ಬೀದರ ಅಪ್ರಾಪ್ತ ಬಾಲಕಿ ಸಾವು ಪ್ರಕರಣ: ಎಸ್‌ಐಟಿ ತನಿಖೆಗೆ ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿಯಿಂದ ಮನವಿ

ಬೀದರ ಅಪ್ರಾಪ್ತ ಬಾಲಕಿ ಸಾವು ಪ್ರಕರಣ: ಎಸ್‌ಐಟಿ ತನಿಖೆಗೆ ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿಯಿಂದ ಮನವಿ

ಬೀದರ ಅಪ್ರಾಪ್ತ ಬಾಲಕಿ ಸಾವು ಪ್ರಕರಣ: ಎಸ್‌ಐಟಿ ತನಿಖೆಗೆ ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿಯಿಂದ ಮನವಿ

ಕಲಬುರಗಿ: ಬೀದರ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಗ್ರಾಮದ 15 ವರ್ಷದ ಪರಿಶಿಷ್ಟ ಸಮುದಾಯದ ಕಬ್ಬಡಿ ಕ್ರೀಡಾಪಟು ಕುಮಾರಿ ಶೋಭಾ ರಾನಾಡೆ ಸಾವಿನ ಪ್ರಕರಣವನ್ನು ಕೊಲೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣವೆಂದು ಪರಿಗಣಿಸಿ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಮಿತಿಯ ಮುಖಂಡರು ಆರೋಪಿಸಿರುವಂತೆ, ಅಪ್ರಾಪ್ತ ಬಾಲಕಿಯನ್ನು ಕ್ರೀಡಾ ತರಬೇತಿ ಹೆಸರಿನಲ್ಲಿ ಕರೆದುಕೊಂಡು ಹೋಗಿ ಎರಡು ವರ್ಷಗಳಿಂದ ದುಡಿಸಿಕೊಳ್ಳಲಾಗಿದ್ದು, ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದಲ್ಲಿ ಲಖಾನ ಪವಾರ ಎಂಬಾತನ ವಿರುದ್ಧ ಅಪಹರಣ, ಪೋಕ್ಸೋ ಹಾಗೂ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಇದಲ್ಲದೆ, ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟೆ ಅವರು ಆರೋಪಿಯನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿ, ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರು ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಎಸ್‌ಐಟಿ ರಚನೆ, ಬಾಲಕಿಯ ಶವ ಮರುಪರೀಕ್ಷೆ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎನ್.ಕೆ. ಅರ್ಜುನ, ಶಿವರುದ್ರ ಕಟ್ಟಿಮನಿ ಸೇರಿದಂತೆ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.