ಅಮೆರಿಕ ಪ್ರವಾಸಕ್ಕೆ ಕೇಂದ್ರ ನಿರ್ಬಂಧ: ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ

ಅಮೆರಿಕ ಪ್ರವಾಸಕ್ಕೆ ಕೇಂದ್ರ ನಿರ್ಬಂಧ: ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ
ಬೆಂಗಳೂರು: ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರ ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಪ್ಯಾರಿಸ್ ನಗರದಲ್ಲಿ ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಸಚಿವ ಖರ್ಗೆ ಅವರು, ಅಂದಿನಿಂದಲೇ ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ *ಬಯೋ ಇಂಟರ್ ನ್ಯಾಷನಲ್ ಕನ್ವೆನ್ಶನ್* ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಧರಿಸಿದ್ದರು. ಆದರೆ ಕೇಂದ್ರದಿಂದ ಅಮೆರಿಕ ಪ್ರವಾಸಕ್ಕೆ ಅಗತ್ಯವಿರುವ ಕ್ಲಿಯರೆನ್ಸ್ ಸಿಗದ ಕಾರಣ ಅವರ ಪ್ರವಾಸ ಅಡಚಣೆಗೆ ಒಳಪಟ್ಟಿದೆ.
ತಾವು ಪಾಲ್ಗೊಳ್ಳಬೇಕಾಗಿದ್ದ ಹಲವು ಮಹತ್ವದ ಅಂತರರಾಷ್ಟ್ರೀಯ ಚರ್ಚೆ ಹಾಗೂ ಸಂವಾದ ಕಾರ್ಯಕ್ರಮಗಳು ಕೈ ತಪ್ಪಿದ ಹಿನ್ನೆಲೆಯಲ್ಲಿ, ಪ್ರಿಯಾಂಕ್ ಖರ್ಗೆ ಅವರು ಖಿನ್ನತೆ ವ್ಯಕ್ತಪಡಿಸಿದ್ದು, ತಮ್ಮ ಅಮೆರಿಕ ಪ್ರವಾಸ ನಿರಾಕರಣೆಯ ಕುರಿತು ಸ್ಪಷ್ಟ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ಸಚಿವರ ಜೊತೆ ಪ್ರಯಾಣಿಸಿರುವ ಐಎಎಸ್ ಅಧಿಕಾರಿಗಳಿಗೆ ಮಾತ್ರ ಅಮೆರಿಕ ಪ್ರವಾಸಕ್ಕೆ ಅನುಮತಿ ದೊರೆತಿರುವುದು ಚರ್ಚೆಗೆ ಗ್ರಾಸವಾಗಿದೆ.