ಚೆಟ್ಟಿನಾಡ್ ಸಿಮೆಂಟ್ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಆಗ್ರಹ
ಚೆಟ್ಟಿನಾಡ್ ಸಿಮೆಂಟ್ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಆಗ್ರಹ
ವಾಹನ ಚಾಲಕರು, ಲಾರಿ ಮಾಲೀಕರು ಮತ್ತು ಕಾರ್ಮಿಕರ ಸಮಸ್ಯೆ ಪರಿಹರಿಸುವಂತೆ ಮನವಿ
ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಕಲ್ಲೂರ ರಸ್ತೆ ಸಮೀಪದ ಚೆಟ್ಟಿನಾಡ್ ಸಿಮೆಂಟ್ ಕಾರ್ಖಾನೆಯಲ್ಲಿ ಸ್ಥಳೀಯ ಟಿಪ್ಪರ್ ಮತ್ತು ಲಾರಿ ಮಾಲೀಕರಿಗೆ ಸಾರಿಗೆ ಕೆಲಸದಲ್ಲಿ ಆದ್ಯತೆ ನೀಡಬೇಕು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಹಾಗೂ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೂಲನಿವಾಸಿ ವಾಹನ ಚಾಲಕರ ಸಂಘ ಹಾಗೂ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಸ್ಥಳೀಯ ವಾಹನ ಮಾಲೀಕರು ಬ್ಯಾಂಕ್‌ಗಳಿಂದ ಸಾಲ ಪಡೆದು ಟಿಪ್ಪರ್ ಮತ್ತು ಲಾರಿಗಳನ್ನು ಖರೀದಿಸಿ ಸಾರಿಗೆ ಉದ್ಯಮ ನಡೆಸುತ್ತಿದ್ದಾರೆ. ವಾಹನಗಳ ಸಾಲದ ಕಂತು, ಡೀಸೆಲ್ ವೆಚ್ಚ, ವಿಮೆ, ತೆರಿಗೆ, ನಿರ್ವಹಣೆ ಹಾಗೂ ಚಾಲಕರ ವೇತನ ಸೇರಿದಂತೆ ಹಲವು ಆರ್ಥಿಕ ಹೊರೆಗಳನ್ನು ಭರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ವಾಹನಗಳಿಗೆ ಸಮರ್ಪಕವಾಗಿ ಸಾರಿಗೆ ಕೆಲಸ ದೊರೆಯದಿದ್ದರೆ, ವಾಹನ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಆದ್ದರಿಂದ ಕಾರ್ಖಾನೆಗೆ ಕಚ್ಚಾ ಸಾಮಗ್ರಿ ಸಾಗಿಸುವ ಕೆಲಸ ಹಾಗೂ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮೈನಿಂಗ್ ಇಲಾಖೆಯ ಅನುಮತಿ ಮತ್ತು ರಾಯಲ್ಟಿ ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಮಿತಿಗಿಂತ ಹೆಚ್ಚಿನ ಭಾರ ಹೊತ್ತು ಬರುವ ಲಾರಿ ಹಾಗೂ ಟಿಪ್ಪರ್‌ಗಳ ಪ್ರವೇಶವನ್ನು ನಿರ್ಬಂಧಿಸಬೇಕು. ಅಲ್ಲದೆ, ಅನುಮತಿ ಪಡೆದ ರಾಯಲ್ಟಿ ಸ್ಥಳದಿಂದಲೇ ಕೆಂಪು ಮಣ್ಣನ್ನು ಸಾಗಿಸಬೇಕು. ನಿಯಮಬಾಹಿರವಾಗಿ ಬೇರೆ ಸ್ಥಳಗಳಿಂದ ಮಣ್ಣು ತರುವ ವಾಹನಗಳ ವಿರುದ್ಧ ಕ್ರಮ ಕೈಗೊಂಡು, ನಿಯಮಾನುಸಾರ ಸಾಗಣೆ ಮಾಡುವ ವಾಹನಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಅನ್ಯ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ಕೆಲವು ವಾಹನ ಚಾಲಕರಿಂದ ಮದ್ಯಪಾನ ಅಥವಾ ಮಾದಕ ವಸ್ತುಗಳ ಪ್ರಭಾವದಲ್ಲಿ ಚಾಲನೆ, ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದ ರೈತರು, ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕಾರ್ಖಾನೆಯ ಪ್ಯಾಕಿಂಗ್ ವಿಭಾಗದಲ್ಲಿ ದುಡಿಯುವ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು. ಕಾರ್ಮಿಕರಿಗೆ ಕಾನೂನುಬದ್ಧ ಸೌಲಭ್ಯಗಳನ್ನು ಒದಗಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು, ಸಾರಿಗೆ ಗುತ್ತಿಗೆ ಮತ್ತು ಲೋಡಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡುವುದು, ವಾಹನ ಚಾಲಕರಿಗೆ ಕಾರ್ಖಾನೆ ಆವರಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಸ್ಥಳೀಯ ವಾಹನ ಮಾಲೀಕರು ಮತ್ತು ಚಾಲಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಡಲಾಗಿದೆ. ಈ ಕುರಿತು ಸಂಘಟನೆಗಳ ಪದಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಬೇಡಿಕೆಗಳ ಕುರಿತು ಆಡಳಿತ ಮಂಡಳಿಯ ನಿರ್ಧಾರ ಹಾಗೂ ಅನುಷ್ಠಾನದ ಕಾಲಮಿತಿಯನ್ನು ಲಿಖಿತವಾಗಿ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯದಿದ್ದರೆ ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಕಾನೂನುಬದ್ಧ ಹೋರಾಟ ಮುಂದುವರಿಸಲಾಗುವುದು ಎಂದು ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ. ಕಾರ್ಖಾನೆಯ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುವುದು ತಮ್ಮ ಉದ್ದೇಶವಲ್ಲ; ಸ್ಥಳೀಯರ ಬದುಕಿಗೆ ನ್ಯಾಯ ಒದಗಿಸುವುದು, ಕಾರ್ಮಿಕರ ಸುರಕ್ಷತೆ ಖಚಿತಪಡಿಸುವುದು ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡುವುದೇ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಾಹನ ಚಾಲಕರ ಸಂಘದ ಅಧ್ಯಕ್ಷ ಮಾರುತಿ ಗಂಜಗಿರಿ, ಉಪಾಧ್ಯಕ್ಷ ಮಹೇಶ ಕುಸರಂಪಳ್ಳಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಸೂದ್ ಸೌದಾಗರ್, ಕಾರ್ಯದರ್ಶಿ ಬಾಬುಮಿಯ್ಯಾ, ಮುಜೀಬ್ ಎಂ.ಎಂ.ಸಿ., ಪ್ರಕಾಶ್ ಭಕ್ತಂಪಳ್ಳಿ, ಗೋವಿಂದ, ಅಮರನಾಥ ಹೂವಿನಬಾವಿ, ಮೋಹನ ಐನಾಪೂರ (ವಿದ್ಯಾರ್ಥಿಗಳ ಸಂಘದ ಜಿಲ್ಲಾಧ್ಯಕ್ಷ), ಮೊಬಿನ್, ಪಿಂಟು, ಮತೀನ್, ಸದ್ದಾಂ, ಶಿವಕುಮಾರ ಜಾಬಶೆಟ್ಟಿ, ಸಂತೋಷ, ದಾವುದ್, ಮೋಗಲಪ್ಪಾ ಬೇಡಕಪಳ್ಳಿ, ಅಶೋಕ, ಸುರೇಶ, ಕಮಲಕರ್, ಶಾಂತಕುಮಾರ್, ಜೈ ಭೀಮ್, ಮಿಥುನ್, ಅನ್ಸಾರ್, ಶಿವರಾಜ್, ಮಾರುತಿ, ಅಹೆಮದ್, ಲೋಕೇಶ್, ತಾನಾಜೀ, ನರಸಿಮ್ಲು ಮತ್ತು ದೀಲೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

