ಜನತೆ ನೆಮ್ಮದಿಯಿಂದ ಬದುಕುವಂತಾಗಲಿ: ಶಾಸಕ ಪ್ರಭು ಚವ್ಹಾಣ ---
ಜನತೆ ನೆಮ್ಮದಿಯಿಂದ ಬದುಕುವಂತಾಗಲಿ: ಶಾಸಕ ಪ್ರಭು ಚವ್ಹಾಣ
ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಅಗತ್ಯ ಪರಿಹಾರ ಕಲ್ಪಿಸಿ ಜನರು ನೆಮ್ಮದಿಯಿಂದ ಬದುಕುವಂತಾಗಬೇಕು ಎಂಬುದೇ ನನ್ನ ಪರಮ ಉದ್ದೇಶವಾಗಿದ್ದು, ಈ ದಿಶೆಯಲ್ಲಿ ಕ್ಷೆತ್ರಾದ್ಯಂತ ಗ್ರಾಮ ಸಂಚಾರ ನಡೆಸುತ್ತಿದ್ದೇನೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.
ಕಲನಗರ ತಾಲ್ಲೂಕಿನ ಮುತಖೇಡ, ದಾಬಕಾ(ಸಿಹೆಚ್), ಗಂಗನಬೀಡ, ಗಣೇಶಪೂರ(ಯು), ವಾಗನಗೇರಾ, ಶಿವಪುರ, ಮುರ್ಕಿ, ಮುರ್ಕಿ ವಾಡಿ, ಕುರುಬುರವಾಡಿಯಲ್ಲಿ ಜ.28ರಂದು ಗ್ರಾಮ ಸಂಚಾರ ನಡೆಸಿ ಅವರು ಮಾತನಾಡಿದರು.
ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ ಶಾಸಕನಾದ ನಂತರ ಪ್ರತಿ ವರ್ಷ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಬೇಟಿ ನೀಡುತ್ತಾ ಬರುತ್ತಿದ್ದೇನೆ. ಅದರಂತೆ ಈ ವರ್ಷವೂ ಕೂಡ ಗ್ರಾಮ ಸಂಚಾರ ನಡೆಸುತ್ತಿದ್ದು, ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಗ್ರಾಮ ಪಂಚಾಯಿತಿ, ಶಾಲೆ, ಅಂಗನವಾಡಿ, ಆಸ್ಪತ್ರೆ, ಪಶು ಆಸ್ಪತ್ರೆಗಳು, ರೈತ ಸಂಪರ್ಕ ಕೇಂದ್ರ, ನಾಡ ಕಛೇರಿಗಳಿಗೆ ಭೇಟಿ ನೀಡುತ್ತಿದ್ದೇನೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮತ್ತಿತರೆ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡು ಕೊರತೆಗಳಿದಲ್ಲಿ ಸರಿಪಡಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ರೈತರ ಅಭಿವೃದ್ಧಿಗೆ ವಿವಿಧ ಇಲಾಖೆಗಳಲ್ಲಿ ನಾನಾ ರೀತಿಯ ಯೋಜನೆಗಳಿವೆ. ಇವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರದ ಎಲ್ಲ ಸೌಲಭ್ಯಗಳು ಅರ್ಹರಿಗೆ ತಲುಪಿಸಬೇಕಿದೆ. ಜನರಲ್ಲಿಯೂ ಕೂಡ ತಮ್ಮ ಗ್ರಾಮದ ಅಭಿವೃದ್ಧಿಯ ಬಗ್ಗೆ ಕಾಳಜಿ ಮೂಡಬೇಕು. ತಮ್ಮ ಊರಿನಲ್ಲಿ ಸರ್ಕಾರದ ಯೋಜನೆಗಳನ್ನು ತರಲು ಪ್ರಯತ್ನಿಸಬೇಕು. ಅಭಿವೃದ್ಧಿ ಕಲಸಗಳಿಗೆ ಸಹಕರಿಸಬೇಕು ಮತ್ತು ಅವುಗಳು ಸರಿಯಾಗಿ ಆಗುವಂತೆ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
ರೈತರ ಸಮಸ್ಯೆಗೆ ಸ್ಪಂದನೆ: ಬೆಂಬಲ ಬೆಲೆ ಯೋಜನೆಯಡಿ ಸೋಯಾ ಬೆಳೆ ಮಾರಾಟ ಮಾಡಲು ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ನೋಂದಾಯಿಸಲಾಗಿದೆ. ಆದರೂ ನಮ್ಮ ಬೆಳೆಯನ್ನು ತೆಗೆದುಕೊಳ್ಳುತ್ತಿಲ್ಲವೆಂದು ದಾಬಕಾ(ಸಿಹೆಚ್) ಗ್ರಾಮಸ್ಥರು ದೂರು ನೀಡಿದರು. ಸರ್ಕಾರದಿಂದಲೇ ಸೋಯಾ ಖರೀದಿಯನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಿದಾಗ, ಶಾಸಕರು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಮಾಹಿತಿ ಪಡೆದರು. ಬೆಂಬಲ ಬೆಲೆ ಯೋಜನೆಯಡಿ ರೈತರ ಸೋಯಾ ಖರೀದಿಗೆ ಅವಕಾಶ ಮಾಡಿಕೊಡಲು ವ್ಯವಸ್ಥೆ ಮಾಡಿಕೊಡೇಕೆಂದು ಹೇಳಿದರು.
ಮುತಖೇಡ್, ಗಣೇಶಪೂರ (ಯು), ಕುರುಬುರವಾಡಿ ಶಿವಪುರದಲ್ಲಿ 14 ಲಕ್ಷದ ಶಾಲೆ ಉನ್ನತೀಕರಣ, ದುರಸ್ತಿ, ಓಹೆಚ್ಟಿ ಟ್ಯಾಂಕ್, ಸೋಲಾರ್ ಪೆನಲ್ ಅಳವಡಿಸುವ ಕಾಮಗಾರಿಗಳು, ದಾಬಕಾನಲ್ಲಿ 25 ಲಕ್ಷದ ಸಾರ್ವಜನಿಕ ಶೌಚಾಲಯ, ಗಣೇಶಪೂರನಲ್ಲಿ 22.50 ಲಕ್ಷದ ಅಂಗನವಾಡಿ ಕಟ್ಟಡ, ಮುರ್ಕಿಯಲ್ಲಿ 6 ಲಕ್ಷದ ಸರ್ಕಾರಿ ಶಾಲೆ ದುರಸ್ತಿ ಕಾಮಗಾರಿಗೆ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಅಮಿತಕುಮಾರ ಕುಲಕರ್ಣಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಭಾಷ, ಜೆಸ್ಕಾಂ ಎಇಇ ರವಿ ಕಾರಬಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಕೃಷಿ ಇಲಾಖೆಯ ಧೂಳಪ್ಪ, ಪಂಚಾಯತ್ ರಾಜ್ ಇಂಜಿನೀಯರಿಂಗ್ ಇಲಾಖೆಯ ವೆಂಕಟರಾವ ಶಿಂಧೆ, ಮುಖಂಡರಾದ ವಸಂತ ಬಿರಾದಾರ, ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ, ಸತೀಷ ಪಾಟೀಲ, ಶಿವರಾಜ ಅಲ್ಮಾಜೆ, ಅಶೋಕ ಅಲ್ಮಾಜೆ, ಝಾಕೀರ್ ಶೇಖ್, ಸುಜಿತ್ ರಾಠೋಡ್, ರಾಜು ಪೋಕಲವಾರ, ಸಂಜು ಮುರ್ಕೆ, ಯೋಗೇಶ ಪಾಟೀಲ, ಮಂಜು ಸ್ವಾಮಿ, ಬಾಬು ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಹಾಗೂ ಗ್ರಾಮಸ್ಥರಿದ್ದರು.