ವಿಜ್ಞಾನ ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಭಿನ್ನವಾಗಿ ಚಿಂತಿಸುವಂತಾಗಬೇಕು: ಆರ್.ಎಸ್. ಬುರಡಿ
ವಿಜ್ಞಾನ ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಭಿನ್ನವಾಗಿ ಚಿಂತಿಸುವಂತಾಗಬೇಕು: ಆರ್.ಎಸ್. ಬುರಡಿ
ಜಿಲ್ಲಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆ: ಭೀಮಾಂಬಿಕ ಮೂಲಿಮನಿ ಪ್ರಥಮ ಸ್ಥಾನ
ಗದಗ, ಅ. 24: ವಿದ್ಯಾರ್ಥಿಗಳು ಸಂಖ್ಯೆಗಳಿಗಿಂತ ತಮ್ಮ ಸಾಮರ್ಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸದಾ ಭಿನ್ನವಾಗಿ ಚಿಂತಿಸುವ, ಪ್ರಶ್ನಿಸುವ ಹಾಗೂ ವೈಜ್ಞಾನಿಕ ದೃಷ್ಟಿಕೋನದಿಂದ ವಿಷಯಗಳನ್ನು ವಿಶ್ಲೇಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಆರ್.ಎಸ್. ಬುರಡಿ ಹೇಳಿದರು.
ಕರ್ನಾಟಕ ಸರ್ಕಾರದ ಉರ್ದು ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ, ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ, ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಗದಗ ಇವರ ಆಶ್ರಯದಲ್ಲಿ 2026–27ನೇ ಸಾಲಿನ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸಂಖ್ಯೆಗಳು ಮುಖ್ಯವಲ್ಲ, ಸಾಮರ್ಥ್ಯ ಮುಖ್ಯ” ಎಂಬ ಮಾತಿನ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದ ಅವರು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದರ ಜೊತೆಗೆ ಮೋಸ ಮತ್ತು ವಂಚನೆಯ ಜಾಲಗಳ ಕುರಿತು ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಪ್ರಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯ ಸಾಧ್ಯತೆಗಳು ಅಪಾರವಾಗಿವೆ. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದರು.
ಅರುಣಾಚಲ ಪ್ರದೇಶದ ಬಾಲಕನೊಬ್ಬ ಡ್ರೋನ್ ಕ್ಯಾಮೆರಾವನ್ನು ಸಾಮಾಜಿಕ ಉಪಯೋಗಕ್ಕಾಗಿ ವಿನೂತನವಾಗಿ ಬಳಸಲು ಪ್ರಯತ್ನಿಸಿರುವ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳಲ್ಲಿ ಇಂತಹ ಸೃಜನಶೀಲ ಹಾಗೂ ನವೀನ ಚಿಂತನೆಗಳನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
“ದೇವರನ್ನು ಕತ್ತಲಲ್ಲಿ ಹುಡುಕಬೇಡಿ; ಶ್ರಮಜೀವಿ ವರ್ಗದಲ್ಲಿ ದೇವರನ್ನು ಕಾಣಬೇಕು” ಎಂದು ಹೇಳಿದ ಅವರು, ಶ್ರಮ, ವೈಜ್ಞಾನಿಕ ಚಿಂತನೆ ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಉತ್ತಮವಾಗಿ ಸಿದ್ಧಪಡಿಸಿ ಕರೆತಂದ ಶಿಕ್ಷಕರ ಕಾರ್ಯವನ್ನು ಅಭಿನಂದಿಸಿದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಹಾಗೂ ಡಯಟ್ ಉಪನ್ಯಾಸಕ ಜಿ.ಡಿ. ದಾಸರ ಮಾತನಾಡಿ, ಜೀವನದಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ತಾಳ್ಮೆ ಕಳೆದುಕೊಳ್ಳದೆ, ಯಾವುದೇ ಸಂದರ್ಭದಲ್ಲಿ ನಿರಾಶೆಗೆ ಒಳಗಾಗದೆ ನಿರಂತರ ಪ್ರಯತ್ನದ ಮೂಲಕ ಗುರಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನ ಶಿಕ್ಷಕ ಎಂ.ಎಚ್. ಸವದತ್ತಿ, ವಿಜ್ಞಾನ ವಿಚಾರಗೋಷ್ಠಿಯ ಉದ್ದೇಶಗಳನ್ನು ವಿವರಿಸಿದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ತಾರ್ಕಿಕ ಚಿಂತನೆ, ಪ್ರಶ್ನಿಸುವ ಗುಣ, ಸಂಶೋಧನಾ ಪ್ರವೃತ್ತಿ ಹಾಗೂ ಸೃಜನಶೀಲತೆಯನ್ನು ಬೆಳೆಸುವುದೇ ವಿಚಾರಗೋಷ್ಠಿಯ ಮುಖ್ಯ ಉದ್ದೇಶವಾಗಿದೆ ಎಂದರು.
*ವಿಜೇತ ವಿದ್ಯಾರ್ಥಿಗಳು*
ಜಿಲ್ಲಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಗದಗ ಗ್ರಾಮೀಣ ವ್ಯಾಪ್ತಿಯ ಶಿರುಂಜಾ ಸರ್ಕಾರಿ ಪ್ರೌಢಶಾಲೆಯ ಕುಮಾರಿ ಭೀಮಾಂಬಿಕ ಮೂಲಿಮನಿ ಪ್ರಥಮ ಸ್ಥಾನ ಪಡೆದರು. ಮುಂಡರಗಿ ತಾಲ್ಲೂಕಿನ ಕದಾಂಪುರ ಸರ್ಕಾರಿ ಪ್ರೌಢಶಾಲೆಯ ಕುಮಾರಿ ಅಶ್ವಿನಿ ಶಾಲಿ ದ್ವಿತೀಯ ಸ್ಥಾನ ಗಳಿಸಿದರೆ, ರೋಣ ತಾಲ್ಲೂಕಿನ ಇಟಗಿ ಪಿಎಂಶ್ರೀ ಆದರ್ಶ ವಿದ್ಯಾಲಯದ ಕುಮಾರಿ ಸಂಜನಾ ಹುಲ್ಲೂರು ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರಾದ ತನುಶ್ರೀ ಬದಿ ಹಾಗೂ ಶಾಯ್ಲಿ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಕೋರಡ್ಡಿ ಸ್ವಾಗತಿಸಿದರು. ಸಂಗಮೇಶ ಪವಾಡಶೆಟ್ಟರ ವಂದನಾರ್ಪಣೆ ನೆರವೇರಿಸಿದರು. ಎಂ.ಎಚ್. ಸವದತ್ತಿ ಕಾರ್ಯಕ್ರಮ ನಿರ್ವಹಿಸಿದರು.
ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

