ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ನೂತನ ಪದಾಧಿಕಾರಿಗಳ ಆಯ್ಕೆ ಡಿಎಂಎಸ್ಎಸ್ನ ನೂರಾರು ಪದಾಧಿಕಾರಿಗಳು ಕದಸಂಸಕ್ಕೆ ಸೇರ್ಪಡೆ; ಹೆಣ್ಣೂರು ಶ್ರೀನಿವಾಸ ನೇತೃತ್ವದಲ್ಲಿ ಸಂಘಟನಾ ಸಭೆ
ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ನೂತನ ಪದಾಧಿಕಾರಿಗಳ ಆಯ್ಕೆ
ಡಿಎಂಎಸ್ಎಸ್ನ ನೂರಾರು ಪದಾಧಿಕಾರಿಗಳು ಕದಸಂಸಕ್ಕೆ ಸೇರ್ಪಡೆ; ಹೆಣ್ಣೂರು ಶ್ರೀನಿವಾಸ ನೇತೃತ್ವದಲ್ಲಿ ಸಂಘಟನಾ ಸಭೆ
ಕಲಬುರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಸೇಡಂ ತಾಲೂಕಿನಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸಂಘಟನೆಯ ಪುನರ್ಚೇತನ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ಮಾತನಾಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಕಳೆದ ಐದು ದಶಕಗಳಿಂದ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತ ಬಂದಿದೆ. ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಜ್ಯೋತಿಬಾ ಫುಲೆ, ಶಾಹು ಮಹಾರಾಜ ಹಾಗೂ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮುಂದಿಟ್ಟುಕೊAಡು ಸಂಘಟನೆಯು ಇಲ್ಲಿಯವರೆಗೆ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಚಳವಳಿ ನಡೆಸಿದೆ ಎಂದು ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮಾದಿಗ ಸಮುದಾಯಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ ಎಂಬ ಕಾರಣ ಮುಂದಿಟ್ಟುಕೊAಡು, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಸೋಲಿಸುವಂತೆ ಮಂದಾಕೃಷ್ಣ ಮಾದಿಗ ಅವರು ಮಾದಿಗ ಸಮುದಾಯಕ್ಕೆ ಸಂದೇಶ ನೀಡಿದ್ದರು ಎಂದು ಆರೋಪಿಸಿದರು.
ಇದೇ ರೀತಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರು ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದರೂ, ಅವರನ್ನು ಸೋಲಿಸುವಂತೆ ಮಂದಾಕೃಷ್ಣ ಮಾದಿಗ ಕರೆ ನೀಡಿದ್ದರು ಎಂದು ಹೇಳಿದರು. ಮಂದಾಕೃಷ್ಣ ಮಾದಿಗ ಅವರ ನಿಲುವು ಪ್ರಶ್ನಾರ್ಹವಾಗಿದ್ದು, ಅವರು ಆರ್ಎಸ್ಎಸ್ ಮತ್ತು ಬಿಜೆಪಿಯ ಪರವಾಗಿ ಕಾರ್ಯನಿರ್ವಹಿಸುತ್ತಾ ತಮ್ಮ ಸ್ವಾರ್ಥಕ್ಕಾಗಿ ಮಾದಿಗ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ನಿಲುವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಡಿಎಂಎಸ್ಎಸ್ನ ನೂರಾರು ಪದಾಧಿಕಾರಿಗಳು ಸೇರ್ಪಡೆ
ಇದೇ ಸಂದರ್ಭದಲ್ಲಿ ಸೇಡಂ ತಾಲೂಕು ದಲಿತ ಮಾದಿಗ ಸಮನ್ವಯ ಸಮಿತಿ (ಡಿಎಂಎಸ್ಎಸ್)ಯ ನೂರಾರು ಪದಾಧಿಕಾರಿಗಳು ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ಅವರ ಸಂಘಟನಾ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ)ಗೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಶಂಕರ ಕೋತಂಪಳ್ಳಿ, ರಾಜ್ಯ ಸಂಘಟನಾ ಸಂಚಾಲಕ ಸುರೇಶ ಮೆಂಗನ್, ಕಲಬುರಗಿ ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ, ಜಿಲ್ಲಾ ಸಹ ಸಂಚಾಲಕ ಶಿವಕುಮಾರ ಅಜಾದಪೂರ, ರಾಣು ಮುದ್ದನಕರ್, ವಿಠಲ ಶೆಳ್ಳಗಿ, ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ಸವಿತಾ ತೀರ್ಥ, ಜ್ಯೋತಿ ಕಾಂಬಳೆ, ಚಿತ್ತಾಪುರ ತಾಲೂಕು ಸಂಚಾಲಕ ಜಗದೀಶ ಸಾಗರ, ದಲಿತ ಸಂಘರ್ಷ ಸಮಿತಿಯ ಹಿರಿಯ ನಾಯಕ ಜಾನ್ ಹೊಸಳ್ಳಿಕರ್ ಹಾಗೂ ಕಲಬುರಗಿ ನಗರ ಸಂಘಟನಾ ಸಂಚಾಲಕ ಗೌತಮ ಉಪಾಧ್ಯಾಯ ಸೇರಿದಂತೆ ಹಲವರು ಭಾಗವಹಿಸಿದ್ದರು. ಸೇಡಂ ತಾಲೂಕಿನ ವಿವಿಧ ಭಾಗಗಳಿಂದ ಮಹಿಳೆಯರು ಮತ್ತು ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಸೇಡಂ ತಾಲೂಕು ಸಂಚಾಲಕ ಭೀಮು ಮುಧೋಳ, ತಾಲೂಕು ಸಹ ಸಂಚಾಲಕರಾಗಿ ಲೋಕೇಶ ಅಂದರಕಿ, ಭೋಜಪ್ಪ, ವಿರೇಶ ಪಾಕಲ್, ಲಾಲೇಶ ಕೆ.ಆರ್. ಪಲ್ಲಿ, ಅಶೋಕ ಆಡಕಿ ಕೊಡದೂರ, ನಾಗೇಶ ಹೊಡಬೀರನಹಳ್ಳಿ ಹಾಗೂ ಸೂರ್ಯಕಾಂತ ಸಿಂಗೆ ಇವರನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಲಬುರಗಿ ಜಿಲ್ಲಾ ಘಟಕದ ಸಂಘಟನಾ ಸಂಚಾಲಕರಾಗಿ ರೋಬಿನ್ ಜಾನ್ ಹೊಸಳ್ಳಿಕರ್ ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ದಲಿತ ಮಹಿಳಾ ಒಕ್ಕೂಟ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಸೇಡಂ ತಾಲೂಕು ಘಟಕಕ್ಕೆ ನೂತನ ತಾಲೂಕು ಸಂಚಾಲಕಿಯಾಗಿ ಶೋಭಾ ಹೊನಗುಂಟಿಕರ್,
ತಾಲೂಕು ಸಹ ಸಂಚಾಲಕಿಯಾಗಿ ಶೈಲಜಾ ಹಂದರಕಿ ಇವರನ್ನು ನೇಮಕ ಮಾಡಲಾಯಿತು.
ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ, ಜಿಲ್ಲಾ ಸಹ ಸಂಚಾಲಕರಾದ ಶಿವಕುಮಾರ ಅಜಾದಪೂರ, ಜಿಲ್ಲಾ ಸಹ ಸಂಚಾಲಕ ರಾಣು ಮುದ್ದನಕರ್, ಕಲಬುರಗಿ ನಗರ ಸಹ ಸಂಚಾಲಕ ಗೌತಮ ಉಪಾಧ್ಯಾಯ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

