ಅಯ್ಯನ ಕಥೆಗಳು" ಕೃತಿ ಅಭಿಯಾನ-4 ಉದ್ಘಾಟಿಸಿ ಪಿಎಸ್ ಐ ಯಶೋಧಾ ಕಟಕೆ ಅಭಿಮತ

ಅಯ್ಯನ ಕಥೆಗಳು" ಕೃತಿ ಅಭಿಯಾನ-4 ಉದ್ಘಾಟಿಸಿ ಪಿಎಸ್ ಐ ಯಶೋಧಾ ಕಟಕೆ ಅಭಿಮತ

ಸ್ವಾತಂತ್ರ್ಯ ಹೋರಾಟಗಾರರ ಬದುಕು ಮಕ್ಕಳಿಗೆ ಪ್ರೇರಣೆ

 "ಅಯ್ಯನ ಕಥೆಗಳು" ಕೃತಿ ಅಭಿಯಾನ-4 ಉದ್ಘಾಟಿಸಿ ಪಿಎಸ್ ಐ ಯಶೋಧಾ ಕಟಕೆ ಅಭಿಮತ

 ಕಲಬುರಗಿ : ಸ್ವಾತಂತ್ರ್ಯ ಹೋರಾಟಗಾರರ ಬದುಕು ಮತ್ತು ಸಾಧನೆ ಮಕ್ಕಳಿಗೆ ಪ್ರೇರಣೆಯಾಗುವುದಲ್ಲದೆ ಅಂತಹ ಮಹಾನ್ ವ್ಯಕ್ತಿಗಳು ರಚಿಸಿದ ಕೃತಿ ದೇಶಪ್ರೇಮ, ಪ್ರೀತಿ, ಸೌಹಾರ್ದ, ಮಾನವೀಯ ಮೌಲ್ಯಗಳನ್ನು ಬೋಧಿಸುತ್ತವೆ ಎಂದು ನಗರದ ರಾಘವೇಂದ್ರ ಪೊಲೀಸ್ ಠಾಣೆಯ ಪಿಎಸ್ಐ ಯಶೋಧಾ ಕಟಕೆ ಹೇಳಿದರು.

    ಕಲಬುರಗಿಯ ಸೈಯದ್ ಚಿಂಚೋಳಿಯ ಚಂದ್ರಶೇಖರ್ ಪಾಟೀಲ್ ರೇವೂರ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ವತಿಯಿಂದ ಶನಿವಾರ ( ಅ.24ರಂದು) ಸ್ವಾತಂತ್ರ್ಯ ಹೋರಾಟಗಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿ.ಮಹಾದೇವಪ್ಪ ಕಡೇಚೂರ್ ಅವರು ಮಕ್ಕಳಿಗಾಗಿ ಬರೆದ "ಅಯ್ಯನ ಕಥೆಗಳು" ಕೃತಿಯನ್ನು ಶಾಲೆಗೆ ಹಸ್ತಾಂತರಿಸುವ ಅಭಿಯಾನದ ನಾಲ್ಕನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಮಕ್ಕಳು ಇಂದಿನ ಪ್ರಜೆಗಳು. ಮಕ್ಕಳು ನಾಡಿನ ಸಂಪತ್ತು. ರಾಷ್ಟ್ರ ಭಕ್ತ ಮಕ್ಕಳ ನಿರ್ಮಾಣಕ್ಕೆ ಉತ್ತಮ ಪುಸ್ತಕಗಳ ಓದು ಅಗತ್ಯವಾಗಿದ್ದು ಸ್ವಾತಂತ್ರ್ಯ ಯೋಧರು, ಸೈನಿಕರು, ಹೆತ್ತ ತಂದೆ ತಾಯಿ ಮತ್ತು ರೈತರು ನಮ್ಮ ಮಕ್ಕಳಿಗೆ ಹೀರೋಗಳಾಗಬೇಕು. ತ್ರಿವರ್ಣ ಧ್ವಜ ಹಾರಾಡಲು ಸೈನಿಕರ ತ್ಯಾಗಮಯ ಬದುಕು ಇದೆ. ನಮ್ಮ ಮಕ್ಕಳು ಸ್ವಚ್ಛಂದವಾಗಿ ಜೀವನ ಮಾಡಲು ಹೆತ್ತವರ ಕೊಡುಗೆ ಇದ್ದು ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ, ಅವರಿಂದ ರಚಿತ ಕೃತಿಗಳು ಮಕ್ಕಳ ಸಾಧನಗೆ ಪ್ರೇರಣೆ ನೀಡುತ್ತವೆ ಎಂದರು.

ಪುಸ್ತಕ ಜ್ಞಾನ ವಿಸ್ತರಣೆಗೆ ಮೂಲ : ಸಂಧ್ಯಾ ಹೊನಗುಂಟಿಕರ್

  ಪುಸ್ತಕಗಳ ಓದು ಮನಸ್ಸಿಗೆ ಮುದ ನೀಡುತ್ತದೆ ಜ್ಞಾನ ಮತ್ತು ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಎಂದು ಖ್ಯಾತ ಕಥೆಗಾರ್ತಿ, ಸಾಹಿತಿ ಸಂಧ್ಯಾ ಹೊನಗುಂಟಿಕರ್ ಅಭಿಪ್ರಾಯಪಟ್ಟರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು ಮನೆಗಳಲ್ಲಿ ಅಜ್ಜ, ಅಜ್ಜಿಯರ ಕಥೆ ಕೇಳಿ, ಪುಸ್ತಕ ಓದಿನಿಂದ ಕಲ್ಪನಾ ಶಕ್ತಿ ವಿಸ್ತರಣೆಯಾಗಿ ಸಾಧನೆ ಮಾಡಲು ಎಲ್ಲರಿಗೂ ಉತ್ತೇಜನ ದೊರಕುತ್ತದೆ. ಪುಸ್ತಕ ಪ್ರೀತಿ, ಗೌರವ ಹೊಂದಿದಾಗ ಪುಸ್ತಕವು ಮಸ್ತಕವನ್ನು ತುಂಬಿಕೊಳ್ಳುತ್ತದೆ.ಸಾಧನೆ ಮಾಡಲು ವ್ಯಕ್ತಿತ್ವಕ್ಕೆ ಪ್ರೇರಣೆ ಸಿಗುತ್ತದೆ, ಅಯ್ಯನ ಕಥೆಗಳು ಕೃತಿ ಇಂತಹ ಸಣ್ಣ ಸಣ್ಣ ಕಥೆಗಳ ಗುಚ್ಛವಾಗಿದ್ದು ಮಕ್ಕಳ ಆಸಕ್ತಿಗೆ ತಕ್ಕಂತೆ ಹಾಸ್ಯ, ಪರಿಸರ, ಪ್ರಾಣಿ, ದೆವ್ವ, ಹಾಗೂ ನೀತಿ ಬೋಧಕ ಕಥೆಗಳನ್ನು ಹೊಂದಿವೆ, ಮಕ್ಕಳು ಓದಿ ಜ್ಞಾನ ಸಂಪನ್ನರಾಗಬೇಕು ಎಂದು ಕಥೆಗಳ ಮೂಲಕ ಮಕ್ಕಳಿಗೆ ತಿಳಿಹೇಳಿದರು.

    ಶಾಲೆಯ ಅಧ್ಯಕ್ಷರಾದ ಶ್ರೀಮತಿ ಸುನಿತಾ ಅನಿಲ್ ಕುಮಾರ್ ಡಾoಗೆ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಅನಿಲ್ ಕುಮಾರ್ ಡಾoಗೆ ಮಾತನಾಡಿ ಮಕ್ಕಳ ಕೈಗೆ ಸ್ವಾತಂತ್ರ್ಯ ಯೋಧರ ಕೃತಿಯ ಹಸ್ತಾಂತರ ಉತ್ತಮ ಕೆಲಸ ಎಂದು ಶ್ಲಾಘಿಸಿದರು. ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿ ನಗರದ ಶಾಲೆಗಿಂತಲೂ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಈ ಕೃತಿಗಳನ್ನು ಹಸ್ತಾಂತರಿಸಲು ಉದ್ದೇಶಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಈ ವರ್ಷ ಹೋಮಿಯೋಪತಿ ವೈದ್ಯ ಸೀಟು ಪಡೆದ ರುಚಿತಾ ಡಾಂಗೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು . ಮುಖ್ಯ ಗುರುಗಳಾದ ಸುನಿತಾ ಪೂಜಾರಿ ಟ್ರಸ್ಟಿ, ಮಹೇಶ್, ಕಡೇಚೂರ್, ಶಾಲಾ ಶಿಕ್ಷಕರಾದ ಜಗದೇವಿ ಉಮಾದೇವಿ ಪ್ರಿಯಾಂಕಾ , ಚೆನ್ನಮ್ಮ, ಶಿವಲೀಲಾ, ಐಶ್ವರ್ಯ, ಉಪಸ್ಥಿತರಿದ್ದರು ಆಡಳಿತಾಧಿಕಾರಿ ಸುಚೇತ್ ಡಾಂಗೆ ನಿರೂಪಿಸಿ ಧನ್ಯವಾದ ಸಲ್ಲಿಸಿದರು. ಇತರ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಲಾಯಿತು.

 ಮಕ್ಕಳಿಗೆ ಕಥೆ ಹೇಳುವ ಸ್ಪರ್ಧೆ

 ಮಕ್ಕಳಲ್ಲಿ ಕಥೆಗಳ ಹಾಗೂ ಓದಿನ ಮೇಲಿನ ಆಸಕ್ತಿ ಹೆಚ್ಚಿಸಲು ಶಾಲೆಯಲ್ಲಿ ಪ್ರತಿ ಶನಿವಾರ "ಅಯ್ಯನ ಕಥೆಗಳು" ಕೃತಿಯಲ್ಲಿನ ಕಥೆ ಸೇರಿದಂತೆ ಇತರ ಪುಸ್ತಕಗಳ ಕಥೆ ಹೇಳುವ ಸ್ಪರ್ಧೆಯನ್ನು ಹಮ್ಮಿಕೊಂಡು ಉತ್ತಮ ಪ್ರಸ್ತುತಿಗೆ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸತ್ಕರಿಸುವ ಸಂಪ್ರದಾಯ ಆರಂಭಿಸಲಾಗುವುದು.

 - ಸುಚೇತ್ ಡಾಂಗೆ, ಆಡಳಿತಾಧಿಕಾರಿ