ನಾಲವಾರ ಮಠದಲ್ಲಿ ಅ.20ರಂದು ಅವಳಿ ಮಹೋತ್ಸವ: ಗುರುಗಳ ಪುಣ್ಯಸ್ಮರಣೆ ಹಾಗೂ ಡಾ.ಸಿದ್ಧತೋಟೇಂದ್ರ ಶ್ರೀಗಳ ಜನ್ಮದಿನೋತ್ಸವ
ನಾಲವಾರ ಮಠದಲ್ಲಿ ಅ.20ರಂದು ಅವಳಿ ಮಹೋತ್ಸವ: ಗುರುಗಳ ಪುಣ್ಯಸ್ಮರಣೆ ಹಾಗೂ ಡಾ.ಸಿದ್ಧತೋಟೇಂದ್ರ ಶ್ರೀಗಳ ಜನ್ಮದಿನೋತ್ಸವ
ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕೇಂದ್ರ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಅಕ್ಟೋಬರ್ 20ರ ಆಯುಧಪೂಜೆಯ ಶುಭದಿನದಂದು ಎರಡು ಮಹೋತ್ಸವಗಳು ಒಂದೇ ದಿನ ನೆರವೇರಲಿವೆ.
ಶ್ರೀಮಠದ ಲೀಲಾಮೂರ್ತಿ ಲಿಂ. ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಹಾಗೂ ಹಾಲಿ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಿನೋತ್ಸವ ಒಂದೇ ದಿನ ಜರುಗಲಿದೆ.
ಲಿಂ. ತೋಟೇಂದ್ರ ಶಿವಯೋಗಿಗಳು ತಮ್ಮ ಅಂತ್ಯಕಾಲದಲ್ಲಿ "ಮುಂದಿನ ಆಯುಧಪೂಜೆಯಂದೇ ನಾನು ಮತ್ತೆ ಜನಿಸಿ ಈ ಪೀಠವನ್ನು ಬೆಳಗುತ್ತೇನೆ" ಎಂದು ಅಭಯ ನೀಡಿದ್ದರು. ಅದರಂತೆಯೇ ಮರು ವರ್ಷದ ಆಯುಧಪೂಜೆಯಂದು ಮಾತೋಶ್ರೀ ಗೌರಮ್ಮ ಮತ್ತು ಗುರುಸಿದ್ಧಯ್ಯ ಸ್ವಾಮಿಗಳ ಮಡಿಲಲ್ಲಿ ಡಾ. ಸಿದ್ಧತೋಟೇಂದ್ರ ಶ್ರೀಗಳು ಜನಿಸಿದರು ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ. ಅಂದಿನಿಂದ ಪ್ರತಿ ವರ್ಷ ಆಯುಧಪೂಜೆಯಂದು ಎರಡೂ ಉತ್ಸವಗಳನ್ನು ಒಟ್ಟಿಗೆ ಆಚರಿಸಲಾಗುತ್ತಿದೆ.
ಈ ನಿಮಿತ್ತ ನವರಾತ್ರಿ 9 ದಿನ ಪ್ರತಿನಿತ್ಯ ಸಂಜೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ನಾದಾರ್ಚನೆ ನಡೆಯುತ್ತಿದೆ.
ಅ.20ರಂದು ಸಂಜೆ ಕರ್ತೃ ಗದ್ದುಗೆಗೆ ಪುಷ್ಪಾಲಂಕಾರ, ಮಹಾಪೂಜೆ, ಮಹಾಮಂಗಳಾರತಿ ನಂತರ ಶ್ರೀ ಸಿದ್ಧತೋಟೇಂದ್ರ ಸುವರ್ಣ ಭವನದಲ್ಲಿ ಜನ್ಮದಿನೋತ್ಸವ ಹಾಗೂ ವೈಭವದ ಧರ್ಮಸಭೆ ನಡೆಯಲಿದೆ.
ಧರ್ಮಸಭೆಯಲ್ಲಿ ಕೃತಿ ಲೋಕಾರ್ಪಣೆ, ಪರಮಪೂಜ್ಯರಿಗೆ ತುಲಾಭಾರ ಸೇವೆ, ಸಾಧಕರಿಗೆ ಸನ್ಮಾನ ಹಾಗೂ ಭಕ್ತರಿಗೆ 'ಸಿದ್ಧತೋಟೇಂದ್ರ ಗುರುರಕ್ಷೆ' ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಶ್ರೀಗಳು, ಗಣ್ಯರು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮಠದ ವಕ್ತಾರ ಮಹಾದೇವ ಕೆ. ಗಂವ್ಹಾರ ತಿಳಿಸಿದ್ದಾರೆ.

