ಸೊಲಾಪುರ ರೈಲ್ವೆ ವಿಭಾಗೀಯ ಸಲಹಾ ಸಮಿತಿಗೆ ಶಾಂತರೆಡ್ಡಿ ಪೆಠಶಿರೂರ ನೇಮಕ
ಸೊಲಾಪುರ ರೈಲ್ವೆ ವಿಭಾಗೀಯ ಸಲಹಾ ಸಮಿತಿಗೆ ಶಾಂತರೆಡ್ಡಿ ಪೆಠಶಿರೂರ ನೇಮಕ
ಕಲಬುರಗಿ: ಭಾರತೀಯ ರೈಲ್ವೆ ಇಲಾಖೆಯ ಸೊಲಾಪುರ ರೈಲ್ವೆ ವಿಭಾಗೀಯ ಸಲಹಾ ಸಮಿತಿಯ ಸದಸ್ಯರಾಗಿ ಕಲಬುರಗಿಯ ಯುವ ಹೋರಾಟಗಾರ, ಉದ್ಯಮಿ ಹಾಗೂ ಸಮಾಜಮುಖಿ ಚಿಂತನೆಯ ಯುವ ನಾಯಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಗರ ಯುವ ಘಟಕದ ಅಧ್ಯಕ್ಷ ಶಾಂತರೆಡ್ಡಿ ಪೆಠಶಿರೂರ ಅವರನ್ನು ನೇಮಕ ಮಾಡಲಾಗಿದೆ.
ಎರಡು ವರ್ಷಗಳ ಅವಧಿಗೆ ಈ ನೇಮಕಾತಿ ಮಾಡಲಾಗಿದ್ದು, ರೈಲ್ವೆ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳು ಮತ್ತು ಉತ್ತಮ ಸೇವೆ ದೊರೆಯುವಂತೆ ನೋಡಿಕೊಳ್ಳುವುದು ಸಮಿತಿಯ ಪ್ರಮುಖ ಜವಾಬ್ದಾರಿಯಾಗಿದೆ. ರೈಲು ನಿಲ್ದಾಣಗಳಲ್ಲಿನ ಉಪಾಹಾರ ಕೇಂದ್ರಗಳು, ವ್ಯಾಪಾರ ಮಳಿಗೆಗಳು, ಗುತ್ತಿಗೆದಾರರು, ಸ್ವಚ್ಛತಾ ಕಾರ್ಯ, ಎಂಜಿನಿಯರಿಂಗ್ ಕಾಮಗಾರಿಗಳು ಹಾಗೂ ಪ್ರಯಾಣಿಕರಿಗೆ ಸೇವೆ ಒದಗಿಸುವ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸಲಹೆಗಳನ್ನು ನೀಡುವುದು ಸಮಿತಿಯ ಉದ್ದೇಶವಾಗಿದೆ.
ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ನಿರ್ದೇಶನದ ಮೇರೆಗೆ ಶಾಂತರೆಡ್ಡಿ ಪೆಠಶಿರೂರ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಸೊಲಾಪುರ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳ ವತಿಯಿಂದ ವಿಭಾಗೀಯ ವಾಣಿಜ್ಯ ಆದೇಶ ಹೊರಡಿಸಲಾಗಿದೆ.

