ಹಟಗಾರ ಸಮಾಜದಿಂದ ಪ್ರತಿಭಾ ಪುರಸ್ಕಾರ, ರಾಷ್ಟ್ರೀಯ ಕೈಮಗ್ಗ ದಿನಾಚರಣೆ
ಹಟಗಾರ ಸಮಾಜದಿಂದ ಪ್ರತಿಭಾ ಪುರಸ್ಕಾರ, ರಾಷ್ಟ್ರೀಯ ಕೈಮಗ್ಗ ದಿನಾಚರಣೆ
ಕಲಬುರಗಿ: ಜಿಲ್ಲಾ ಹಟಗಾರ ಸಮಾಜದ ವತಿಯಿಂದ ಉದ್ಯೋನ್ಮುಖ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ 12ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮವನ್ನು ಆ.16ರಂದು ಭಾನುವಾರ ನಗರದ ಸಾರ್ವಜನಿಕ ಉದ್ಯಾನವನದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಸತೀಶಕುಮಾರ ಜಮಖಂಡಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಅಂಗವಾಗಿ ಆ.13ರಂದು ಸಂಜೆ 6.30ಕ್ಕೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ನಿಕಟಪೂರ್ವ ಶಾಸಕ ದತ್ತಾತ್ರೇಯಗೌಡ (ಅಪ್ಪು) ಪಾಟೀಲ ಅವರ ಗೃಹ ಕಚೇರಿಗೆ ಜಿಲ್ಲಾ ಹಟಗಾರ ಸಮಾಜದ ಪದಾಧಿಕಾರಿಗಳು ಭೇಟಿ ನೀಡಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.
ಆಮಂತ್ರಣ ಸ್ವೀಕರಿಸಿದ ಮಾಜಿ ಶಾಸಕ ದತ್ತಾತ್ರೇಯಗೌಡ ಪಾಟೀಲ ಮಾತನಾಡಿ, ನೇಕಾರ ಸಮುದಾಯ ನಮ್ಮ ಕುಟುಂಬವಿದ್ದಂತೆ. ಸಮಾಜವು ನಮ್ಮನ್ನು ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದೆ ಎಂಬ ಹೆಮ್ಮೆ ಇದೆ. ಹೀಗಾಗಿ ಕಾರ್ಯಕ್ರಮದಲ್ಲಿ ತಪ್ಪದೇ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಟಗಾರ ಸಂಘದ ಅಧ್ಯಕ್ಷ ಶ್ರವಣಕುಮಾರ ಮುನೋಳಿ, ಕಾರ್ಯದರ್ಶಿ ಮುನೋಳಿ ಚಂದ್ರಕಾಂತ, ಸಂಘಟನೆಯ ಯುವ ಮುಖಂಡ ಭೀಮಳ್ಳಿಯ ಪ್ರಕಾಶ ಪೊಲೀಸ್ ಪಾಟೀಲ, ಸಮಾಜದ ಹಿರಿಯರು ಹಾಗೂ ನಿವೃತ್ತ ಶಿಕ್ಷಕರಾದ ರಾವ್ ಬಹಾದ್ದೂರ್ ರೂಗಿ, ರಾಚಪ್ಪ ಚಂದಾ, ಶಿವಲಿಂಗಪ್ಪ ಆಲಮದ, ಸಂವಿಧಾನದ ಅನುಚ್ಛೇದ 171(3) ತಿದ್ದುಪಡಿ ಕುರಿತ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಹಾಗೂ ನ್ಯಾಯವಾದಿ ಜೇ.ಎಸ್. ವಿನೋದಕುಮಾರ, ಸಪ್ತ ನೇಕಾರರ ಸಂಕೇತವಾಗಿ ಏಳು ಜನ ಪದಾಧಿಕಾರಿಗಳು ಹಾಗೂ ಕುರಹಿನಶೆಟ್ಟಿ ಸಮಾಜದ ಜಿಲ್ಲಾ ಖಜಾಂಚಿ ಮಲ್ಲಿನಾಥ ಕುಂಟೋಜಿ ಉಪಸ್ಥಿತರಿದ್ದರು.

