ಅ. 31ರಂದು ‘ದಾಸ ನೃತ್ಯಾರ್ಚನೆ’ ಭರತನಾಟ್ಯ ರಂಗಪ್ರವೇಶ

ಅ. 31ರಂದು ‘ದಾಸ ನೃತ್ಯಾರ್ಚನೆ’ ಭರತನಾಟ್ಯ ರಂಗಪ್ರವೇಶ

ಅ. 31ರಂದು ‘ದಾಸ ನೃತ್ಯಾರ್ಚನೆ’ ಭರತನಾಟ್ಯ ರಂಗಪ್ರವೇಶ

ಹರಿದಾಸರ ಕೃತಿಗಳಿಗೆ ನೃತ್ಯನಮನ; ಬಾಲಪ್ರತಿಭೆ ಪೂರ್ವಿ ಎಂ.ಎಸ್. ಕಲಾಪ್ರದರ್ಶನ

ಬೆಂಗಳೂರು: ಬಾಲನೃತ್ಯಪ್ರತಿಭೆ ಪೂರ್ವಿ ಎಂ.ಎಸ್. ಅವರ ಭರತನಾಟ್ಯ ರಂಗಪ್ರವೇಶದ ಅಂಗವಾಗಿ ‘ದಾಸ ನೃತ್ಯಾರ್ಚನೆ’ ಕಾರ್ಯಕ್ರಮ ಅ. 31ರ ಶನಿವಾರ ಸಂಜೆ 4 .00ಗಂಟೆಗೆ ನಗರದ ದೊಡ್ಡಕಲ್ಲಸಂದ್ರದ ಕನಕಪುರ ಮುಖ್ಯ ರಸ್ತೆಯ ಮೀನಾಕ್ಷಿ ರಂಗಮಂಚದಲ್ಲಿ ನಡೆಯಲಿದೆ. ಹರಿದಾಸರ ಭಕ್ತಿಪೂರ್ಣ ಕೃತಿಗಳನ್ನು ಭರತನಾಟ್ಯದ ಮೂಲಕ ಪ್ರಸ್ತುತಪಡಿಸುವುದು ಕಾರ್ಯಕ್ರಮದ ವಿಶೇಷವಾಗಿದೆ.

ಶ್ರೀಮತಿ ಮಾನಸ ಸಂದೀಪ್ ಮತ್ತು ಶ್ರೀ ಸಂದೀಪ್ ಎಂ.ಆರ್. ದಂಪತಿಯ ಪುತ್ರಿಯಾದ ಪೂರ್ವಿ, ವಿದುಷಿ ಪದ್ಮಗಂಧಿನಿ ರಾವ್ ಹುಲಿಕಲ್ ಅವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ಕರ್ನಾಟಕ ಸಂಗೀತ ವಿದ್ವಾಂಸ ವಿದ್ವಾನ್ ಪಟ್ಟಾಭಿರಾಮ ಪಂಡಿತ್ ಟಿ.ಎಸ್. ಹಾಗೂ ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ, ನಟುವನಾರ್ ಮತ್ತು ಗಾಯಕಿ ವಿದುಷಿ ಅಪರ್ಣಾ ಕೆ. ಶರ್ಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ನೃತ್ಯಗುರು ಮತ್ತು ದೂರದರ್ಶನ ಕಲಾವಿದೆ ವಿದುಷಿ ಡಾ. ಪ್ರಿಯಾ ಗಣೇಶ್ ಗೌರವಾನ್ವಿತ ಅತಿಥಿಗಳಾಗಿರಲಿದ್ದಾರೆ.

ಪೂರ್ವಿಯ ಕಲಾಸಾಧನೆ: ಆರನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಕೆ ಆರಂಭಿಸಿದ ಪೂರ್ವಿ, ರಾಮನಾಥಪುರ, ಹೊರನಾಡು, ನಂದಿಕೂರು ಮತ್ತು ಸುತ್ತೂರು ಮಠ ಸೇರಿದಂತೆ ಹಲವು ಸಾಂಸ್ಕೃತಿಕ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಜೂನಿಯರ್ ಭರತನಾಟ್ಯ ಪರೀಕ್ಷೆಯಲ್ಲಿ ಶೇ. 91 ಅಂಕ ಗಳಿಸಿದ್ದಾರೆ. ವಿದ್ವಾನ್ ತುಮಕೂರು ಬಿ. ಶಶಿಶಂಕರ್ ಅವರ ಬಳಿ ನಟುವಾಂಗ ಹಾಗೂ ವಿದುಷಿ ರಾಧಿಕಾ ವಾಸುದೇವನ್ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅವರು ಯೋಗ, ಈಜು, ಚಿತ್ರಕಲೆ ಮತ್ತು ಕ್ರೋಶೆ ಹೆಣಿಗೆಯಲ್ಲಿಯೂ ಆಸಕ್ತಿ ಹೊಂದಿದ್ದಾರೆ.

ಅನುಭವಿ ಗುರುಗಳ ಮಾರ್ಗದರ್ಶನ: ಸುಮಾರು ಎರಡು ದಶಕಗಳ ಕಲಾನುಭವ ಹೊಂದಿರುವ ವಿದುಷಿ ಪದ್ಮಗಂಧಿನಿ ರಾವ್ ಹುಲಿಕಲ್ ಅವರು ಡಾ. ಪ್ರಿಯಾ ಗಣೇಶ್, ವಿದ್ವಾನ್ ಅನಿಲ್ ಕುಮಾರ್ ಮತ್ತು ವಿದುಷಿ ದಿವ್ಯಶ್ರೀ ಗುರುಪ್ರಸಾದ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಪೋಸ್ಟ್-ವಿದ್ವತ್ ಪರೀಕ್ಷೆಗಳನ್ನು ಪೂರ್ಣಗೊಳಿಸಿರುವ ಅವರು 2020ರಲ್ಲಿ ರಂಗಪ್ರವೇಶ ಮಾಡಿದ್ದಾರೆ. ಮೈಸೂರು ದಸರಾ, ದೂರದರ್ಶನ, ಭಾರತೀಯ ವಿದ್ಯಾಭವನ ಮತ್ತು ಅಯೋಧ್ಯೆಯ ಶ್ರೀರಾಮ ಮಂದಿರ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ‘ಅಂತರ್ಯಾಗ ಸುಧಾ’, ‘ಸೌಂದರ್ಯ ಲಹರಿ ವಿಲಾಸ’ ಮತ್ತು ‘ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ’ ಅವರ ಪ್ರಮುಖ ನೃತ್ಯರೂಪಕಗಳು.

ದಾಸಸಾಹಿತ್ಯದ ನೃತ್ಯವೈಭವ: ಕಾರ್ಯಕ್ರಮದಲ್ಲಿ ಪುಷ್ಪಾಂಜಲಿ, ಕನಕದಾಸರ ‘ನಮ್ಮಮ್ಮ ಶಾರದೆ’, ಶ್ರೀಪಾದರಾಜರ ‘ಭೂಷಣಕೆ ಭೂಷಣ’, ಪುರಂದರದಾಸರ ‘ಆಡಪೋದಲ್ಲೆ ಮಕ್ಕಳು’, ವಿಜಯದಾಸರ ‘ಕುನಿಕುನಿಯುತ ಬಾರೋ’, ಜಗನ್ನಾಥದಾಸರ ‘ಆವ ರೂಪವ ನೋಡಿ’ ನಿಂದಾಸ್ತುತಿ ಮತ್ತು ಉಗಾಭೋಗ, ಗೋಪಾಲದಾಸರ ಸಾಹಿತ್ಯವಿರುವ ತಿಲ್ಲಾನ ಹಾಗೂ ಹರಪನಹಳ್ಳಿ ಭೀಮವ್ವ ಅವರ ಮಂಗಳ ಸೇರಿದಂತೆ ಎಂಟು ಕೃತಿಗಳು ಪ್ರಸ್ತುತಗೊಳ್ಳಲಿವೆ.

ವಿದುಷಿ ಹರ್ಷಿತಾ ವಿದ್ಯಾ ಗಾಯನ, ಪದ್ಮಗಂಧಿನಿ ರಾವ್ ಹುಲಿಕಲ್ ನಟುವಾಂಗ, ವಿದ್ವಾನ್ ಶ್ರೀಹರಿ ರಂಗಸ್ವಾಮಿ ಮೃದಂಗ, ವಿದ್ವಾನ್ ತುಮಕೂರು ಬಿ. ಶಶಿಶಂಕರ್ ಘಟಂ ಹಾಗೂ ವಿದ್ವಾನ್ ನರಸಿಂಹ ಮೂರ್ತಿ ಕೊಳಲಿನಲ್ಲಿ ಸಹಕರಿಸಲಿದ್ದಾರೆ. ಶ್ರೀಮತಿ ಸುಷ್ಮಾ ಡಿ.ಎಸ್. ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ಭರತನಾಟ್ಯದ ಶಾಸ್ತ್ರೀಯ ಸೌಂದರ್ಯ ಮತ್ತು ಹರಿದಾಸರ ಭಕ್ತಿಸಾಹಿತ್ಯವನ್ನು ಸಮನ್ವಯಗೊಳಿಸುವ ಈ ರಂಗಪ್ರವೇಶವು ಪೂರ್ವಿಯ ಕಲಾಪಯಣದ ಮಹತ್ವದ ಮೈಲಿಗಲ್ಲಾಗಲಿದೆ.