ಬಿತ್ತನೆ ಬೀಜ, ರಸಗೊಬ್ಬರ ಕೊರತೆ ನಿವಾರಿಸಿ ರೈತರಿಗೆ ಸಕಾಲದಲ್ಲಿ ಪೂರೈಕೆ ಮಾಡಲು ರವಿ ಸಿಂಗೆ ಆಗ್ರಹ
ಬಿತ್ತನೆ ಬೀಜ, ರಸಗೊಬ್ಬರ ಕೊರತೆ ನಿವಾರಿಸಿ ರೈತರಿಗೆ ಸಕಾಲದಲ್ಲಿ ಪೂರೈಕೆ ಮಾಡಲು ರವಿ ಸಿಂಗೆ ಆಗ್ರಹ
ಕಲಬುರಗಿ: ಮುಂಗಾರು ಹಂಗಾಮು ಆರಂಭವಾಗಿರುವ ಬೆನ್ನಲ್ಲೇ ಜಿಲ್ಲೆಯ ರೈತರಿಗೆ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಎದುರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗದಂತೆ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರವಿ ಸಿಂಗೆ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಹಲವು ಕಡೆ ರೈತರು ಈಗಾಗಲೇ ಬಿತ್ತನೆ ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಕೆಲವೆಡೆ ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ಇಂತಹ ಸಂದರ್ಭದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಲಭ್ಯತೆ ಕುರಿತು ಅನಿಶ್ಚಿತತೆ ಉಂಟಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.
ರೈತ ಸಂಪರ್ಕ ಕೇಂದ್ರಗಳು ಹಾಗೂ ಕೃಷಿ ಇಲಾಖೆಯ ವಿವಿಧ ವಿತರಣಾ ಕೇಂದ್ರಗಳಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳು ಮತ್ತು ಅಗತ್ಯ ಪ್ರಮಾಣದ ಯೂರಿಯಾ, ಡಿಎಪಿ ಸೇರಿದಂತೆ ವಿವಿಧ ರಸಗೊಬ್ಬರಗಳು ಸಮರ್ಪಕವಾಗಿ ಲಭ್ಯವಾಗುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಬಿತ್ತನೆ ಅವಧಿಯಲ್ಲಿ ಪೂರೈಕೆಯಲ್ಲಿ ಉಂಟಾಗುವ ವಿಳಂಬವು ರೈತರ ಉತ್ಪಾದನೆ ಮತ್ತು ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದರು.ಕೆಲವು ಕಡೆಗಳಲ್ಲಿ ಕೃತಕ ಕೊರತೆ ಸೃಷ್ಟಿಸಿ ಬೀಜ ಮತ್ತು ಗೊಬ್ಬರಗಳನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುವ ದಂಧೆ ನಡೆಯುವ ಸಾಧ್ಯತೆಗಳಿದ್ದು, ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಯಲು ಕೃಷಿ ಇಲಾಖೆ, ತೂಕ ಮತ್ತು ಅಳತೆ ಇಲಾಖೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಬೇಕು. ಅಕ್ರಮ ಸಂಗ್ರಹಣೆ, ಕಾಳಸಂತೆ ಮತ್ತು ಅಧಿಕ ದರ ವಸೂಲಿಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.ರೈತರಿಗೆ ಮಾಹಿತಿ ಮತ್ತು ದೂರುಗಳಿಗಾಗಿ ವಿಶೇಷ ಸಹಾಯವಾಣಿ ಆರಂಭಿಸುವ ಮೂಲಕ ಬಿತ್ತನೆ ಅವಧಿಯಲ್ಲಿ ಎದುರಾಗುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಬೇಕು. ರೈತರು ಯಾವುದೇ ತೊಂದರೆ ಇಲ್ಲದೆ ಕೃಷಿ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
