ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವುದು ಪೋಷಕರ ಕರ್ತವ್ಯ: ಪೂಜ್ಯ ಚನ್ನಮಲ್ಲ ಸ್ವಾಮೀಜಿ

ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವುದು ಪೋಷಕರ ಕರ್ತವ್ಯ: ಪೂಜ್ಯ ಚನ್ನಮಲ್ಲ ಸ್ವಾಮೀಜಿ

ಸದ್ಗುಣ ಸಂಪನ್ನ ಮಕ್ಕಳೇ ಸಮಾಜದ ನಿಜವಾದ ಆಸ್ತಿ

 ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವುದು ಪೋಷಕರ ಕರ್ತವ್ಯ: ಪೂಜ್ಯ ಚನ್ನಮಲ್ಲ ಸ್ವಾಮೀಜಿ

ಕಲಬುರಗಿ, ಅ. 16: ಮಕ್ಕಳ ಭವಿಷ್ಯಕ್ಕಾಗಿ ಕೇವಲ ಭೌತಿಕ ಸಂಪತ್ತನ್ನು ಕೂಡಿಡುವುದಕ್ಕಿಂತ, ಅವರಿಗೆ ಉತ್ತಮ ಶಿಕ್ಷಣದೊಂದಿಗೆ ಸದ್ಗುಣ ಮತ್ತು ಸಂಸ್ಕಾರಗಳನ್ನು ಧಾರೆಯೆರೆದು ಸಮಾಜದ ಆಸ್ತಿಯನ್ನಾಗಿ ರೂಪಿಸುವುದು ಪ್ರತಿಯೊಬ್ಬ ತಂದೆ-ತಾಯಿಯ ಆದ್ಯ ಕರ್ತವ್ಯವಾಗಿದೆ ಎಂದು ನರೋಣ ಹಾಗೂ ಗೋಳಾದ ಹೊಸಮಠದ ಪೂಜ್ಯ ಶ್ರೀ ಚನ್ನಮಲ್ಲ ಸ್ವಾಮೀಜಿ ಹೇಳಿದರು.

ನಗರದ ಅಡ್ವೊಕೇಟ್ಸ್ ಕಾಲೋನಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಿರುವ ಶ್ರೀ ದಾನಮ್ಮ ದೇವಿಯ ಜೀವನ ದರ್ಶನದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು.

ಗೌರಿ ನಾರಾಯಣ, ಗಾನಯೋಗಿ ಪಂಚಾಕ್ಷರಿ, ಪುಟ್ಟರಾಜ ಗವಾಯಿಗಳು, ಬಸವಾದಿ ಶರಣರು ಹಾಗೂ ಹಾನಗಲ್ಲ ಕುಮಾರ ಶಿವಯೋಗಿಗಳನ್ನು ಸ್ಮರಿಸುವ ಮೂಲಕ ಪ್ರವಚನ ಆರಂಭಿಸಿದ ಶ್ರೀಗಳು, ಸತ್ಸಂಗ ಮತ್ತು ಶರಣಾಗತಿಯ ಮಹತ್ವವನ್ನು ವಿವರಿಸಿದರು.

ಶರಣಾಗತಿಯಿಂದ ಅರಿವಿನ ಜಾಗೃತಿ

ಡಾ. ಸಿದ್ದಯ್ಯ ಪುರಾಣಿಕರ ಸಾಲುಗಳನ್ನು ಉಲ್ಲೇಖಿಸಿದ ಶ್ರೀ ಚನ್ನಮಲ್ಲ ಸ್ವಾಮೀಜಿ, ವೀಣೆಯ ತಂತಿಗಳನ್ನು ಬಿಗಿಗೊಳಿಸಿದಾಗ ಮಾತ್ರ ಸುಮಧುರ ನಾದ ಹೊರಹೊಮ್ಮುವಂತೆ, ಮನುಷ್ಯ ಅಹಂಕಾರವನ್ನು ತೊರೆದು ಗುರುವಿನ ಪಾದಗಳಿಗೆ ಸಂಪೂರ್ಣ ಶರಣಾದಾಗ ಆತನೊಳಗಿನ ಅರಿವು ಜಾಗೃತಗೊಳ್ಳುತ್ತದೆ ಎಂದು ತಿಳಿಸಿದರು.

ಜಗತ್ತಿನಲ್ಲಿ ಸಜ್ಜನರು ಮತ್ತು ದುರ್ಜನರು ಎಂಬ ಎರಡು ಬಗೆಯ ಜನರಿದ್ದು, ಸಜ್ಜನರ ಸಹವಾಸ ಜೇನುತುಪ್ಪದಂತಿದ್ದರೆ, ದುರ್ಜನರ ಸಹವಾಸ ಕೊಳಚೆಯಂತಿದೆ. ಆದ್ದರಿಂದ ಉತ್ತಮ ವ್ಯಕ್ತಿಗಳ ಒಡನಾಟ ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.

ಚಿಕ್ಕ ವಯಸ್ಸಿನಲ್ಲಿಯೇ ಪ್ರಾಪಂಚಿಕ ಸುಖಗಳನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನನ ಆರಾಧನೆಯಲ್ಲಿ ತೊಡಗಿಸಿಕೊಂಡ ಅಕ್ಕಮಹಾದೇವಿಯ ವೈರಾಗ್ಯವನ್ನು ಸ್ಮರಿಸಿದರು. ಅಕ್ಬರ್‌-ಬೀರಬಲ್ಲರ ಕಥೆ ಹಾಗೂ ಸತ್ಸಂಗದಿಂದ ದೂರ ಉಳಿಯಲು ಪ್ರಯತ್ನಿಸಿದ ಕಳ್ಳನ ದೃಷ್ಟಾಂತಗಳನ್ನು ವಿವರಿಸುವ ಮೂಲಕ ಪರಿಶುದ್ಧ ಮನಸ್ಸು ಮತ್ತು ಸತ್ಸಂಗದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.

ಅರ್ಧ ಶತಮಾನದ ವೈದ್ಯಕೀಯ ಸೇವೆಗೆ ಗೌರವ

ಕಾರ್ಯಕ್ರಮದ ಅಂಗವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಗರದ ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು.

ಹಿರಿಯ ವೈದ್ಯರಾದ ಡಾ. ಎಂ.ಎಂ. ಕಾಳೆ, ಡಾ. ದೇವೇಂದ್ರಪ್ಪ ಚಿಂಚೋಳಿ, ಡಾ. ಬಿ.ಟಿ. ಪಾಲಾದಿ, ಡಾ. ಬಸವರಾಜ ಕೋತ್ಲಿ, ಡಾ. ನಾಗನಾಥ ಗಚ್ಚಿನಮನಿ, ಡಾ. ಶಿವಪುತ್ರಪ್ಪ ಹರವಾಳ, ಡಾ. ಶಕುಂತಲಾ ಬನ್ನಾಳೆ, ಡಾ. ಮಲ್ಲಾರಾವ್ ಮಲ್ಲೆ, ಡಾ. ಎಚ್. ವೀರಭದ್ರಪ್ಪ, ಡಾ. ಅನಿಲ್ ನಮೋಶಿ, ಡಾ. ರವೀಂದ್ರ ಶಹಾ, ಡಾ. ಅಭಯ್ ಬೋರಗಾಂವ್ಕರ್ ಹಾಗೂ ಡಾ. ವಿದ್ಯಾಸಾಗರ ಇಟಗಂಪಳ್ಳಿ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ 88 ವರ್ಷದ ಹಿರಿಯ ವೈದ್ಯ ಡಾ. ಎಂ.ಎಂ. ಕಾಳೆ ಅವರು, 1964ರಲ್ಲಿ ಗುಲ್ಬರ್ಗಾ ಆಸ್ಪತ್ರೆಯಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ದಿನಗಳನ್ನು ಸ್ಮರಿಸಿದರು. ಗ್ರಾಮೀಣ ಭಾಗದ ರೋಗಿಗಳಿಗೆ ಚಿಕಿತ್ಸೆ ನೀಡಿದ ಅನುಭವ ಹಾಗೂ ಕೆಲ ಸಂದರ್ಭಗಳಲ್ಲಿ ಮೂಕ ಪ್ರಾಣಿಗಳಿಗೂ ಚಿಕಿತ್ಸೆ ನೀಡಬೇಕಾಗಿ ಬಂದ ಪ್ರಸಂಗಗಳನ್ನು ಹಾಸ್ಯಮಯವಾಗಿ ಹಂಚಿಕೊಂಡರು. ವೈದ್ಯಕೀಯ ಸೇವೆಗೆ ಗೌರವ ಸಲ್ಲಿಸಿದ ಆಯೋಜಕರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.

 ಸತ್ಸಂಗದಿಂದ ಬದುಕಿಗೆ ಮೌಲ್ಯ

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂ ಪ್ರಭು ಪಾಟೀಲ ಮಾತನಾಡಿ, ನಮ್ಮ ಭವ್ಯ ಸಂಸ್ಕೃತಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುರಾಣ ಪ್ರವಚನ ಮತ್ತು ಸತ್ಸಂಗ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಟ್ರಸ್ಟ್‌ನ ಕಾರ್ಯವನ್ನು ಶ್ಲಾಘಿಸಿದರು. ಸಮಾಜಕ್ಕೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅನುಭವಿ ವೈದ್ಯರ ಕೊಡುಗೆಯನ್ನು ಸ್ಮರಿಸಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಪಾಳಾ ಮೂಲ ಕಟ್ಟಿ ಮಠದ ಪೂಜ್ಯ ಷ.ಬ್ರ. ಗುರುಮೂರ್ತಿ ಶಿವಾಚಾರ್ಯರು ಆಶೀರ್ವಚನ ನೀಡಿ, ಮನುಷ್ಯನ ಬದುಕಿನಲ್ಲಿ ಆಸ್ತಿ, ಅಂತಸ್ತು ಮತ್ತು ಐಶ್ವರ್ಯಕ್ಕಿಂತ ಸಜ್ಜನರು ಹಾಗೂ ಶರಣರ ಸಂಗ ಮುಖ್ಯವಾಗಿದೆ ಎಂದು ಹೇಳಿದರು.

ಅಕ್ಕಮಹಾದೇವಿಯ ವಚನವನ್ನು ಉಲ್ಲೇಖಿಸಿ, ಸತ್ಸಂಗವು ಬದುಕಿಗೆ ನಿಜವಾದ ಮೌಲ್ಯ ತಂದುಕೊಡುತ್ತದೆ. ವಿಶೇಷವಾಗಿ ಬೆಳೆಯುವ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಕೆಟ್ಟ ಸಹವಾಸಕ್ಕೆ ಒಳಗಾಗದಂತೆ ತಂದೆ-ತಾಯಿಗಳು ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು. ಟ್ರಸ್ಟ್‌ನ ಕಾರ್ಯದರ್ಶಿ ಆರ್.ಜೆ. ಭೂಸಾರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಮಂಜುನಾಥ ಜೇವರ್ಗಿ ವಂದಿಸಿದರು.

ಸೋಮಶೇಖರ ಎಸ್. ರುಳಿ,ನಿವೃತ್ತ ಕಾರ್ಯ

ಕ್ರಮ ಮುಖ್ಯಸ್ಥರು, ಆಕಾಶವಾಣಿ, ಕಲಬುರಗಿ.