ರಸ್ತೆ ಸಂಚಾರ ಗಣತಿ ಜೊತೆಗೆ ಹ್ಯಾವಿ ಹೈವೋಲ್ಟೇಜ್ ಲೈಟ್ ತೆರವುಗೆ ಅಂಡಗಿ ಮನವಿ

ರಸ್ತೆ ಸಂಚಾರ ಗಣತಿ ಜೊತೆಗೆ ಹ್ಯಾವಿ ಹೈವೋಲ್ಟೇಜ್ ಲೈಟ್ ತೆರವುಗೆ ಅಂಡಗಿ ಮನವಿ

ರಸ್ತೆ ಸಂಚಾರ ಗಣತಿ ಜೊತೆಗೆ ಹ್ಯಾವಿ ಹೈವೋಲ್ಟೇಜ್ ಲೈಟ್ ತೆರವುಗೆ ಅಂಡಗಿ ಮನವಿ 

ಕಲಬುರಗಿ: ಲೋಕೋಪಯೋಗಿ ಇಲಾಖೆಯ ವತಿಯಿಂದ ಫೆಬ್ರುವರಿ ೨೬ ಮತ್ತು ೨೭ರಂದು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ೨೦೨೬ನೇ ಸಾಲಿನ ರಸ್ತೆ ಸಂಚಾರ ಗಣತಿ ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟೆಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಅವರು ಕಲಬುರಗಿ ವಿಭಾಗ ಕಚೇರಿಯ ಉಪ ಸಾರಿಗೆ ಆಯುಕ್ತ ಆನಂದ ಪಾರ್ಥನಳ್ಳಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯದ ೧೯೪ ರಾಜ್ಯ ಹೆದ್ದಾರಿಗಳು ಹಾಗೂ ೨೬೬ ಜಿಲ್ಲಾ ಮುಖ್ಯ ರಸ್ತೆಗಳ ಸೇರಿದಂತೆ ಒಟ್ಟು ೪೬೦ ಗಣತಿ ಕೇಂದ್ರಗಳಲ್ಲಿ ಸಂಚಾರ ಗಣತಿ ನಡೆಯಲಿದ್ದು, ಇದರ ಜೊತೆಗೆ ಪ್ರತಿಯೊಂದು ವಾಹನಗಳ ನೋಂದಣಿ ಪರಿಶೀಲನೆ ನಡೆಸಿ, ವಾಹನಗಳಿಗೆ ಅಳವಡಿಸಿರುವ ಹ್ಯಾವಿ ಹೈವೋಲ್ಟೇಜ್ (ಹ್ಯಾಲೊಜಿನ್) ಲೈಟ್‌ಗಳನ್ನು ತೆರವುಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ಆಗ್ರಹಿಸಿದರು.

ಅತಿಯಾಗಿ ಬೆಳಕು ನೀಡುವ ಇಂತಹ ಲೈಟ್‌ಗಳು ಎದುರಿನಿಂದ ಬರುವ ವಾಹನ ಚಾಲಕರಿಗೆ ತೊಂದರೆ ಉಂಟುಮಾಡಿ ಅಪಘಾತಗಳಿಗೆ ಕಾರಣವಾಗುತ್ತಿವೆ. ಆದ್ದರಿಂದ ಸುರಕ್ಷಿತ ಸಂಚಾರದ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂದು ತಿಳಿಸಿದರು. ಜೊತೆಗೆ ದ್ವಿಚಕ್ರ ವಾಹನಗಳು ಸರ್ವಿಸ್ ರಸ್ತೆಯಲ್ಲೇ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವಿಷಯವನ್ನು ಅಕ್ಟೋಬರ್ ೦೯, ೨೦೨೫ರಂದು ಕಲಬುರಗಿ ವಿಭಾಗ ಕಚೇರಿಯಲ್ಲಿ ಜರುಗಿದ “ಸಾರಿಗೆ ಅದಾಲತ್” ಕಾರ್ಯಕ್ರಮದಲ್ಲಿಯೂ ಜಂಟಿ ಸಾರಿಗೆ ಆಯುಕ್ತರಿಗೆ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆಕ್ಷೇಪಿಸಿದರು.

ಈ ಮನವಿ ಪತ್ರ ಸ್ವೀಕರಿಸಿದ ಉಪ ಸಾರಿಗೆ ಆಯುಕ್ತರು ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.