ಶಿಕ್ಷಕರ ಮೇಲೆ ವಿನಾಕಾರಣ ಸಂಶಯ ಬೇಡ; ಗೌರವ ಮತ್ತು ವಿಶ್ವಾಸದಿಂದ ಶಿಕ್ಷಣ ವ್ಯವಸ್ಥೆ ಬಲಪಡಿಸೋಣ ಶಶೀಲ್ ಜಿ. ನಮೋಶಿ
ಶಿಕ್ಷಕರ ಮೇಲೆ ವಿನಾಕಾರಣ ಸಂಶಯ ಬೇಡ; ಗೌರವ ಮತ್ತು ವಿಶ್ವಾಸದಿಂದ ಶಿಕ್ಷಣ ವ್ಯವಸ್ಥೆ ಬಲಪಡಿಸೋಣ ಶಶೀಲ್ ಜಿ. ನಮೋಶಿ
ಕಲಬುರಗಿ: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು, ಮಕ್ಕಳ ಭವಿಷ್ಯ ಉಜ್ವಲವಾಗಬೇಕು ಎಂಬುದು ಎಲ್ಲರ ಆಶಯ. ಆದರೆ, ಈ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಶಿಕ್ಷಕರ ಮೇಲೆ ವಿನಾಕಾರಣ ಸಂಶಯ ವ್ಯಕ್ತಪಡಿಸುವುದು ಅಥವಾ ಅವರನ್ನು ಅನಗತ್ಯ ಒತ್ತಡಕ್ಕೆ ಒಳಪಡಿಸುವುದು ಸರಿಯಾದ ವಿಧಾನವಲ್ಲ ಎಂದು ನೂತನ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಅವರು ಸರ್ಕಾರ ಸರ್ಕಾರಿ ಶಾಲಾ ಶಿಕ್ಷಕರಿಗೆ ರ್ಯಾಂಡಮ್ ಚೆಕ್ ಹಾಜರಾತಿ ಕುರಿತು ಇಂದು ಪತ್ರಿಕೆಗಳಲ್ಲಿ ಪ್ರಕಠವಾಗಿರುವ ಸರಕಾರದ ನಿರ್ಧಾರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕರು ಸಮಾಜದ ಗೌರವಾನ್ವಿತ ಮಾರ್ಗದರ್ಶಕರು. ಒಬ್ಬ ಶಿಕ್ಷಕ ತರಗತಿಯಲ್ಲಿ ನೀಡುವ ಶಿಕ್ಷಣವು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿರುವುದಿಲ್ಲ; ಅದು ವಿದ್ಯಾರ್ಥಿಗಳ ವ್ಯಕ್ತಿತ್ವ, ಮೌಲ್ಯಗಳು ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಂತಹ ಶಿಕ್ಷಕರ ಕರ್ತವ್ಯನಿಷ್ಠೆಯನ್ನು ಗೌರವಿಸುವುದರ ಜೊತೆಗೆ, ಅವರ ವೃತ್ತಿಯ ಘನತೆ ಮತ್ತು ಸ್ವಾಭಿಮಾನವನ್ನು ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಿಕ್ಷಕರ ಕರ್ತವ್ಯ ನಿರ್ವಹಣೆಯನ್ನು ಪರಿಶೀಲಿಸುವುದು ಆಡಳಿತದ ಭಾಗವಾಗಿರಬಹುದು. ಆದರೆ, ಪರಿಶೀಲನೆಯ ಹೆಸರಿನಲ್ಲಿ ಎಲ್ಲ ಶಿಕ್ಷಕರನ್ನೂ ಸಂಶಯದ ದೃಷ್ಟಿಯಿಂದ ನೋಡುವ ವಾತಾವರಣ ನಿರ್ಮಾಣವಾಗಬಾರದು. ತಪ್ಪು ಕಂಡುಬಂದರೆ ನಿಯಮಾನುಸಾರ ಪರಿಶೀಲಿಸಲಿ; ಆದರೆ, ಯಾವುದೇ ವ್ಯಕ್ತಿಯ ಬಗ್ಗೆ ಪೂರ್ವಗ್ರಹವಿಲ್ಲದೆ, ವಾಸ್ತವಾಂಶಗಳನ್ನು ಅರಿತು ನಿರ್ಧಾರ ಕೈಗೊಳ್ಳಬೇಕು. ಕೆಲವರ ಸಂದರ್ಭಗಳನ್ನು ಆಧರಿಸಿ ಇಡೀ ಶಿಕ್ಷಕ ಸಮುದಾಯದ ಕರ್ತವ್ಯನಿಷ್ಠೆಯನ್ನು ಪ್ರಶ್ನಿಸುವುದು ನ್ಯಾಯಸಮ್ಮತವಲ್ಲ ಎಂದು ಅವರು ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರು ಕೆಲವೊಮ್ಮೆ ಸಾರಿಗೆ ಸಮಸ್ಯೆ, ರಸ್ತೆಗಳ ಅನಾನುಕೂಲತೆ, ಪ್ರತಿಕೂಲ ಹವಾಮಾನ ಮತ್ತು ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳಿಂದ ಉಂಟಾಗುವ ತೊಂದರೆಗಳನ್ನು ಮಾನವೀಯ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಬೇಕು. ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕು. ನಿಯಮಗಳ ಪಾಲನೆಯ ಜೊತೆಗೆ ಮಾನವೀಯತೆಯೂ ಆಡಳಿತದಲ್ಲಿ ಪ್ರತಿಬಿಂಬಿಸಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯು ಶಿಕ್ಷಕರ ಸಮಸ್ಯೆಗಳು, ನಿರೀಕ್ಷೆಗಳು ಮತ್ತು ಭಾವನೆಗಳನ್ನು ಆಲಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ. ಶಿಕ್ಷಕರ ಅಭಿಪ್ರಾಯಗಳಿಗೆ ಗೌರವ ನೀಡುವುದು, ಅವರ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸುವುದು ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಶಶೀಲ್ ಜಿ. ನಮೋಶಿ ಅವರು ಅಭಿಪ್ರಾಯಪಟ್ಟಿದ್ದಾರೆ.
“ಶಿಕ್ಷಕರನ್ನು ಸಂಶಯದಿಂದ ನೋಡುವುದಕ್ಕಿಂತ ವಿಶ್ವಾಸದಿಂದ ಪ್ರೋತ್ಸಾಹಿಸೋಣ; ಅನಗತ್ಯ ಒತ್ತಡ ಹೇರುವುದಕ್ಕಿಂತ ಅವರ ಸಮಸ್ಯೆಗಳನ್ನು ಆಲಿಸೋಣ. ಶಿಕ್ಷಕರ ಗೌರವ ಉಳಿದಾಗ ಶಿಕ್ಷಣ ಕ್ಷೇತ್ರದ ಗೌರವವೂ ಉಳಿಯುತ್ತದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಆತ್ಮವಿಶ್ವಾಸದಿಂದ ಕೆಲಸ ಮಾಡುವ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಮತ್ತು ಶಿಕ್ಷಕರ ಗೌರವವನ್ನು ಕಾಪಾಡುವ ಆಶಯ ಎರಡೂ ಒಂದಕ್ಕೊಂದು ಪೂರಕವಾಗಿವೆ. ಶಿಕ್ಷಕರ ಕರ್ತವ್ಯನಿಷ್ಠೆಯನ್ನು ಉತ್ತೇಜಿಸುವುದರ ಜೊತೆಗೆ ಅವರ ಮೇಲೆ ವಿನಾಕಾರಣ ಸಂಶಯ ಮೂಡದಂತೆ ನೋಡಿಕೊಳ್ಳಬೇಕು. ಶಿಕ್ಷಕರು, ಶಿಕ್ಷಣ ಇಲಾಖೆ ಮತ್ತು ಸರ್ಕಾರ ಪರಸ್ಪರ ವಿಶ್ವಾಸದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಗುರಿಯನ್ನು ಪರಿಣಾಮಕಾರಿಯಾಗಿ ಸಾಧಿಸಲು ಸಾಧ್ಯ ಎಂದು ನೂತನ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ತಿಳಿಸಿದ್ದಾರೆ.

