ಸಿದ್ದೇಶ್ವರ ಕಾಲೋನಿಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿಗೆ ಮನವಿ
ಸಿದ್ದೇಶ್ವರ ಕಾಲೋನಿಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿಗೆ ಮನವಿ
ಕುಸನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿದ್ದೇಶ್ವರ ಕಾಲೋನಿಯಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಿ, ಇಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಯಾನಂದ್ ಸಪ್ಪನ್ ಅವರ ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿದ್ದೇಶ್ವರ ಕಾಲೋನಿಯ ಪ್ರಮುಖರಾದ ರಾಜು ದೇವಕರ್, ಅಂಬಾರಾಯ ಓಕ್ಲಿ, ರಾಮಯ್ಯ ಗುತ್ತೇದಾರ್, ಶಿವಕುಮಾರ್ ಮಾಕೊಂಡಿ ಹಾಗೂ ವಿಜಯಕುಮಾರ್ ರಾವೂರ್ ಸೇರಿದಂತೆ ಕಾಲೋನಿಯ ಎಲ್ಲಾ ಮಹಿಳೆಯರು ಭಾಗವಹಿಸಿ, ತಮ್ಮ ನೀರಿನ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಸಿದ್ದೇಶ್ವರ ಕಾಲೋನಿಯ ನಿವಾಸಿಗಳು ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದು, ಜನರ ದೈನಂದಿನ ಬದುಕಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಲಾಯಿತು.
ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಕಾಲೋನಿಯ ನಿವಾಸಿಗಳೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಲಾಯಿತು.

