ದಸರಾ ಎಂದರೆ ಸಂಭ್ರಮದ ನವರಾತ್ರಿ : ಬಸವರಾಜ ಪಾಟೀಲ ಊಡಗಿ

ದಸರಾ ಎಂದರೆ ಸಂಭ್ರಮದ ನವರಾತ್ರಿ : ಬಸವರಾಜ ಪಾಟೀಲ ಊಡಗಿ

ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ 45ನೇ ವರ್ಷದ ದಸರಾ ಉತ್ಸವ ಉದ್ಘಾಟನೆ

ದಸರಾ ಎಂದರೆ ಸಂಭ್ರಮದ ನವರಾತ್ರಿ : ಬಸವರಾಜ ಪಾಟೀಲ ಊಡಗಿ

 ಸೇಡಂ.ಅ.11-ದಸರಾ ಹಬ್ಬ ಎಂದರೆ ಅಸತ್ಯದ ವಿರುದ್ಧ ಸತ್ಯದ ಜಯ, ದಸರಾ ಹಬ್ಬ ನವರಾತ್ರಿಗಳ ಸಂಭ್ರಮದಿಂದ ಕೂಡಿರುತ್ತದೆ ಎಂದು ರಾಜ್ಯ ಕೃಷಿಕ ಸಮಾಜದ ನಿರ್ದೇಶಕ ಬಸವರಾಜ ಪಾಟೀಲ ಊಡಗಿ ಅಭಿಪ್ರಾಯಪಟ್ಟರು. ನಗರದ ಶ್ರೀ ಪಂಚಲಿಂಗೇಶ್ವರ ಶಾಂಭವಿ ರಂಗ ಮಂಟಪದಲ್ಲಿ 45ನೇ ವರ್ಷದ ದಸರಾ ಉತ್ಸವ ಉದ್ಘಾಟಿಸಿ ಮಾತನಾಡಿದ, ಅವರು ಅನಾದಿಕಾಲದಿಂದಲೂ ರಕ್ಕಸರನ್ನು ಸದೆ ಬಡಿದು ದೇವಿ ನವರಾತ್ರಿಗಳ ಅವತಾರ ತಾಳಿ ಜಗತ್ತಿನ ಉದ್ಧರಿಸಿದ ದುರ್ಗಾ ಮಾತೆಯ ಆರಾಧನೆ ಮನೆ, ಮನಗಳಲ್ಲಿ ಬೆಳಗಲಿದೆ ಎಂದರು. ಸೇಡಂ ಪಟ್ಟಣದ ಪುರಾತನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶ್ರೀ ಅಂಬಾ ಭವಾನಿ ಘಟಸ್ಥಾಪನಗೈದು, ಒಂಬತ್ತು ದಿನ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಮಾದರಿಯಾಗಿದೆ ಎಂದು ಊಡಗಿ ಅವರು ಹೇಳಿದರು. ಮುಖ್ಯ ಪ್ರವಚನ ನೀಡಿದ ಕೋಡ್ಲಾ ಶ್ರೀ ಶಂಭುಲಿಂಗೇಶ್ವರ ಮಠದ ಶ್ರೀಗಳಾದ ಶಂಭುಲಿಂಗ ಮಹಾಸ್ವಾಮಿಗಳು ತಾಯಿಗೆ ಸರ್ವಶ್ರೇಷ್ಠ ಶಕ್ತಿಯಿದೆ, ಗಣೇಶ, ಶಿವ ಸೇರಿದಂತೆ ದೇವ ಲೋಕದ ಎಲ್ಲ ದೇವರಗಳ ಪೂಜೆಗಿಂತ ತಾಯಿ ಶಾಂಭವಿ, ದೇವಿ, ದುರ್ಗೆಯ ಅವತಾರದ ಹೆಣ್ಣಿನ ರೂಪಕ್ಕೆ ಹೆಚ್ಚು ಪೂಜ್ಯನೀಯ ಸ್ಥಾನವಿದೆ ಎಂದರು. ಮಾನವ ಧಾರ್ಮಿಕ ನೆಮ್ಮದಿ ಕಂಡುಕೊಂಡರೆ ಜೀವನ ಸಾರ್ಥಕವಾಗುತ್ತದೆ, ಸೇಡಂನ ಪಂಚಲಿಂಗೇಶ್ವರ ದೇವಾಲಯ ಅಂಗಳದಲ್ಲಿ ಧಾರ್ಮಿಕ ಕಾರ್ಯಕ್ರಮ ಮುನ್ನಡೆಸುವ ಮೂಲಕ‌ ಲಿಂಗಗಳ ನಡುವೆ ದೇವಿಯ ಸ್ಥಾಪನೆ ಮಾಡಿ ನವರಾತ್ರಿ ಸಂಭ್ರಮ ಜರುಗುತ್ತಿರುವುದು ಸ್ಮರಣೀಯವಾಗಿದೆ ಎಂದು ನುಡಿದರು. ತಾತ್ಕಾಲಿಕ ಕೊಳೆ ಸೋಪು, ಶಾಂಪುಗಳಿಂದ ತೊಳೆಯಬಹುದು, ಆದರೆ ಪ್ರವಚನ, ಸತ್ಸಂಗಗಳಿಂದ ಮಾನವನ ಅಂತರಂಗದ ಕೊಳೆಯನ್ನು ತೊಳೆಯಲು ಸಾಧ್ಯ ಎಂದು ಶ್ರೀಗಳು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ವಿನೋದ ಸಂಗಾವಿ ಮಾತನಾಡಿ, ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ದಸರಾ ನವರಾತ್ರಿ ಮತ್ತೆ, ಮತ್ತೆ ಎತ್ತಿ ಹಿಡಿಯುತ್ತದೆ. ಪಂಚಲಿಂಗೇಶ್ವರ ದೇವಾಲಯ ಸಮಿತಿ, ದಸರಾ ಸಮಿತಿಯವರು ಒಂಬತ್ತು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ನಡೆಸಿ ದಿನನಿತ್ಯದ ಒತ್ತಡಕ್ಕೆ ಬ್ರೇಕ್ ಹಾಕುತ್ತಿದ್ದಾರೆ ಎಂದು ಹೇಳಿದರು. ವೇದಿಕೆ ಮೇಲೆ ಶ್ರೀ ಶಿವಶಂಕರೇಶ್ವರ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಶ್ರೀಗಳಾದ ಶ್ರೀ ಸದಾಶಿವ ಸ್ವಾಮಿಗಳು ಹಾಗೂ ಸಮಿತಿಯ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯದರ್ಶಿ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್, ಸಂತೋಷ ಕುಲಕರ್ಣಿ, ಅನಂತರೆಡ್ಡಿ ಪಾಟೀಲ, ಸುಧಾಕರ ಕುಲಕರ್ಣಿ, ನಾಗಭೂಷಣ ಯಲಗಾರ, ರಾಘವೇಂದ್ರ ಅಗನೂರು, ಆನಂದರೆಡ್ಡಿ ತುಳೇರ, ಜನಾರ್ಧನರೆಡ್ಡಿ ತುಳೇರ, ಸಿದ್ದಪ್ರಸಾದರೆಡ್ಡಿ ಇದ್ದರು.