮರುಪಾವತಿಸಲು ನನ್ನ ಮಕ್ಕಳಲ್ಲಿ ಒಬ್ಬರನ್ನು ಮಾರಾಟ ಮಾಡುವಂತೆ ನನ್ನ ಸಹೋದರ ತನ್ವೀರ್ ನನಗೆ ಸಲಹೆ ನೀಡಿದ್ದ
ಎಂದು ರೆಹಾನಾ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಳೆ.
ಅರಾರಿಯಾ ಜಿಲ್ಲೆಯ ರಾಣಿಗಂಜ್ ಬ್ಲಾಕ್ನ ಪಚಿರಾ ಪಂಚಾಯತ್ನಲ್ಲಿ ವಾಸವಾಗಿರುವ ದಂಪತಿಯ ಮಕ್ಕಳಲ್ಲಿ ಒಬ್ಬ ಸುಮಾರು ಒಂದೂವರೆ ವರ್ಷದ ಗುರ್ಫಾನ್ ಎಂಬ ಮಗುವನ್ನು ಮಾರಾಟ ಮಾಡುವ ಬಗ್ಗೆ ಯೋಜಿಸಿದ್ದರು.
ಹಾಗಾಗಿ ಗುರ್ಫಾನ್ ನನ್ನು ಭಾನುವಾರ ಅವರ ತಾಯಿಯ ಚಿಕ್ಕಪ್ಪ ತನ್ವೀರ್ ಅವರ ಮನೆಗೆ ಕಳುಹಿಸಲಾಯಿತು.
ಅಲ್ಲಿಂದ ಮಗುವನ್ನು ದುಮಾರಿಯಾ ನಿವಾಸಿ ಮೊಹಮ್ಮದ್ ಆರಿಫ್ ಅವರಿಗೆ ಹಸ್ತಾಂತರಿಸಲಾಗಿದೆ.
ಮಗುವನ್ನು ದತ್ತು ಪಡೆಯಲು ಇಚ್ಛಿಸಿದ ಬೆಂಗಳೂರು ಮೂಲದ ಮಹಿಳೆಯೊಬ್ಬರಿಂದ ಆರಿಫ್ ಅಪಾರ ಪ್ರಮಾಣದ ಹಣ ಪಡೆದಿದ್ದಾಗಿ ಪೊಲೀಸರಿಗೆ ಮಹಿಳೆ ತಿಳಿಸಿದ್ದಾರೆ. ಅರಾರಿಯಾ ನೇಪಾಳ ಗಡಿಗೆ ಸಮೀಪದಲ್ಲಿದ್ದು,
ಬಿಹಾರದ ಈ ಗಡಿ ಭಾಗದ ಜಿಲ್ಲೆಗಳಲ್ಲಿ ಮಕ್ಕಳ ಮಾರಾಟ ಹಾಗೂ ಕಳ್ಳಸಾಗಣೆ ಘಟನೆಗಳು ಸರ್ವೇ ಸಾಮಾನ್ಯವಾಗಿ ಎನ್ನಲಾಗಿದೆ.
2016 ರಲ್ಲಿ ಪಾಟ್ನಾ ಜಿಲ್ಲೆಯ ಹಳ್ಳಿಯೊಂದರ ರುಕ್ಮಣಿ ಮತ್ತು ಸಂದೀಪ್ ಮೀನಾ ತಮ್ಮ 9 ವರ್ಷದ ಮಗನನ್ನು ಇಂದೋರ್ನ ಮಧ್ಯವರ್ತಿಯೊಬ್ಬರಿಗೆ 20,000 ರೂ ಸಾಲ ಮರುಪಾವತಿಸಲು ಮಾರಾಟ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಅದೇ ವರ್ಷ, ಮುಜಾಫರ್ಪುರ ಜಿಲ್ಲೆಯ ಹಿಮಾಂಶು ರಂಜನ್ ಎಂಬ ವ್ಯಕ್ತಿಯೋಬ್ಬ ತನ್ನ ಹೆಂಡತಿ ಮತ್ತು ಸುಮಾರು ಐದು ವರ್ಷ ಮತ್ತು ಮೂರು ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳನ್ನು 4 ಲಕ್ಷ ರೂಪಾಯಿಗಳ ಸಾಲ ಮರುಪಾವತಿಸಲು ಮಾರಾಟ ಮಾಡಿದ್ದು ಕೂಡ ಇನ್ನೂ ಜನರ ಮನಸ್ಸಿನಲ್ಲಿ ಉಳಿದಿದೆ.
2012ರಲ್ಲಿ ಸಮಸ್ತಿಪುರ ಜಿಲ್ಲೆಯಲ್ಲಿ ಪಾರ್ವತಿ ದೇವಿ ಎಂಬಾಕೆ ತನ್ನ 18 ತಿಂಗಳ ಮಗನನ್ನು 15,000 ರೂ.ಗಳ ಸಾಲ ತೀರಿಸಲು ಮಾರಾಟ ಮಾಡಿದ್ದ ಪ್ರಕರಣ ಸೇರಿದಂತೆ ಇನ್ನೂ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ.