ಎಚ್.ಕೆ.ಇ. ಸಂಸ್ಥೆಯ ಹೊಸ ಸದಸ್ಯತ್ವ ಪ್ರಕ್ರಿಯೆ ಬೈಲಾ ಪ್ರಕಾರವೇ ನಡೆಯಲಿದೆ: ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ

ಎಚ್.ಕೆ.ಇ. ಸಂಸ್ಥೆಯ ಹೊಸ ಸದಸ್ಯತ್ವ ಪ್ರಕ್ರಿಯೆ ಬೈಲಾ ಪ್ರಕಾರವೇ ನಡೆಯಲಿದೆ: ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ

ಎಚ್.ಕೆ.ಇ. ಸಂಸ್ಥೆಯ ಹೊಸ ಸದಸ್ಯತ್ವ ಪ್ರಕ್ರಿಯೆ ಬೈಲಾ ಪ್ರಕಾರವೇ ನಡೆಯಲಿದೆ: ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು ದಿನಾಂಕ 16.11.2026ರಂದು ಹೊರಡಿಸಿರುವ ಅಧಿಸೂಚನೆಯಂತೆ, ಸಂಸ್ಥೆಯ ಬೈಲಾ ಪ್ರಕಾರ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ದಿನಾಂಕ 23.11.2026ರಿಂದ 07.12.2026ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಕೆಲವರು ಗೊಂದಲ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ ಅವರು ಸ್ಪಷ್ಟನೆ ನೀಡಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು ಸಂವಿಧಾನದ ಅಡಿಯಲ್ಲಿ ರಚನೆಯಾದ ನೋಂದಾಯಿತ ಶಿಕ್ಷಣ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ಅನುಮೋದಿತ ಬೈಲಾ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಹೊಸ ಸದಸ್ಯರ ಸೇರ್ಪಡೆ ಪ್ರಕ್ರಿಯೆಯೂ ಸಂಸ್ಥೆಯ ಅನುಮೋದಿತ ಬೈಲಾ ನಿಯಮಾನುಸಾರವೇ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.

ಸಂಸ್ಥೆಯ ಬೈಲಾದ 7(B) Admission of Member ನಿಯಮದ ಪ್ರಕಾರ, ಆಡಳಿತ ಮಂಡಳಿಯು ಹೊಸ ಸದಸ್ಯತ್ವಕ್ಕೆ ಅವಕಾಶ ಕಲ್ಪಿಸುವ ನಿರ್ಧಾರ ಪ್ರಕಟಿಸಿದ ಸಂದರ್ಭದಲ್ಲಿ, ಅವಿಭಜಿತ ಕಲಬುರಗಿ, ಬೀದರ್ ಮತ್ತು ಅವಿಭಜಿತ ರಾಯಚೂರು ಜಿಲ್ಲೆಗಳ ನಿವಾಸಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಬೈಲಾ ಪ್ರಕಾರ ಅರ್ಜಿ ನಮೂನೆಯನ್ನು ಸಂಸ್ಥೆಯ ಮುಖ್ಯ ಕಚೇರಿಯಿಂದ ₹2 ಪಾವತಿಸಿ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯನ್ನು ಸಂಸ್ಥೆಯ ಕಾರ್ಯದರ್ಶಿಗಳಿಗೆ ಸಲ್ಲಿಸುವಾಗ ₹100 ಪ್ರವೇಶ ಶುಲ್ಕವನ್ನು ಪೋಸ್ಟಲ್ ಆರ್ಡರ್ ರೂಪದಲ್ಲಿ ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಅರ್ಜಿ ಪಡೆಯುವುದು ಹಾಗೂ ಸಲ್ಲಿಸುವುದು ಸಂಸ್ಥೆಯ ಮುಖ್ಯ ಕಚೇರಿಯಲ್ಲಿಯೇ ನಡೆಯುತ್ತದೆ

ಈ ಹಿನ್ನೆಲೆಯಲ್ಲಿ ಹೊಸ ಸದಸ್ಯತ್ವ ಪ್ರಕ್ರಿಯೆಯು ಸಂಸ್ಥೆಯ ಅನುಮೋದಿತ ಬೈಲಾ ನಿಯಮಗಳ ಪ್ರಕಾರವೇ ನಡೆಯಲಿದ್ದು, ಸದಸ್ಯತ್ವ ನೀಡುವ ಅಥವಾ ನಿರಾಕರಿಸುವ ಅಧಿಕಾರ ಸಂಸ್ಥೆಯ ಆಡಳಿತ ಮಂಡಳಿಗೆ ಇರುತ್ತದೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ, ಬೈಲಾದ ನಿಯಮಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಬೇಕೆಂದು ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ ಅವರು ಮನವಿ ಮಾಡಿದ್ದಾರೆ.

ಸಂಸ್ಥೆಯ ಬೈಲಾ ನಿಯಮಾನುಸಾರ ನಡೆಯುವ ಸದಸ್ಯತ್ವ ಪ್ರಕ್ರಿಯೆಯ ಕುರಿತು ಸಾರ್ವಜನಿಕರು ಗೊಂದಲಕ್ಕೊಳಗಾಗದೆ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕು ಎಂದು ಅವರು ತಿಳಿಸಿದ್ದಾರೆ.