ಕೋಟನೂರ (ಡಿ) ಗ್ರಾಮದಲ್ಲಿ ಧಮ್ಮ ಜನಜಾಗೃತಿ ಕಾರ್ಯಕ್ರಮ

ಕೋಟನೂರ (ಡಿ) ಗ್ರಾಮದಲ್ಲಿ ಧಮ್ಮ ಜನಜಾಗೃತಿ ಕಾರ್ಯಕ್ರಮ

ಕೋಟನೂರ (ಡಿ) ಗ್ರಾಮದಲ್ಲಿ ಧಮ್ಮ ಜನಜಾಗೃತಿ ಕಾರ್ಯಕ್ರಮ

ಕಲಬುರಗಿ: ಬೌದ್ಧ ಧಮ್ಮದ ಅಷ್ಟಾಂಗ ಮಾರ್ಗ ಮತ್ತು ಪಂಚಶೀಲ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬ ಮಾನವನನ್ನು ಸಮಾನವಾಗಿ ಕಾಣುವ ಮೂಲಕ ಸಮಾಜದಲ್ಲಿ ಸಮಾನತೆ, ನೈತಿಕತೆ ಮತ್ತು ಕರುಣೆಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಪೂಜ್ಯ ಭಂತೆ ಬೋಧಿದಮ್ಮ ಹೇಳಿದರು.

ನಗರದ ಸಮೀಪದ ಕೋಟನೂರ (ಡಿ) ಗ್ರಾಮದಲ್ಲಿ ಭಾನುವಾರ ನಡೆದ ಬೌದ್ಧ ಧಮ್ಮ ಜನಜಾಗೃತಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಧಮ್ಮ ಪ್ರವಚನ ನೀಡಿದರು. ಅಮೆರಿಕ ದೇಶದ ಅನೇಕ ಪೂಜ್ಯ ಭಂತೆಜೀಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಐತಿಹಾಸಿಕ ಸನ್ನತಿಯ ಕನಗನಹಳ್ಳಿಯಲ್ಲಿ ನವೆಂಬರ್ 1ರಂದು ನಡೆಯಲಿರುವ ಬೃಹತ್ ದೀಕ್ಷಾ ಸಮಾರಂಭದಲ್ಲಿ ಸುಮಾರು 5 ಲಕ್ಷ ಬೌದ್ಧ ಉಪಾಸಕರು ಭಾಗವಹಿಸುವ ನಿರೀಕ್ಷೆಯಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲರೂ ಕುಟುಂಬ ಸಮೇತರಾಗಿ ಪಾಲ್ಗೊಳ್ಳುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರಬುದ್ಧ ಭಾರತದ ಕನಸನ್ನು ಸಾಕಾರಗೊಳಿಸಲು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಬುದ್ಧನ ಅಷ್ಟಾಂಗ ಮಾರ್ಗ ಹಾಗೂ ಪಂಚಶೀಲ ತತ್ವಗಳು ಮನುಷ್ಯನ ಬದುಕಿಗೆ ಸರಿಯಾದ ದಾರಿಯನ್ನು ತೋರಿಸುತ್ತವೆ. ಸುಳ್ಳು ಹೇಳುವುದು, ಕಳವು ಮಾಡುವುದು ಮತ್ತು ದುರಾಚಾರಗಳಿಂದ ದೂರವಿದ್ದು, ನೈತಿಕ ಮೌಲ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬೌದ್ಧ ಧಮ್ಮವು ತರ್ಕಬದ್ಧ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಮಹತ್ವ ನೀಡುತ್ತದೆ. ಕುರುಡು ನಂಬಿಕೆಗಳಿಗಿಂತ ವಿವೇಚನೆ ಹಾಗೂ ಪ್ರಜ್ಞೆಗೆ ಆದ್ಯತೆ ನೀಡುತ್ತದೆ ಎಂದು ತಿಳಿಸಿದರು.

ಸಮಾನತೆ ಮತ್ತು ಸ್ವಾವಲಂಬನೆಗೆ ಆದ್ಯತೆ

ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮವನ್ನು ಆಳವಾಗಿ ಅಧ್ಯಯನ ಮಾಡಿ, 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮ ಸ್ವೀಕರಿಸಿದರು. ಅವರ ಚಿಂತನೆಗಳಲ್ಲಿ ಸಮಾನತೆ, ಸ್ವಾವಲಂಬನೆ, ವೈಜ್ಞಾನಿಕ ದೃಷ್ಟಿಕೋನ ಮತ್ತು ಮಾನವ ಕಲ್ಯಾಣಕ್ಕೆ ವಿಶೇಷ ಸ್ಥಾನವಿದೆ ಎಂದು ಹೇಳಿದರು.

ಬುದ್ಧನ 'ಅಪ್ಪ ದೀಪೋ ಭವ' ಎಂಬ ಸಂದೇಶದಂತೆ ಪ್ರತಿಯೊಬ್ಬರೂ ತಮ್ಮ ಬದುಕಿಗೆ ತಾವೇ ಬೆಳಕಾಗಬೇಕು. ತಮ್ಮ ಉದ್ಧಾರಕ್ಕಾಗಿ ತಾವೇ ಶ್ರಮಿಸಬೇಕು. ಯಾವುದೇ ವ್ಯಕ್ತಿಯನ್ನು ಹುಟ್ಟಿನ ಆಧಾರದ ಮೇಲೆ ಅಳೆಯದೆ, ಎಲ್ಲರಿಗೂ ಸಮಾನ ಗೌರವ ನೀಡಬೇಕು. ಜಾತಿ ಪದ್ಧತಿ ಮತ್ತು ತಾರತಮ್ಯವನ್ನು ತಿರಸ್ಕರಿಸಿ, ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಬೌದ್ಧ ಧಮ್ಮವು ಕೇವಲ ಪರಲೋಕದ ಸುಖಕ್ಕಾಗಿ ಇರುವುದಲ್ಲ; ಭೂಮಿಯ ಮೇಲಿನ ಮನುಷ್ಯನ ಕಲ್ಯಾಣಕ್ಕಾಗಿ ಇರುವ ಮಾರ್ಗವಾಗಿದೆ. ನೈತಿಕತೆಯೇ ಧಮ್ಮದ ಮೂಲವಾಗಿದ್ದು, ಪ್ರಜ್ಞೆ ಮತ್ತು ಕರುಣೆ ಪ್ರತಿಯೊಬ್ಬರ ಬದುಕಿನಲ್ಲಿ ಸಮಾನವಾಗಿ ಬೆಳೆದು ಬರಬೇಕು. ದೇವರ ಆರಾಧನೆ ಮತ್ತು ಆಚರಣೆಗಳಿಗೆ ಸೀಮಿತವಾಗದೆ, ಮನುಷ್ಯನ ನಡತೆ, ನೈತಿಕತೆ ಹಾಗೂ ಸಮಾಜದಲ್ಲಿ ಉತ್ತಮ ಸಂಬಂಧಗಳನ್ನು ನಿರ್ಮಿಸುವುದೇ ಧಮ್ಮದ ನಿಜವಾದ ಆಶಯವಾಗಿದೆ ಎಂದು ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಬೌದ್ಧ ಉಪಾಸಕರಾದ ರಮೇಶ ಪಟ್ಟೆದಾರ, ಸಂತೋಷ ಮೆಲ್ಮನಿ, ಲಕ್ಷ್ಮಣ ಸೋನಕಾಂಬ್ಳೆ, ಮಹೇಶ ಬೇಡಜೂರಗಿ, ಬಾಬುರಾವ ಹೊಸಮನಿ, ಧರ್ಮಣ್ಣ ಹುಲಿಮನಿ, ಪ್ರದೀಪ ಚಿಂಚನಸೂರ್, ಭೀಮಾಶಂಕರ್ ಶಿಂದೆ ಸೇರಿದಂತೆ ಅನೇಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದಿನೇಶ ದೊಡ್ಡಮನಿ ಸ್ವಾಗತಿಸಿದರು.