ಪದವಿ ದಿನಗಳ ಸದ್ಬಳಕೆಯಿಂದಲೇ ಉಜ್ವಲ ಭವಿಷ್ಯ: ಶಿಸ್ತು, ಕಠಿಣ ಪರಿಶ್ರಮಕ್ಕೆ ಕರೆ
ವಿದ್ಯಾರ್ಥಿ ಜೀವನದ ಸದ್ಬಳಕೆಯೇ ಉಜ್ವಲ ಭವಿಷ್ಯಕ್ಕೆ ನಾಂದಿ
ಪದವಿ ದಿನಗಳ ಸದ್ಬಳಕೆಯಿಂದಲೇ ಉಜ್ವಲ ಭವಿಷ್ಯ: ಶಿಸ್ತು, ಕಠಿಣ ಪರಿಶ್ರಮಕ್ಕೆ ಕರೆ
ಕಾರ್ಯಾಗಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ
ನರೇಗಲ್: ವಿದ್ಯಾರ್ಥಿ ಜೀವನ ಹಾಗೂ ಪದವಿ ಶಿಕ್ಷಣದ ಅವಧಿಯು ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಘಟ್ಟ. ಈ ಅಮೂಲ್ಯ ಸಮಯವನ್ನು ದುರುಪಯೋಗಪಡಿಸಿಕೊಳ್ಳದೆ, ಸತತ ಪರಿಶ್ರಮ ಮತ್ತು ಏಕಾಗ್ರತೆಯಿಂದ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲರಾದ ಎಲ್. ಎಲ್. ಗುಳೇದಗುಡ್ಡ ಹೇಳಿದರು.
ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಆಶ್ರಯದಲ್ಲಿ ನಡೆದ ವಿವಿಧ ವಿಷಯಗಳ ಸರಣಿ ಕಾರ್ಯಾಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಲೇಜಿನಲ್ಲಿ ಆಯೋಜಿಸುವ ಕಾರ್ಯಾಗಾರಗಳು ವಿದ್ಯಾರ್ಥಿಗಳನ್ನು ಕೇವಲ ಪದವೀಧರರನ್ನಾಗಿ ಮಾಡದೆ, ಉದ್ಯೋಗಾರ್ಹ ಹಾಗೂ ಸಾಮಾಜಿಕ ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ರೂಪಿಸುತ್ತವೆ. ಆದ್ದರಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೆ, ಗುಣಮಟ್ಟದ ಹಾಗೂ ಪ್ರಸ್ತುತ ಮಾರುಕಟ್ಟೆಗೆ ತಕ್ಕಂತಹ ಕಾರ್ಯಾಗಾರಗಳನ್ನು ನಿರಂತರವಾಗಿ ಹಮ್ಮಿಕೊಂಡು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿವೆ ಎಂದರು. ತಜ್ಞರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿಷಯವಾರು ಮಾಹಿತಿಯನ್ನು ಪರಿಣಾಮಕಾರಿಯಾಗಿ ಕಲಿಯುತ್ತಾರೆ. ತಂತ್ರಜ್ಞಾನ, ಕಲೆ, ಸಂಶೋಧನೆ ಅಥವಾ ಇತರೆ ವಿಷಯಗಳ ಮೇಲೆ ನಡೆಯುವ ಕಾರ್ಯಾಗಾರಗಳು ಮಕ್ಕಳಲ್ಲಿನ ಕೌಶಲ್ಯದ ಕೊರತೆಯನ್ನು ನೀಗಿಸುತ್ತವೆ. ವಿದ್ಯಾರ್ಥಿಗಳಲ್ಲಿ ಹೊಸ ವಿಚಾರಗಳನ್ನು ಪ್ರಯೋಗಿಸುವ ಧೈರ್ಯ ಹಾಗೂ ಉದ್ಯೋಗ ಸಂದರ್ಶನಗಳನ್ನು ಎದುರಿಸುವ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಕಸ್ತೂರೆವ್ವ ದಳವಾಯಿ, ಕೇವಲ ಪಠ್ಯಪುಸ್ತಕದ ಜ್ಞಾನ ಮತ್ತು ಅಂಕಪಟ್ಟಿಗಳು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ತರಗತಿಯ ನಾಲ್ಕು ಗೋಡೆಗಳ ಆಚೆಗಿನ ಪ್ರಾಯೋಗಿಕ ಜ್ಞಾನ ಮತ್ತು ಉದ್ಯಮ ರಂಗದ ವಾಸ್ತವ ಅಗತ್ಯತೆಗಳನ್ನು ಅರಿಯುವುದು ಇಂದಿನ ತುರ್ತು. ಈ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ನಿಯಮಿತವಾಗಿ ಆಯೋಜಿಸುವ ಕಾರ್ಯಾಗಾರಗಳು ಮಕ್ಕಳ ಶೈಕ್ಷಣಿಕ ಹಾಗೂ ವೃತ್ತಿ ಬದುಕಿಗೆ ಭದ್ರ ಬುನಾದಿ ಹಾಕುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಐಕ್ಯೂಎಸಿ ಸಂಚಾಲಕಿ ಜಯಶ್ರೀ ಮುತಗಾರ ಮಾತನಾಡಿ, ಪದವಿ ಹಂತದ ದಿನಗಳು ಯುವಜನರ ಬದುಕಿನ ಗತಿಯನ್ನು ನಿರ್ಧರಿಸುತ್ತವೆ. ಸಾಮಾಜಿಕ ಜಾಲತಾಣಗಳು ಹಾಗೂ ಅನಗತ್ಯ ಚಟುವಟಿಕೆಗಳಿಗೆ ಸಮಯ ವ್ಯರ್ಥ ಮಾಡದೆ, ದಿನನಿತ್ಯದ ಓದಿಗೆ ನಿಶ್ಚಿತ ಸಮಯ ಮೀಸಲಿಡುವ ಶಿಸ್ತು ಬೆಳೆಸಿಕೊಳ್ಳಬೇಕು. ಕಾಲೇಜಿನಲ್ಲಿ ಸಿಗುವ ಶೈಕ್ಷಣಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಿ ಹೆತ್ತವರಿಗೆ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಬಗ್ಗೆ ಶಿವಮೂರ್ತಪ್ಪ ಕುರೇರ, ಇಂಗ್ಲಿಷ್ ಬಗ್ಗೆ ನಸರೀನಾಬಾನು ಜಮಾದರ, ಭೀಮಸೇನಾ ಉಗ್ರದ, ಗಣಿತದ ಬಗ್ಗೆ ಬಸವರಾಜ ಬಳಗಾನೂರ, ವಾಣಿಜ್ಯದ ಬಗ್ಗೆ ಮಹಾಂತೇಶ ಮುಧೋಳ, ಇತಿಹಾಸದ ಬಗ್ಗೆ ಮಾರುತಿ ಹಾಗೂ ಅರ್ಥಶಾಸ್ತ್ರದ ಬಗ್ಗೆ ರಾಜು ಬಿ. ಕೆ. ವಿಶೇಷ ಉಪನ್ಯಾಸ ನೀಡಿದರು.
ಪ್ರಾಧ್ಯಾಪಕರಾದ ಎಸ್. ಎಸ್. ಸೂಡಿ, ಸುನಂದಾ ಮುಂಜಿ, ಅನಿಲಕುಮಾರ, ಶಿವಪ್ಪ ಕುರಬರ, ವಿರೂಪಾಕ್ಷ ಆರ್., ಅಯ್ಯಪ್ಪ, ಎನ್. ಎಸ್. ಹೊನ್ನೂರ, ವಿ. ಸಿ. ಇಲ್ಲೂರ, ಪಿ. ವೈ. ಶಾಸ್ತ್ರಿ, ಕೆ. ಎನ್. ಕಟ್ಟಿಮನಿ, ವಿವೇಕಾನಂದ ಹಿರೇಮಠ, ಶರಣಪ್ಪ ಚಿಕ್ಕೆನಕೊಪ್ಪ, ಶಂಕರಗೌಡ ಪಾಟೀಲ, ಎಂ. ಎಫ್. ತಹಶೀಲ್ದಾರ, ಎಸ್. ಆರ್. ನದಾಫ್, ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
24ನರೇಗಲ್1: ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಆಶ್ರಯದಲ್ಲಿ ನಡೆದ ವಿವಿಧ ವಿಷಯಗಳ ಸರಣಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಎಲ್. ಎಲ್. ಗುಳೇದಗುಡ್ಡ ಮಾತನಾಡಿದರು
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

