ನರೇಗಲ್: ಆಧಾರ್ ಕೇಂದ್ರ ಸ್ಥಗಿತ – ಸಾರ್ವಜನಿಕರ ತೀವ್ರ ಪರದಾಟ!

ನರೇಗಲ್: ಆಧಾರ್ ಕೇಂದ್ರ ಸ್ಥಗಿತ – ಸಾರ್ವಜನಿಕರ ತೀವ್ರ ಪರದಾಟ!

ನರೇಗಲ್: ಆಧಾರ್ ಕೇಂದ್ರ ಸ್ಥಗಿತ – ಸಾರ್ವಜನಿಕರ ತೀವ್ರ ಪರದಾಟ!

ನರೇಗಲ್ಲ :- ಗದಗ ಜಿಲ್ಲೆಯ ಪ್ರಮುಖ ವಾಣಿಜ್ಯ ಹಾಗೂ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾದ ನರೇಗಲ್ ಪಟ್ಟಣದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರವು ಕಳೆದ ಕೆಲವು ದಿನಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ನರೇಗಲ್ ಪಟ್ಟಣ ಮಾತ್ರವಲ್ಲದೆ ಸುತ್ತಮುತ್ತಲಿನ ಸುಮಾರು 15 ರಿಂದ 20 ಗ್ರಾಮೀಣ ಪ್ರದೇಶಗಳಿಗೆ. ಯಾವುದೇ ಪೂರ್ವ ಮಾಹಿತಿ ನೀಡದೆ ಏಕಾಏಕಿ ಕೇಂದ್ರದ ಬಾಗಿಲು ಮುಚ್ಚಿರುವುದರಿಂದ, ಪ್ರತಿದಿನ ಬೆಳಗಿನ ಜಾವವೇ ದೂರದ ಊರುಗಳಿಂದ ಬಸ್ಸು ಹಾಗೂ ಸ್ವಂತ ವಾಹನ ಹಿಡಿದು ಬರುವ ನೂರಾರು ಜನ ಸಾರ್ವಜನಿಕರು ಬಾಗಿಲಿಗೆ ಹಾಕಿರುವ ಬೀಗ ನೋಡಿ ನಿರಾಶೆಯಿಂದ ಹಿಂತಿರುಗುತ್ತಿದ್ದಾರೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ:

ಆಧಾರ್ ಕಾರ್ಡ್ನಲ್ಲಿ ಹೆಸರಿನ ಕಾಗುಣಿತ (Spelling), ಜನ್ಮ ದಿನಾಂಕ ತಿದ್ದುಪಡಿ ಹಾಗೂ 05 ಮತ್ತು 15ವರ್ಷ ದಾಟಿದ ಮಕ್ಕಳಿಗೆ ಕಡ್ಡಾಯವಾಗಿ ಮಾಡಿಸಬೇಕಾದ ಬಯೋಮೆಟ್ರಿಕ್ ಅಪ್ಡೇಟ್ (ಹೆಬ್ಬೆಟ್ಟು ಮತ್ತು ಕಣ್ಣಿನ ಪಾಪೆಯ ಸ್ಕ್ಯಾನ್) ಆಗದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿವೇತನ ,ಅರ್ಜಿ ಸಲ್ಲಿಕೆಗೆ ಆಧಾರ್ ಇ-ಕೆವೈಸಿ (e-KYC) ಕಡ್ಡಾಯವಾಗಿರುವುದರಿಂದ ಶಾಲಾ ಮಕ್ಕಳ ಪೋಷಕರು ಅಲೆದಾಡುವಂತಾಗಿದೆ.

ಸರ್ಕಾರಿ 'ಗ್ಯಾರಂಟಿ' ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳು:

ರಾಜ್ಯ ಸರ್ಕಾರದ 'ಗೃಹಲಕ್ಷ್ಮಿ', 'ಅನ್ನಭಾಗ್ಯ' (ಉಚಿತ ರೇಷನ್) ಮತ್ತು 'ಯುವನಿಧಿ'ಯಂತಹ ಯೋಜನೆಗಳ ಹಣ ಖಾತೆಗೆ ಜಮೆಯಾಗಲು ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು. ಆಧಾರ್ನಲ್ಲಿ ತಿದ್ದುಪಡಿ ಆಗದ ಕಾರಣ ಹಲವರ ಯೋಜನೆಗಳ ಹಣ ತಡೆಹಿಡಿಯಲ್ಪಟ್ಟಿದೆ. ಅಲ್ಲದೆ ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ವಿಕಲಚೇತನರ ಪಿಂಚಣಿ ಪಡೆಯುವ ಹಿರಿಯ ಜೀವಗಳಿಗೆ ಬಯೋಮೆಟ್ರಿಕ್ ಅಪ್ಡೇಟ್ ಆಗದೆ ಮಾಸಿಕ ಪಿಂಚಣಿ ಕೈಸೇರುತ್ತಿಲ್ಲ.

ಈಗ ಕೇಂದ್ರ ಬಂದ್ ಆಗಿರುವುದರಿಂದ ಜನರು ರೋಣ ಅಥವಾ ಗಜೇಂದ್ರಗಡದ ತಾಲೂಕು ಕೇಂದ್ರಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಮಯ ಹಾಗೂ ಹಣ ಎರಡೂ ಪೋಲಾಗುತ್ತಿದೆ 

ತಾಲೂಕು ಕೇಂದ್ರಗಳಲ್ಲೂ ನೂರಾರು ಜನರ ಸರತಿ ಸಾಲು ಇರುವುದರಿಂದ ಇಡೀ ದಿನ ಕಾದು ಕೆಲಸ ಆಗದೆ ವಾಪಸ್ ಬರುವ ಪರಿಸ್ಥಿತಿ ಬಂದೊದಗಿದೆ.

ಈರಪ್ಪ ವಡ್ಡರ (ಕೂಲಿ ಕಾರ್ಮಿಕ) 

"ನಾವು ಸಾಲ-ಸೋಲ ಮಾಡಿ ದಿನಗೂಲಿ ನೆಚ್ಚಿಕೊಂಡು ಬದುಕುವವರು. ಆಧಾರ್ ಕಾರ್ಡ್ನ ಸಣ್ಣ ತಿದ್ದುಪಡಿಗೆ ೨೦-೩೦ ಕಿ.ಮೀ. ದೂರದ ಊರುಗಳಿಗೆ ಹೋಗಿ ಇಡೀ ದಿನ ಸಾಲಿನಲ್ಲಿ ನಿಲ್ಲುವುದು ನಮಗೆ ಸಾಧ್ಯವಿಲ್ಲ. ಸರ್ಕಾರ ಪ್ರತಿಯೊಂದಕ್ಕೂ ಆಧಾರ್ ಕೇಳುತ್ತದೆ, ಆದರೆ ಅದನ್ನು ಮಾಡಿಕೊಡುವ ಕೇಂದ್ರವನ್ನು ಮುಚ್ಚಿಟ್ಟರೆ ನಾವು ಎಲ್ಲಿಗೆ ಹೋಗಬೇಕು?"

 "ಸದ್ಯ ಸಿಬ್ಬಂದಿಗಳ ಕೊರತೆ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಮ್ಮ ಗಮನದಲ್ಲಿದೆ. ಅತಿ ಶೀಘ್ರದಲ್ಲಿಯೇ ಸಿಬ್ಬಂದಿ ವ್ಯವಸ್ಥೆ ಮಾಡಿ ನರೇಗಲ್ನಲ್ಲಿ ಆಧಾರ್ ಕೇಂದ್ರವನ್ನು ಪುನರಾರಂಭಿಸಲಾಗುವುದು" ನರೇಗಲ್ ಉಪ ತಹಶೀಲ್ದಾರ್ ಭರವಸೆ 

 ಆಧಾರ್ ಕೇಂದ್ರವನ್ನು ತಕ್ಷಣವೇ ಮರುಆರಂಭಿಸಬೇಕು. ತಾಂತ್ರಿಕ ತೊಂದರೆಗಳು ಅಥವಾ ಸಿಬ್ಬಂದಿ ಕೊರತೆ ಇದ್ದರೆ ಅದನ್ನು ಕೂಡಲೇ ಬಗೆಹರಿಸಿ, ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಸ್ಥಳೀಯ ನಿವಾಸಿ ಪ್ರವೀಣ ಹೂಗಾರ  ಆಗ್ರಹಿಸಿದ್ದಾರೆ.

ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ