ತಾಯಿ–ಮಗುವಿನ ಆರೋಗ್ಯಕ್ಕೆ ಪೌಷ್ಟಿಕ ಆಹಾರವೇ ಬುನಾದಿ : ರಾಮಚಂದ್ರ ಬೇಟೆಗಾರ
ತಾಯಿ–ಮಗುವಿನ ಆರೋಗ್ಯಕ್ಕೆ ಪೌಷ್ಟಿಕ ಆಹಾರವೇ ಬುನಾದಿ : ರಾಮಚಂದ್ರ ಬೇಟೆಗಾರ
ಶಹಾಪುರ: ಆರೋಗ್ಯವಂತ ತಾಯಿ, ಆರೋಗ್ಯವಂತ ಮಗು ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಪೌಷ್ಟಿಕ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಅತ್ಯವಶ್ಯಕವಾಗಿದ್ದು, ಪೋಷಣೆಯ ಕುರಿತು ಪ್ರತಿಯೊಂದು ಕುಟುಂಬದಲ್ಲೂ ಅರಿವು ಮೂಡಬೇಕು ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಮಚಂದ್ರ ಬೇಟೆಗಾರ ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ವನದುರ್ಗ ವ್ಯಾಪ್ತಿಯ ವನದುರ್ಗ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ ಹಾಗೂ ಶಿಶು ಅಭಿವೃದ್ಧಿ ಯೋಜನೆ, ಶಹಾಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಹಾಗೂ ಮಕ್ಕಳಿಗೆ ಸಮತೋಲನಯುತ ಮತ್ತು ಪೌಷ್ಟಿಕ ಆಹಾರ ನೀಡುವುದು ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಮಕ್ಕಳ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಪ್ರಮುಖವಾಗಿದೆ. ಸಿರಿಧಾನ್ಯಗಳು, ಬೇಳೆಕಾಳುಗಳು, ಹಸಿರು ಸೊಪ್ಪು, ತರಕಾರಿಗಳು, ಹಣ್ಣುಗಳು ಹಾಗೂ ಸ್ಥಳೀಯವಾಗಿ ಲಭ್ಯವಿರುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಆಹಾರದಲ್ಲಿ ಬಳಸುವಂತೆ ಅವರು ಸಲಹೆ ನೀಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲೇಶ ಕುರಕುಂದ ಮಾತನಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ದೊರೆಯುವ ಪೂರಕ ಪೌಷ್ಟಿಕ ಆಹಾರ, ಮಕ್ಕಳ ಬೆಳವಣಿಗೆ ಮೇಲ್ವಿಚಾರಣೆ, ಪೌಷ್ಟಿಕತೆ ಮತ್ತು ಆರೋಗ್ಯ ಶಿಕ್ಷಣ ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಮಕ್ಕಳಿಗೆ ವಯೋಮಾನಕ್ಕೆ ಅನುಗುಣವಾಗಿ ಪೂರಕ ಆಹಾರ ನೀಡುವುದು, ಗರ್ಭಿಣಿಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು, ಕಬ್ಬಿಣ–ಫೋಲಿಕ್ ಆಮ್ಲ ಮಾತ್ರೆಗಳನ್ನು ಆರೋಗ್ಯ ಸಿಬ್ಬಂದಿಯ ಸಲಹೆಯಂತೆ ಸೇವಿಸುವುದು ಹಾಗೂ ಕಿಶೋರಿಯರು ತಮ್ಮ ಆರೋಗ್ಯ ಮತ್ತು ಪೌಷ್ಟಿಕತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಪೋಷಣೆಯ ಅರಿವು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಪ್ರತಿಯೊಂದು ಮನೆಯ ದೈನಂದಿನ ಜೀವನದ ಭಾಗವಾಗಬೇಕು. ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಕುಟುಂಬದ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಿದಾಗ ಮಾತ್ರ ಅಪೌಷ್ಟಿಕತೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವರಾಧ್ಯ ಬೇಲೂರು, ಅಂಗನವಾಡಿ ಕಾರ್ಯಕರ್ತೆಯರಾದ ಅನುಸೂಯ ವನದುರ್ಗ, ಕಲ್ಲಮ್ಮ, ಯಲ್ಲಮ್ಮ, ಪದ್ಮಾ, ರಾಧಾ, ಈರಮ್ಮ ಚನ್ನುರು, ಪ್ರೇಮಾ, ಮಹಾದೇವಿ ಆಲ್ದಾಳ, ಜಯಶ್ರೀ ಲಕ್ಷ್ಮಿಬಾಯಿ, ಭೀಮಬಾಯಿ ಕಕ್ಕಸಗೇರಾ, ಭಾರತಿ ಹಾಗೂ ಶಾಂತಮ್ಮ ಬೂದನೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರು, ಮಹಿಳೆಯರು, ಕಿಶೋರಿಯರು ಹಾಗೂ ಮಕ್ಕಳು ಭಾಗವಹಿಸಿ ಪೋಷಣ ಅಭಿಯಾನದ ಸಂದೇಶವನ್ನು ಅರಿತುಕೊಂಡರು. ಪೌಷ್ಟಿಕ ಆಹಾರ, ಆರೋಗ್ಯ, ಸ್ವಚ್ಛತೆ, ತಾಯಿ–ಮಗು ಆರೈಕೆ ಹಾಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು.

