ಕನ್ನಡದ ಪ್ರಥಮ ಕವಿಯಿತ್ರಿ ಅಕ್ಕಮಹಾದೇವಿ ಎದುರಿಸಿದ ಪರೀಕ್ಷೆಗಳು ಬಹಳಷ್ಟು : ಡಾ.ಕುಸುಮಾ ಪಿ.ಬೋವಿ
ಕನ್ನಡದ ಪ್ರಥಮ ಕವಿಯಿತ್ರಿ ಅಕ್ಕಮಹಾದೇವಿ ಎದುರಿಸಿದ ಪರೀಕ್ಷೆಗಳು ಬಹಳಷ್ಟು : ಡಾ.ಕುಸುಮಾ ಪಿ.ಬೋವಿ
ಚಿಂಚೋಳಿ: ಶರಣ ಚಳುವಳಿಯ ಮಹಿಳಾ ವಚನಗಾರ್ತಿ ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ ಎಂದು ಪ್ರಾಂಶುಪಾಲರಾದ ಡಾ.ಕುಸುಮಾ ಪಿ.ಬೋವಿ ಅವರು ತಿಳಿಸಿದರು.
ಚಂದಾಪೂರದ ಶರಣೆ ನೀಲಾಂಬಿಕಾ ಬಸವ ತತ್ವ ಸೇವಾ ಟ್ರಸ್ಟ್ ಚಂದಾಪೂರ ವತಿಯಿಂದ ಚಂದಾಪೂರದ ಅಕ್ಕ ಮಹಾದೇವಿ ದೇವಸ್ಥಾನದ ಕಟ್ಟೆಯಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಹಮ್ಮಿಕೊಂಡಿರುವ ಶರಣ ದರ್ಶನ ಪ್ರವಚನದಲ್ಲಿ ವಿಶೇಷ ಉಪನ್ಯಾಸ ಅವರು ನೀಡಿದರು.
ಅಕ್ಕಮಹಾದೇವಿ ಅವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ ಗುರುತಿಸಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಮಲ್ಲಿಕಾರ್ಜುನನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿದವರು. ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಗತಿಪರ ಚಿಂತಕ ಗೌತಮ ಬೊಮ್ಮನಳ್ಳಿ ಮಾತನಾಡಿ, ಧ್ವನಿ ಇಲ್ಲದ ಶೋಷಿತರಿಗೆ, ದೀನ ದಲಿತರಿಗೆ ಧ್ವನಿಯಾದವರು ಬಸವಣ್ಣ. ಹೀಗಾಗಿ ಬಸವಣ್ಣನವರು ಇಡಿ ವಿಶ್ವಕ್ಕೆ ಮಾದರಿಯಾಗಿ ಶ್ರೇಷ್ಠ ಸಮಾಜ ಸುಧಾರಕರೇನಿಸಿದ್ದಾರೆ. ಇಂತಹ ಮಹಾ ಪುರುಷರ ಆದರ್ಶ ತತ್ವದ ವಿಚಾರಗಳು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಆಗಬೇಕೆಂದರು. ಚಿಮ್ಮನಚೋಡ ಗ್ರಾ. ಪಂ. ಕಾರ್ಯದರ್ಶಿಗಳು ಹಾಗೂ ಸರಕಾರಿ ನೌಕರರ ಸಂಘದ ನಿರ್ದೇಶಕ ಜಗನ್ನಾಥರಡ್ಡಿ ಚಟ್ನಳ್ಳಿ ಅವರು ಮಾತನಾಡಿದರು. ಶಿವ ಸ್ವಾಮಿ ಚಂದಾಪೂರ ಉಪಸ್ಥಿತರಿದ್ದರು. ನೀಲಾಂಬಿಕೆ ಟ್ರಸ್ಟ್ ನ ಜ್ಯೋತಿ ಬೊಮ್ಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶರಣೆ ಸುನಿತಾ ಪಾಲಾಮೂರ್ ಬಸವ ಪೂಜೆ ನೆರವೇರಿಸಿದರು. ಡಾ.ಮಲ್ಲಿಕಾರ್ಜುನ ಪಾಲಾಮೂರ್ ಸ್ವಾಗತಿಸಿದರು. ಪ್ರೊ.ಕಾಶಿನಾಥ ಹುಣಜೆ ನಿರೂಪಿಸಿದರು. ಸುಮಂಗಲಾ ಹುಣಜೆ ವಂದಿಸಿದರು.

