ನಾಲವಾರ ಮಠ ಕಲಾವಿದರ ಆಶ್ರಯ ಧಾಮ : ನಟ ಶರಣ್

ನಾಲವಾರ ಮಠ ಕಲಾವಿದರ ಆಶ್ರಯ ಧಾಮ : ನಟ ಶರಣ್

ಜನಮನ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು

ನಾಲವಾರ ಮಠ ಕಲಾವಿದರ ಆಶ್ರಯ ಧಾಮ : ನಟ ಶರಣ್

ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠವು ನನ್ನಂತಹ ಅನೇಕ ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸಿದ ಆಶ್ರಯಧಾಮ ಎಂದು ಕನ್ನಡ ಚಿತ್ರರಂಗದ ನಾಯಕ ನಟ ಶರಣ್ ಹೇಳಿದರು.

ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಜಾತ್ರಾಮಹೋತ್ಸವ ಸಾಂಸ್ಕೃತಿಕ ಸಮಾರೋಪ ಸಮಾರಂಭದ ವಿಶೇಷ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪಕ್ಕದ ಯಾದಗಿರಿಯ ಅಮೇರಿಕನ್ ಆಸ್ಪತ್ರೆ ಎಂದು ಕರೆಯಲ್ಪಡುತ್ತಿದ್ದ ಹೋಲ್ ಸ್ಟನ್ ಆಸ್ಪತ್ರೆಯಲ್ಲಿ ನನ್ನ ಜನನವಾಗಿದ್ದು,ಈ ಭಾಗಕ್ಕೆ ಬಂದಾಗಲೆಲ್ಲ ನನ್ನದೇ ಮನೆಗೆ ಬಂದ ಅನುಭವವಾಗುತ್ತದೆ.

ಕಲಬುರಗಿ ಶರಣನ ಆಶೀರ್ವಾದ ಫಲದಿಂದ ನಾನು ಜನ್ಮತಾಳಿರುವೆ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಯ ಕಾರುಣ್ಯದಿಂದ ಚಿತ್ರರಂಗದಲ್ಲಿ ನೆಲೆಯೂರಿರುವೆ ಎಂದರು.

ನಾಲವಾರದ ಪೂಜ್ಯರ ಆಶೀರ್ವಾದ ಪಡೆದು ನಾನು ಛೂ ಮಂತರ್ ಎಂಬ ಸಿನಿಮಾ ಪ್ರಾರಂಭಿಸಿದೆ.ಶುಭಾವಾಗಲಿ ಎಂದು ಹರಸಿ ಆಶೀರ್ವಾದ ಮಾಡಿದ್ದರು.ಅವರು ನುಡಿದಂತೆ ಸಿನಿಮಾ ಯಶಸ್ವಿಯಾಯಿತು ಎಂದರು.

ಕನ್ನಡದ ಮೇರುನಟ ದಿ.ಡಾ.ರಾಜಕುಮಾರ, ಡಾ.ಅಂಬರೀಶ್ ಅಂತಹವರು ನಾಲವಾರ ಮಠದ ಜಾತ್ರೆಗೆ ಬಂದು ಧನ್ಯತೆಯ ಭಾವ ಅನುಭವಿಸಿದ್ದರು.ಅಂತಹ ಪಾವನ ವೇದಿಕೆಯ ಮೇಲೆ ನನಗೂ ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದರು.

ಉತ್ತರ ಕರ್ನಾಟಕ ಭಾಗದ ಜನರ ಅಭಿಮಾನ ಸಿಳ್ಳೆ-ಕೇಕೆಗಳೇ ಕನ್ನಡದ ಕಲಾವಿದರನ್ನು ಜೀವಂತವಾಗಿಟ್ಟಿವೆ.ನೀವು ತೋರುವ ಪ್ರೀತಿ ಬೆಲೆಕಟ್ಟಲಾಗದ್ದು ಎಂದು ಭಾವುಕರಾದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹುಕ್ಕೇರಿ ಸಂಸ್ಥಾನದ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮಧ್ಯರಾತ್ರಿಯಾದರೂ ಅಪಾರ ಸಂಖ್ಯೆಯಲ್ಲಿ ಜನಸಾಗರ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ನೋಡುವುದೇ ಒಂದು ಸೋಜಿಗ.ನಾಲವಾರ ಶ್ರೀಮಠದ ಭಕ್ತರಲ್ಲಿ ಕೇವಲ ಭಕ್ತಿ ಮಾತ್ರವಲ್ಲ, ಗುರುವಿನ ಮೇಲೆ ಅಪಾರವಾದ ಪ್ರೀತಿಯೂ ಇದೆ ಎಂಬುದು ಇದರಿಂದ ನೋಡಬಹುದು ಎಂದರು.

ಕಾವಿ ಧರಿಸಿದವರೆಲ್ಲಾ ಸ್ವಾಮೀಜಿಗಳಾಗುವುದಿಲ್ಲ ಜನರ ಚಿಂತೆ ಕಳೆದವರು ನಿಜವಾದ ಸ್ವಾಮೀಜಿಗಳಾಗುತ್ತಾರೆ ಎಂದು ಹೇಳಿ ಬೇಡಿ ಬರುವ ಭಕ್ತರ ಬವಣೆ ಕಳೆವ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ನಿಜ ಅರ್ಥದಲ್ಲಿ ಸ್ವಾಮಿತ್ವದ ಕೈಂಕರ್ಯದಲ್ಲಿ ನಿರತರಾಗಿದ್ದಾರೆ ಎಂದರು.

ಹಿಂದಿಯ ಇಂಡಿಯನ್ ಐಡಲ್ ಹಾಗೂ ಕನ್ನಡದ ಸರಿಗಮಪ ಕಾರ್ಯಕ್ರಮದ ಸ್ಪರ್ಧಿ ಕು.ಶಿವಾನಿ ಶಿವದಾಸ ಸ್ವಾಮಿ ಅವರ ಸಂಗೀತ ರಸಮಂಜರಿ ನೆರೆದಿದ್ದ ಜನಸ್ತೋಮವನ್ನು ಭಾವಪರವಶರನ್ನಾಗಿ ಮಾಡಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೀಠಾಧಿಪತಿಗಳಾದ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳು ನಾಡು ಸುಖ ಸಮೃದ್ಧಿಯಿಂದಿರಲಿ,ಜನ ನೆಮ್ಮದಿಯ ಬದುಕನ್ನು ನಡೆಸುವಂತೆ,ರೈತನ ಸಂಕಷ್ಟಗಳೆಲ್ಲಾ ಪರಿಹಾರವಾಗಿ,ಮಳೆ-ಬೆಳೆ ಚನ್ನಾಗಿ ಬಂದು,ಅದಕ್ಕೆ ತಕ್ಕುದಾದ ಬೆಲೆಯೂ ಸಿಕ್ಕಿ ಎಲ್ಲರೂ ಸಂತಸದಿಂದ ಬದುಕುವ ವಾತಾವರಣ ನಿರ್ಮಾಣವಾಗಲಿ ಎಂದು ಹೇಳಿದರು.

ಸಂಸ್ಕೃತಿಯಿಂದ ವಿಮುಖರಾಗದೇ,ಜಾತಿ ಧರ್ಮದ ಹೆಸರಲ್ಲಿ ಕಚ್ಚಾಡದೇ,ಎಲ್ಲರೊಂದಿಗೆ ಸೌಹಾರ್ದಯುತವಾಗಿ ಬಾಳುವುದನ್ನು ರೂಢಿಸಿಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ಜನರಿಗೆ ಕಿವಿಮಾತು ಹೇಳಿದರು.