ಹಿರಾಪೂರ ಸರ್ಕಲ್ನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ
ಹಿರಾಪೂರ ಸರ್ಕಲ್ನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ
750ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ
ಕಲಬುರಗಿ: ನಗರದ ಹಿರಾಪೂರ ಸರ್ಕಲ್ನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸ್ಲಂ ಜನರ ಸಂಘಟನೆ ಕರ್ನಾಟಕ, ಕಲಬುರಗಿ, ಪ್ರಜ್ಞಾ ಯುವಕ ಸಂಘ ಹಿರಾಪೂರ ಹಾಗೂ ಡಾ. ಅಂಬೇಡ್ಕರ್ ಅರಿವು ಉತ್ಸವ ಸಮಿತಿ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಡಾ. ರವಿಕಾಂತಿ ಎಸ್. ಕ್ಯಾತ್ನಾಳ, ಅಂಧತ್ವ ನಿಯಂತ್ರಣ ಅಧಿಕಾರಿಗಳು, ಕಲಬುರಗಿ ಅವರು ಮಾತನಾಡಿ, ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ನೀಡಿದೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಮೇಶ್ ಪಟ್ಟೇದಾರ, ಶ್ರೀ ಹನುಮಂತ ಇಟಗಿ, ಡಾ. ಅನಿಲ್ ಟೆಂಗಳಿ, ಸಂತೋಷ್ ಮೇಲ್ಮನಿ, ಜಗದೀಶ್ ಪಾಟೀಲ್, ಅಲ್ಲಂಪ್ರಭು ನಿಂಬರ್ಗಾ, ಬ್ರಹ್ಮಾನಂದ ಮಿಂಚ, ಸಂತೋಷ್ ದಾಡಿ, ಅಮರೇಶ್ ಇಟಗಿಕರ್, ಮಲ್ಲಿಕಾರ್ಜುನ ಶಿಂಗೆ, ಸಂತೋಷ್ ನೂಲ, ಎಸ್.ಎನ್. ಕುಂಬಾರ್, ಲಿಂಗರಾಜ, ಬಸವರಾಜ ಹೂಗಾರ್, ಲಿಂಗರಾಜ ಪಾಟೀಲ್, ಚಾಂದ್ ಪಾಷಾ, ಧರ್ಮಣ್ಣ ಜೈನಾಪುರ ಸೇರಿದಂತೆ ಹಲವು ಗಣ್ಯರು ಹಾಗೂ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
ಹಿರಾಪೂರ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಗುರುಗಳು, ಶಿಕ್ಷಕರು ಮತ್ತು ಸುಮಾರು 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಿಧಾನದ ಪ್ರಸ್ತಾವನೆಯನ್ನು ಸಾಮೂಹಿಕವಾಗಿ ವಾಚಿಸಿದರು.
ವಿದ್ಯಾರ್ಥಿಗಳಲ್ಲಿ ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವದ ಆಶಯಗಳು ಹಾಗೂ ಸಾಮಾಜಿಕ ಸಮಾನತೆಯ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

