ಓದಿ ಬರಹಗಾರ ನಾಗಬಹುದು ಓದದೇ ಬರಹಗಾರನಾಗಲು ಸಾಧ್ಯವಿಲ್ಲ: ಡಾ.ಬಡಿಗೇರ

ಓದಿ ಬರಹಗಾರ ನಾಗಬಹುದು ಓದದೇ ಬರಹಗಾರನಾಗಲು ಸಾಧ್ಯವಿಲ್ಲ: ಡಾ.ಬಡಿಗೇರ

ಓದಿ ಬರಹಗಾರ ನಾಗಬಹುದು ಓದದೇ ಬರಹಗಾರನಾಗಲು ಸಾಧ್ಯವಿಲ್ಲ: ಡಾ.ಬಡಿಗೇರ

ಕಲಬುರಗಿ: ಬರಹಗಾರನಾಗಬೇಕಾದರೆ ಓದುವುದು ಬಹಳ ಅಗತ್ಯ, ಓದದೇ ಕಾವ್ಯ ರಚಿಸಿದರೆ ಉತ್ತಮ ಬರಹಗಾರನಾಗಲಾರ ಎಂದು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಾದೇವ ಬಡಿಗೇರ ಅಭಿಪ್ರಾಯಪಟ್ಟರು.

ನಗರದ ವಿಶ್ವನಾಥ್ ರೆಡ್ಡಿ ಮುದ್ನಾಳ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಮಾತೋಶ್ರೀ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡ ರಾಜ್ಯಮಟ್ಟದ ಒಂದು ದಿನದ 'ಕನ್ನಡ, ಕವಿ - ಕಾವ್ಯ - ಕಥೆ - ಸಂಸ್ಕೃತಿ ಅಧ್ಯಯನ ಕಮ್ಮಟ' ದಲ್ಲಿ ಅವರು ವಿಷಯವನ್ನು ಮಂಡಿಸಿದರು.

ಹೊಸದಾಗಿ ಕಾವ್ಯ ರಚಿಸ ಬೇಕಾದರೆ ಕಾವ್ಯಗಳನ್ನು ಓದುವುದು ಹವ್ಯಾಸ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಒಂದು ಒಳ್ಳೆಯ ಬಲಿಷ್ಠವಾದ ಕಾವ್ಯ ರಚನೆ ಯಾಗಲು ಸಾಧ್ಯವಾಗುತ್ತದೆ ಎಂದರು.

ಕಾವ್ಯ ರಚಿಸುವವನ ಕಾವ್ಯವು ಕೇವಲ ಭಾಷೆಯಾಗಿರದೆ, ಅದರಲ್ಲಿ ರಸಜೀವ, ಅಲಂಕಾರ ಸೇರಿದಂತೆ ಸುಖ ನಿಲಯವು ಒಳಗೊಂಡಿರಬೇಕು. ಬರಹಗಾರನ ಸಾಹಿತ್ಯವು ಋಣಾತ್ಮಕ ಟೀಕೆಗಳಿಗೆ ಅನ್ವಯಿಸದೆ ವ್ಯಕ್ತಿ, ಕುಟುಂಬ, ಸಮಾಜ ಮತ್ತು ದೇಶಕ್ಕೆ ಒಳ್ಳೆಯ ಸಂದೇಶ ಕೊಡುವ ಕೃತಿ ಯಾಗಿರಬೇಕು ಎಂದು ಶಿಬಿರಾರ್ಥಿಗಳಿಗೆ ಅವರು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಕಾಶಕ ಬಸವರಾಜ್ ಕೊನೆಕ್ ಮಾತನಾಡಿ, ಪ್ರಕಾಶಕರು ಪುಸ್ತಕಗಳನ್ನು ಪ್ರಕಟಿಸಬೇಕಾದರೆ ಉತ್ತಮ ಬರಹಗಾರ ಬೇಕಾಗುತ್ತದೆ, ಆದರೆ ನಮ್ಮ ವ್ಯಾಪ್ತಿಯಲ್ಲಿ ಬರಹಗಾರ ಕೊರತೆ ಎದ್ದು ಕಾಣುತ್ತಿದೆ ಎಂದು ಬೇಸರ ಹೊರಹಾಕಿದರು.

ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಸುಮಾರು 37ಕ್ಕು ಹೆಚ್ಚು ರಾಜಮನೆತನಗಳು ಆಳಿವೆ. ಅವುಗಳ ಇತಿಹಾಸ ಬರೆದಿಟ್ಟವರು ಮಾತ್ರ ಬೆರಳಣಿಕೆಯ ಲೇಖಕರಷ್ಟೇ ಸಿಗುತ್ತಾರೆ. ಕಾವ್ಯಕ್ಕೆ ಮೂಲವೇ ಜನಪದ. ಇಂದಿನ ಕೇಳುಗನಷ್ಟೇ ನಾಳೆಯ ಹೇಳುಗನಾಗುತ್ತಾನೆ ಎಂದು ಹೇಳಿದರು.

ಸಮಾರಂಭದಲ್ಲಿ ಸಾಹಿತಿಗಳಾದ ಡಾ.ಶರಣಬಸಪ್ಪ ವಡ್ಡನಕೇರಿ, ಪ್ರೇಮಾ ಅಪಚಂದ ಸೇರಿದಂತೆ ಕಮ್ಮಟದ ಶಿಬಿರಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.