ಭಾಷೆಗೆ ಧರ್ಮದ ಲೇಪನವಿಲ್ಲ: ಪ್ರೊ. ಮೀನಾಕ್ಷಿ ಬಾಳಿ ಅಭಿಮತ.

ಭಾಷೆಗೆ ಧರ್ಮದ ಲೇಪನವಿಲ್ಲ: ಪ್ರೊ. ಮೀನಾಕ್ಷಿ ಬಾಳಿ ಅಭಿಮತ.

ಭಾಷೆಗೆ ಧರ್ಮದ ಲೇಪನವಿಲ್ಲ: ಪ್ರೊ. ಮೀನಾಕ್ಷಿ ಬಾಳಿ ಅಭಿಮತ.

ಭಾರತ ಬಹುತ್ವ ಭಾಷೆಗಳ ತವರುಮನೆಯಾಗಿದೆ. ಇಲ್ಲಿ ಕನ್ನಡ, ಉರ್ದು, ಸಂಸ್ಕೃತ, ತೆಲುಗು, ಮರಾಠಿ, ಗುಜರಾತಿ, ಒರಿಯಾ ಹೀಗೆ ಅನೇಕ ಭಾಷೆಗಳು ಜೀವಂತವಾಗಿವೆ. ಆ ಎಲ್ಲ ಭಾಷೆಗಳು ಭಾರತೀಯ ಭಾಷೆಗಳು‌. ಹಾಗಾಗಿ ಯಾವುದೇ ಭಾಷೆಗೆ ಧರ್ಮದ ಲೇಪನವಿಲ್ಲ. ಜೊತೆಗೆ ಭಾಷೆಯ ಕಾರಣಕ್ಕೆ ಯಾವುದೇ ನಾಗರಿಕನ ದೇಶಪ್ರೇಮವನ್ನು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ವರ್ತಮಾನದ ರಾಜಕಾರಣ ಆ ಕೆಲಸವನ್ನು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಕಲಬುರಗಿಯ ಹಮೀದ ಪಿಯಾರೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 'ಸೂಫಿತ್ವದ ಸ್ಪರ್ಶದಲ್ಲಿ ಕನ್ನಡ ತತ್ವಪದಕಾರರು' ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತ್ತಾ, ಈವರೆಗೂ ಲಿಂಗ, ಜಾತಿ, ಧರ್ಮ, ಪಂಥಗಳ ಆಧಾರದ ಮೇಲೆ ಒಡೆದಿದ್ದ ನಮ್ಮ ಸಮಾಜ, ಈಗ ಭಾಷೆಗಳ ಆಧಾರದ ಮೇಲೆ ಒಡೆಯುತ್ತಿದೆ. ಈ ವಿಘಟನ ಪ್ರಯತ್ನಗಳನ್ನು ನಮ್ಮ ರಾಜಕಾರಣವೇ ಮಾಡುತ್ತಿರುವುದರಿಂದ ಕರ್ನಾಟಕ ವಿದ್ಯಾವರ್ಧಕ ಸಂಘವು ಇಂದು ಆಯೋಜಿಸಿರುವ ಈ ಉಪನ್ಯಾಸವು ಅತ್ಯಂತ ಮಹತ್ವದ ಕೆಲಸವೆನಿಸಿದೆ ಎಂದರು. 

ಸೂಫಿಗಳು ಈ ಭಾಷಿಕ ರಾಜಕಾರಣವನ್ನು ಸಾರಾಸಗಟಾಗಿ ತಿರಸ್ಕರಿಸಿದವರು. ವಿದ್ಯಾರ್ಥಿಗಳು ರಾಜಕಾರಣದ ಒತ್ತಡಕ್ಕಲ್ಲದಿದ್ದರೂ, ಜ್ಞಾನದ ಸಲುವಾಗಿಯಾದರೂ ಬಹುಭಾಷೆಯನ್ನು ಕಲಿಯುವಂತಾಗಬೇಕು‌. ಅದು ನಮ್ಮ ಬದುಕನ್ನು ಇನ್ನಷ್ಟು ಸಹ್ಯಗೊಳಿಸುತ್ತದೆ ಎಂದರು. ಕನ್ನಡ ತತ್ವಪದಕಾರರನ್ನು ಅರ್ಥೈಸಿಕೊಳ್ಳುವ ಸಂದರ್ಭದಲ್ಲಿ ನಾವು ಸೂಫಿತ್ವದ ಸ್ಪರ್ಶ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದೇವೆ. ಮೊದಲಿಗೆ ನಾವು ಈ ಪದದ ವಿಶಾಲಾರ್ಥವನ್ನು ಅರ್ಥ ಮಾಡಿಕೊಳ್ಳಬೇಕು. ಈ ಪದ ಆವರಿಸಿಕೊಂಡಿರುವ ಅರ್ಥವೇನು ಎಂಬುದನ್ನು ನಾವು ಗಮನಿಸಬೇಕಿದೆ. ಏಕೆಂದರೆ ಇದೊಂದು ಮಾಹಿತಿ ಪ್ರದಾನವಾದ ವಿಷಯ. ಶರಣರು, ತತ್ವಪದಕಾರರು, ಸೂಫಿಗಳು ಇವರೆಲ್ಲರೂ ದೇವರು ಎಂಬ ಕಲ್ಪಿತ ವಾಸ್ತವವನ್ನು ಸಾರಾಸಗಟಾಗಿ ತಿರಸ್ಕರಿಸಿದವರು.

ಶರಣರು ಹಾಗೂ ತತ್ವಪದಕಾರರು ಬಯಲು ಎಂಬ ತಾತ್ವಿಕತೆಯನ್ನು ಕುರಿತು ಮಾತನಾಡಿದರೆ ಸೂಫಿಗಳು ಫನಾ ಎಂಬ ಅದ್ಭುತ ಪದವನ್ನು ಅದಕ್ಕೆ ಸಂವಾದಿಯಾಗಿ ಅಸ್ತಿತ್ವಕ್ಕೆ ತಂದರು‌.ಇಸ್ಲಾಂ ಧರ್ಮಕ್ಕೂ ಮೊದಲೇ ಸೂಫಿಯಾನ ಎಂಬ ಆನುಭಾವಿಕ ಪಂಥ ನಿಗೂಢವಾಗಿತ್ತು. ಇದು ಕೂಡ ಇಸ್ಲಾಂ ಧಾರ್ಮಿಕ ತತ್ವ ಹುಟ್ಟಿಕೊಂಡ ಭೂಪ್ರದೇಶದಲ್ಲಿಯೇ ಮೊಳಕೆಯೊಡೆದ ಕಾರಣ ಇದನ್ನು ಆ ಧರ್ಮದೊಂದಿಗೆ ಜೋಡಿಸಿ ನೋಡಲಾಗುತ್ತಿದೆಯೇ ವಿನಾಃ. ವಾಸ್ತವವಾಗಿ ಇಸ್ಲಾಂ ಧರ್ಮಕ್ಕೂ ಸೂಫಿಯಾನ ತತ್ವಕ್ಕೂ ಯಾವುದೇ ನೇರ ಸಂಬಂಧವಿಲ್ಲ.

ಕಾಲದ ಪರಿವೇ ಇಲ್ಲದೆ ಕಲಿಸುವ - ಬೋಧಿಸುವ ಶಕ್ತಿ ಸೂಫಿ ತತ್ವಪದಕಾರರಿಗಿದೆ. ಸೂಫಿಗಳು ಮತ್ತು ಅವಧೂತರು ಧರ್ಮ ಎಂಬ ಪದಕ್ಕೆ ಹೊಸ ಪರಿಭಾಷೆಯನ್ನು ಕೊಟ್ಟರು. ಕೂಡಿ ಬದುಕುವುದನ್ನೇ ಧರ್ಮ ಎಂದು ಅವರು ವ್ಯಾಖ್ಯಾನಿಸಿದರು.

ಎಲ್ಲ ಸೌಲತ್ತುಗಳು ಇದ್ದೂ ಕೂಡ ಅವುಗಳಿಂದ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದು ಆನುಭಾವಿಕ ಪಂಥದ ಸಾಧಕರಿಗೆ ಮಾತ್ರ ಸಾಧ್ಯ. ಕಾಲಾತೀತವಾಗಿ, ಲೋಕಾತೀತವಾಗಿ, ಧರ್ಮಾತೀತವಾಗಿ ಬದುಕಿದ್ದು ಸೂಫಿ-ತತ್ವಪದಕಾರರು. ಇದು ಅವರ ಹಿರಿಮೆಯಾಗಿತ್ತು ಎಂದು ಸಂಗನಗೌಡ ಹಿರೇಗೌಡ ಹೇಳಿದರು.

ಡಾ. ರಬಿಯಾ ಖಾನಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ವನಿತಾ ಜಾಧವ ಅಧ್ಯಕ್ಷತೆ ವಹಿಸಿದ್ದರು. ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು. ಡಾ. ಅರುಣ ಜೋಳದಕೂಡ್ಲಿಗಿ, ಪ್ರೊ. ಎಸ್. ಎನ್. ಪಾಟೀಲ, ಡಿ.ಎಂ‌. ನದಾಫ್, ಆಯಿಷಾ ಪಟೇಲ್, ನಾಗಮ್ಮ ಹಿರಾಣಿ, ಶ್ರೀಕಾಂತ ತಾವರಗೇರೆ ಮುಂತಾದವರು ಉಪಸ್ಥಿತರಿದ್ದರು.