ಕನ್ನಡ ಸಾಂಸ್ಕೃತಿಕ ಪರಂಪರೆ ಶ್ರೀಮಂತಿಕೆಯಿಂದ ಕೂಡಿದೆ - ಗುರುಪ್ರಸಾದ್ ವೈದ್ಯ.
ಕನ್ನಡ ಸಾಂಸ್ಕೃತಿಕ ಪರಂಪರೆ ಶ್ರೀಮಂತಿಕೆಯಿಂದ ಕೂಡಿದೆ - ಗುರುಪ್ರಸಾದ್ ವೈದ್ಯ.
ಯಾದಗಿರಿ: ಈ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದು,ಇತಿಹಾಸ, ಧಾರ್ಮಿಕ,ಸಮನ್ವಯ ಜೊತೆಗೆ ಕಲೆ,ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದೆ ಎಂದು ಹಿರಿಯ ಸಾಹಿತಿ ಗುರುಪ್ರಸಾದ್ ವೈದ್ಯ ಹೇಳಿದರು.
ಜಿಲ್ಲೆಯ ಲಕ್ಷ್ಮಿ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಯಾದಗಿರಿ ಜಿಲ್ಲಾ ನಾಗರಿಕರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದ,ಅವರು ಕದಂಬರು,ಚಾಲುಕ್ಯರು,ರಾಷ್ಟ್ರಕೂಟರು,ಹೊಯ್ಸಳರು ಮತ್ತು ವಿಜಯನಗರದ ರಾಜ ಮನೆತನಗಳು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಪ್ರೋತ್ಸಾಹಿಸಿದ ಪರಿಯನ್ನು ಮಕ್ಕಳಿಗೆ ಮನಮುಟ್ಟುವ ಹಾಗೆ ತಿಳಿ ಪಡಿಸಿದರು.
ಇನೊರ್ವ ಮುಖ್ಯ ಅತಿಥಿಗಳು ಹಾಗೂ ಕವಯತ್ರಿ ಸುವರ್ಣ ರಾಥೋಡ್ ಮಾತನಾಡಿ ಹಳೆಗನ್ನಡ,ನಡುಗನ್ನಡ,ವಚನ ಸಾಹಿತ್ಯ,ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಪಡೆದ ಭಾಷೆಗಳಲ್ಲಿ ಒಂದಾಗಿದೆ, ಬಾದಾಮಿ,ಐಹೊಳೆ,ಪಟ್ಟದಕಲ್ಲು, ಬೇಲೂರು,ಹಳೇಬೀಡು, ಹಂಪಿಯ ಸ್ಮಾರಕಗಳು ನಾಡಿನ ಶಿಲ್ಪ ಕಲಾ ವೈಭವಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು.
ಕೆ.ಎಸ್.ಆರ್.ಟಿ.ಸಿ ನಿಗಮದ ಎಸ್. ಸಿ,ಎಸ್.ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಂಘಟನೆ ಕಾರ್ಯದರ್ಶಿಯಾದ ಪರಮಣ್ಣ ಬಡಿಗೇರ ಯಡಿಯಾಪುರ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶಾಲೆಯ ಎಸ್.ಸಿ.ಡಿ.ಎಂ.ಸಿ ಅಧ್ಯಕ್ಷ ರವಿಕುಮಾರ ಕಾರ್ಯಕ್ರಮದ ಘನ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು, ಸಮಾರಂಭದ ವೇದಿಕೆಯ ಮೇಲೆ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಪದ್ಮಾ,ಕವಯತ್ರಿ ಸುನಂದಾ ಪಾಟೀಲ್ ಹಾಗೂ ಖಜಾಂಚಿ ಪ್ರಕಾಶ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು ಭವಾನಿ ಪ್ರಾರ್ಥಿಸಿದರು,ಅಶೋಕ್ ಸ್ವಾಗತಿಸಿದರು,ಗೌರಮ್ಮ ನಿರೂಪಿಸಿ ವಂದಿಸಿದರು.

